ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಲಗ್ಗೆ ಇಟ್ಟ ನಟಿ ರಶ್ಮಿಕಾ ಮಂದಣ್ಣ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಈಗ ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ. ಕೊಡವ ಸಮುದಾಯದಿಂದ ಸಿನಿಮಾಗೆ ಬಂದವರಲ್ಲಿ ನಾನೇ ಮೊದಲು ಎಂದು ಹೇಳುವ ಮೂಲಕ ಮತ್ತೊಂದು ವಿವಾದ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ಹಿರಿಯ ಪತ್ರಕರ್ತೆ ಬರ್ಖಾ ದತ್ ಅವರಿಗೆ ರಶ್ಮಿಕಾ ಮಂದಣ್ಣ ಸಂದರ್ಶನವೊಂದನ್ನು ನೀಡಿದ್ದರು. ಈ ಸಂದರ್ಶನದಲ್ಲಿ ತಮ್ಮನ್ನು ತಾವು ಹೊಗಳಿಕೊಳ್ಳುವ ಭರದಲ್ಲಿ, ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದ ಏಕೈಕ ಮಹಿಳೆ ನಾನು ಎಂದು ರಶ್ಮಿಕಾ ಮಾತನಾಡಿದ್ದರು. ರಶ್ಮಿಕಾ ಅವರಾಡಿದ ಈ ಮಾತು ಈಗ ವಿವಾದ ವಾಗಿದೆ.
ಕೊಡಗಿನಿಂದ ಇಲ್ಲಿಯವರೆಗೆ ಹಲವಾರು ಜನ ಚಿತ್ರರಂಗಕ್ಕೆ ಬಂದಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ಮಿಂಚಿದ್ದಾರೆ. ಕನ್ನಡ ಚಿತ್ರರಂಗದ ಹೆಮ್ಮೆಯ ನಾಯಕಿ ಪ್ರೇಮಾ ಅವರಿಗಿಂತ ಉದಾಹರಣೆ ಬೇಕಾ ? ಆದರೆ.. ಇದ್ಯಾವುದು ರಶ್ಮಿಕಾಗೆ ಪರಿವೆ ಇಲ್ಲ. ಹೀಗಾಗಿಯೇ ಹಲವರು ಈಗ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ‘ ಕನ್ನಡ’ ವಾಹಿನಿಗೆ ಪ್ರತಿಕ್ರಿಯೆಯನ್ನು ನೀಡಿರುವ ಪ್ರೇಮಾ ಎಲ್ಲ ವಿಚಾರ ಜನರಿಗೆ ಗೊತ್ತು, ಇನ್ನೇನು ನಾನು ಹೇಳುವುದು ಎಂದು ಹೇಳಿದ್ದಾರೆ. ಈಗಾಗಲೇ ಕಾಮೆಂಟ್‌ಗಳ ಮೂಲಕ ಜನ ಉತ್ತರ ಕೊಟ್ಟಿದ್ದಾರೆ. ಯಾರು ಬಂದಿದ್ದರು ಯಾರು ಬಂದಿಲ್ಲ ಎನ್ನುವುದು ಎಲ್ಲರಿಗೆ ಗೊತ್ತಿರುವ ವಿಚಾರ ಎಂದು ಹೇಳಿರುವ ಪ್ರೇಮಾ, ನನಗಿಂತ ಮೊದಲು ಚಾಮರಾಜ್‌ಪೇಟೆಯಲ್ಲಿ ವಾಸ ಮಾಡುತ್ತಿದ್ದ ನಮ್ಮ ಕೂರ್ಗ್‌ನವಾರದ ಶಶಿಕಲಾ ಎನ್ನುವವರು ಚಿತ್ರರಂಗಕ್ಕೆ ಬಂದಿದ್ದರು, ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದರು. ನಾನು ನಾಯಕಿಯಾಗಿ ಬೆಳೆದೆ ಅಷ್ಟೇ ಎಂದು ಹೇಳಿದ್ಧಾರೆ.
ಜನ ನನಗೆ ಪ್ರಶಸ್ತಿ ನೀಡಿದ್ಧಾರೆ ಇದಕ್ಕಿಂತ ಇನ್ನೇನು ನನಗೆ ಬೇಕು ಎಂದಿರುವ ಪ್ರೇಮಾ, ಯಾರೋ ಏನೋ ಮಾತನಾಡಿದರು ಅಂತ ನಾನು ತಲೆ ಕೆಡಿಸಿಕೊಂಡು ಕೂರುವ ವ್ಯಕ್ತಿ ಅಲ್ಲ ಎಂದು ಹೇಳಿದ್ದಾರೆ. ರಾಜ್ ಕುಮಾರ್ ಸರ್.. ವಿಷ್ಣುವರ್ಧನ್ ಸರ್ ಅವರು ‘ಎಷ್ಟೇ ಮೇಲೆ ಹೋದರು ನೀನು ಚಿಕ್ಕವನಾಗಿರು’ ಎನ್ನುವ ಪಾಠವನ್ನು ನನಗೆ ಹೇಳಿ ಕೊಟ್ಟಿದ್ಧಾರೆ ನಾನು ಆ ಪಾಠ ಮರೆತಿಲ್ಲ ನನ್ನ ಜನ ಇಲ್ಲಿಯವರೆಗೆ ನೋಡಿದ್ದಾರೆ, ಮೆಚ್ಚಿದ್ದಾರೆ.. ಅವರು ಕೊಟ್ಟಿರುವ ಪ್ರಶಸ್ತಿ ಪ್ರೀತಿ ಪ್ರೋತ್ಸಾಹ ಎಲ್ಲ ಇದ್ದ ಮೇಲೆ ನನಗೆ ಇನ್ನೇನು ಬೇಡ ಎಂದು ಕೂಡ ನಟಿ ಪ್ರೇಮಾ ಹೇಳಿದ್ದಾರೆ.
ಜನರಿಗೆ ಇದರ ಬಗ್ಗೆ ಗೊತ್ತಿದೆ, ನಾನೆಂಥ ಹೇಳೋದು ಇದರಲ್ಲಿ, ಅವರ ಮಟ್ಟಿಗೆ ನಾವು ಮಾತನಾಡೋದಕ್ಕೆ ಆಗೋದಿಲ್ಲ. ನಾವು ನಾವೇ, ಅವರು ಅವರೇ ಎಂದು ಹೇಳಿದ್ದಾರೆ. ಜನ ಹೇಗೆ ಮಾತನಾಡ್ತಾರೆ ಎನ್ನುವುದು ಕೊಡಗಿನ ಜನಕ್ಕೆ ಗೊತ್ತು, ನಾವು ಮಾತನಾಡುವುದಕ್ಕಿಂತ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಕೂಡ ಪ್ರೇಮಾ ಹೇಳಿದ್ದಾರೆ.