ಮಡಿಕೇರಿ : ವಿವಿಧ ಪ್ರಾಂತ್ಯವಾಗಿ ಹರಿದು ಹಂಚಿ ಹೋಗಿದ್ದ ದೇಶವನ್ನು ಒಗ್ಗೂಡಿಸಿ ಏಕತೆಯ ಮೂಲಕ ಬಲಿಷ್ಠ ಭಾರತ ದೇಶವನ್ನು ಕಟ್ಟುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಬಹಳ ಮಹತ್ವದ ಪಾತ್ರವನ್ನು ವಹಿಸಿದ್ದರು ಎಂದು ವಿರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ದಾನ ಅಭಿಪ್ರಾಯಪಟ್ಟರು.
ಕಾಲೇಜಿನಲ್ಲಿ ನಡೆದ ಏಕತಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಉಕ್ಕಿನ ಮನುಷ್ಯ ಪಟೇಲರು ದೇಶವನ್ನು ಒಗ್ಗೂಡಿಸಲು ಪಟ್ಟ ಶ್ರಮದ ಪ್ರತಿಫಲವಾಗಿ ನಾವಿಂದು ಒಗ್ಗೂಡಿದ ಭಾರತವನ್ನು ಕಾಣುತ್ತಿದ್ದೇವೆ. ಅವರು ಪಟ್ಟ ಶ್ರಮಕ್ಕೆ ದೇಶವಿಂದು ಅವರ ಜನ್ಮ ದಿನವನ್ನು ಏಕತಾ ದಿನವೆಂದು ಸ್ಮರಿಸುತ್ತಿದೆ. ದೇಶದ ಏಕತೆ ಹಾಗೂ ಅಭಿವೃದ್ಧಿಯ ಬಗ್ಗೆ ಅವರು ಕಂಡ ಕನಸನ್ನು ನನಸು ಮಾಡುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ. ಜಾತಿ ಧರ್ಮದ ಹಿನ್ನೆಲೆಯಲ್ಲಿ ನಾವು ಬಡಿದಾಡಿಕೊಳ್ಳದೆ, ನಾವೆಲ್ಲ ಭಾರತೀಯರು ಎಂಬ ಭಾವನೆಯನ್ನು ಬೆಳೆಸಿಕೊಂಡು ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಬೇಕೆಂದರು.
ವಿದ್ಯಾರ್ಥಿಗಳಿಗೆ ಏಕತಾ ದಿನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾಲೇಜಿನ ಎನ್ಎಸ್ಎಸ್ ಯೋಜನಾಧಿಕಾರಿ ಸುನಿಲ್ ಕುಮಾರ್, ಉಪನ್ಯಾಸಕರಾದ ಸೋಮಣ್ಣ, ಅಂಬಿಕಾ, ನಿರ್ಮಿತಾ, ಪ್ರಿಯಾ, ಬೋಜಮ್ಮ, ವಿದ್ಯಾರ್ಥಿಗಳು ಹಾಜರಿದ್ದರು.




