ಮಧ್ಯಪ್ರಾಚ್ಯದಲ್ಲಿ ಪ್ರಾರಂಭವಾಗಿರುವ ಇರಾನ್ ಹಾಗೂ ಇಸ್ರೇಲ್-ಅಮೆರಿಕ ನಡುವಿನ ಭೀಕರ ಯುದ್ಧ ನಡೆಯುತ್ತಿದೆ. ಇದರ ಪರಿಣಾಮವಾಗಿ, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರೀ ಏರುಪೇರಾಗಿದೆ. ಈ ಯುದ್ಧದ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ಅಡುಗೆ ಅನಿಲ ಅಂದರೆ LPG ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ತಡೆಯಲು ಹಾಗೂ ಎಲ್ಪಿಜಿ ಸಿಲಿಂಡರ್ಗಳ ಕೃತಕ ಅಭಾವ ಮತ್ತು ಕಾಳಸಂತೆ ತಡೆಯಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಸಿಲಿಂಡರ್ ಬುಕ್ಕಿಂಗ್ ಅವಧಿಯನ್ನು 21 ರಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ. ಗೃಹಬಳಕೆ ಗ್ರಾಹಕರಿಗೆ ಮೊದಲ ಆದ್ಯತೆ ನೀಡಲಾಗುವುದು. ದೇಶೀಯ ಉತ್ಪಾದನೆ ಹೆಚ್ಚಿಸಲು ಮತ್ತು ಹೊಸ ದೇಶಗಳಿಂದ ಎಲ್ಪಿಜಿ ಆಮದು ಮಾಡಿಕೊಳ್ಳಲು ಸರ್ಕಾರ ಕ್ರಮ ಕೈಗೊಂಡಿದೆ.
ಗ್ಯಾಸ್ ಸಿಲಿಂಡರ್ಗಳ ದಾಸ್ತಾನು ಮಾಡುವುದನ್ನು ತಡೆಯಲು, ಎರಡು ಬುಕ್ಕಿಂಗ್ಗಳ ನಡುವಿನ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ.ಈ ಹಿಂದೆ 55 ದಿನಗಳಿಗೊಮ್ಮೆ ಸಿಲಿಂಡರ್ ಬುಕ್ ಮಾಡುತ್ತಿದ್ದವರು, ಈಗ ಯುದ್ಧದ ಭೀತಿಯಿಂದ ಕೇವಲ 15 ದಿನಗಳಲ್ಲೇ ಬುಕ್ಕಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಇದನ್ನು ನಿಯಂತ್ರಿಸಲು ಹೊಸ ನಿಯಮ ಜಾರಿಗೆ ತರಲಾಗಿದೆ. ವಾಣಿಜ್ಯ ಬಳಕೆಯ (Commercial) ಸಿಲಿಂಡರ್ಗಳಿಗಿಂತ ಮನೆ ಬಳಕೆಯ (Domestic) ಗ್ರಾಹಕರಿಗೆ ಮೊದಲ ಆದ್ಯತೆ ನೀಡುವಂತೆ ಸರ್ಕಾರ ಸೂಚನೆ ನೀಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ “ಗ್ಯಾಸ್ ಸಿಲಿಂಡರ್ ಕೊರತೆಯಾಗಲಿದೆ” ಎಂಬ ಊಹಾಪೋಹಗಳು ಮತ್ತು ಸುಳ್ಳು ಸುದ್ದಿಗಳು ಗೃಹಬಳಕೆಯ ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿವೆ. ಯುದ್ಧದ ಪರಿಸ್ಥಿತಿಯಿಂದಾಗಿ ಅಡುಗೆ ಅನಿಲ ಸಿಗದೇ ಹೋದರೆ ಜೀವನ ನಿರ್ವಹಣೆ ಕಷ್ಟವಾಗಬಹುದು ಎಂಬ ಚಿಂತೆ ಜನರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ, ಗ್ರಾಹಕರ ಗೊಂದಲಕ್ಕೆ ತೆರೆ ಎಳೆಯಲು ಮುಂದಾಗಿರುವ ಭಾರತ್ ಗ್ಯಾಸ್ ಮತ್ತು ಎಚ್ಪಿ ಗ್ಯಾಸ್ ಕಂಪನಿಗಳು, ಎಸ್ಎಂಎಸ್ ಹಾಗೂ ವಾಟ್ಸ್ಆಪ್ ಸಂದೇಶಗಳ ಮೂಲಕ ಅಧಿಕೃತ ಸ್ಪಷ್ಟನೆ ನೀಡಿವೆ. ಯಾವುದೇ ಆಧಾರರಹಿತ ವದಂತಿಗಳಿಗೆ ಕಿವಿಗೊಡದಂತೆ ಮತ್ತು ಆತಂಕಕ್ಕೊಳಗಾಗದಂತೆ ಕಂಪನಿಗಳು ತಮ್ಮ ಗ್ರಾಹಕರಲ್ಲಿ ವಿಶೇಷ ಮನವಿ ಮಾಡಿಕೊಂಡಿವೆ.
ಕಂಪನಿಗಳು ಗ್ರಾಹಕರಿಗೆ ನೀಡಿದ ಪ್ರಮುಖ ಅಂಶಗಳು ಎಂದರೆ ಗೃಹ ಬಳಕೆಗೆ ಯಾವುದೇ ರೀತಿಯ ಸಿಲಿಂಡರ್ ಕೊರತೆ ಉಂಟಾಗಿಲ್ಲ ಎಂದಿದ್ದಾರೆ. ಗೃಹ ಬಳಕೆಯ ಸಿಲಿಂಡರ್ಗಳ ಸ್ಟಾಕ್ ಸಾಕಷ್ಟಿದೆ, ಭಾರತ್ ಗ್ಯಾಸ್ ಮತ್ತು ಎಚ್ಪಿ ಗ್ಯಾಸ್ ಎರಡೂ ಕಂಪನಿಗಳು ತಮ್ಮ ಗೋದಾಮುಗಳಲ್ಲಿ ಗೃಹ ಬಳಕೆಯ ಸಿಲಿಂಡರ್ಗಳ ಸಾಕಷ್ಟು ಸ್ಟಾಕ್ ಇರುವುದಾಗಿ ದೃಢಪಡಿಸಿವೆ. ಗ್ರಾಹಕರು ಭಯಪಡುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ.



