ಕರ್ನಾಟಕ ಸರ್ಕಾರವು ವಿವಿಧ ಜಾತಿಗಳ, ವಿಶೇಷವಾಗಿ ಹಿಂದುಳಿದ ಮತ್ತು ಅಳಿವಿನ ಅಂಚಿನಲ್ಲಿರುವ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ದತ್ತಾಂಶವನ್ನು ಸಂಗ್ರಹಿಸಲು ಈ ಸಮೀಕ್ಷೆಯನ್ನು ಸೆಪ್ಟೆಂಬರ್ ತಿಂಗಳ 22 ರಿಂದ ಮುಂದಿನ ಅಕ್ಟೋಬರ್ ತಿಂಗಳ 7ರವರೆಗೆ ನಡೆಸುತ್ತಿದೆ. ಈ ಸಮೀಕ್ಷೆಯು ಈ ಕೆಳಗಿನ ವಿಷಯಗಳಿಗೆ ಸಂಬಂಧಿಸಿದಂತೆ ನೀತಿ ನಿರೂಪಣೆ ರೂಪಿಸಲು ಪ್ರಮುಖ ಪಾತ್ರ ವಹಿಸುತ್ತದೆ.
ಉತ್ತಮ ನೀತಿ ಯೋಜನೆ: ಈ ಸಮೀಕ್ಷೆಯು ವಿಭಿನ್ನ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಒಳನೋಟವನ್ನು ಸರಕಾರಕ್ಕೆ ಒದಗಿಸುತ್ತದೆ. ಇದರಿಂದ ಸರ್ಕಾರವು ಈ ಸಮುದಾಯಗಳಿಗೆ ಅಭಿವೃದ್ಧಿ ಯೋಜನೆಗಳು, ಶಿಕ್ಷಣ ಸಹಾಯ, ಸಾಲ ಯೋಜನೆಗಳು ಮತ್ತು ಉದ್ಯೋಗ- ಶಿಕ್ಷಣ ಮೀಸಲಾತಿ ನೀತಿಗಳನ್ನು ಗುರಿಯಾಗಿಟ್ಟುಕೊಂಡು ಕಾನೂನು ರೂಪಿಸಲು ನಿಖರವಾದ ದತ್ತಾಂಶದ ಸಂಪನ್ಮೂಲಗಳು ಮತ್ತು ಅವಕಾಶಗಳನ್ನು ಸಮರ್ಪಕವಾಗಿ ಹಂಚಿಕೆಯಾಗುವಂತೆ ಖಾತರಿಪಡಿಸಲು ಹೆಚ್ಚು ಸಹಾಯವಾಗುತ್ತದೆ.
ಮೀಸಲಾತಿ ವ್ಯವಸ್ಥೆಯನ್ನು ಪರಿಶೀಲಿಸುವುದು: ಈ ಸಮೀಕ್ಷೆಯ ಮತ್ತೊಂದು ಗುರಿಯು ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಪ್ರಸ್ತುತ ಮೀಸಲಾತಿಯ ವ್ಯವಸ್ಥೆಯನ್ನು ಮೌಲ್ಯಮಾಪನ ಮಾಡುವುದು. ಸಮೀಕ್ಷೆಯಲ್ಲಿ ದೊರೆಯುವ ದತ್ತಾಂಶವು ಕೆಲವು ಸಮುದಾಯಗಳ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಕಡಿಮೆ ಪ್ರಾತಿನಿಧ್ಯವನ್ನು ಸರಿಪಡಿಸಲು ಮೀಸಲಾತಿ ಶೇಕಡಾವಾರನ್ನು ಹೊಂದಾಣಿಕೆಗೆ ಮಾಡಲು ಸರಕಾರಕ್ಕೆ ಹೆಚ್ಚು ನೆರವಾಗುತ್ತದೆ.
ರಾಜಕೀಯ ಪ್ರಾತಿನಿಧ್ಯ: ಈ ಸಮೀಕ್ಷೆಯಲ್ಲಿ ತಿಳಿಯುವ ಜಾತಿಗಳ ದತ್ತಾಂಶವು ಕ್ಷೇತ್ರಗಳ ರಚನೆ ಮತ್ತು ಮೀಸಲಾತಿ ನಿಗದಿಯಂತಹ ರಾಜಕೀಯ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಸಣ್ಣ ಸಣ್ಣ ಸಮುದಾಯಗಳಿಗೆ ನ್ಯಾಯಯುತ ಪ್ರಾತಿನಿಧ್ಯ ಖಾತರಿಯಾಗುತ್ತದೆ.
ಕೊಡವ ಮುಸ್ಲಿಂ’ ಒಬ್ಬರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಮ್ಮನ್ನು ಹೇಗೆ ಗುರುತಿಸಬೇಕು?
ಕೊಡಗಿನ ಅಪ್ಪಟ ಮೂಲನಿವಾಸಿಗರಾಗಿರುವ ಕೊಡವ ಮುಸ್ಲಿಮರಾಗಿ ನೀವು ತಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ಗುರುತನ್ನು ಹೇಳಿಕೊಳ್ಳಲು ಬಯಸುತ್ತೀರಿ ಮತ್ತು ಈ ಸಮೀಕ್ಷೆಯಲ್ಲಿ ನೀವು ಬಳಸಲಾದ ವರ್ಗೀಕರಣಗಳನ್ನು ಆಧರಿಸಿ ನಿಮ್ಮ ಗುರುತು ಅವಲಂಬಿತವಾಗಿರುತ್ತದೆ.
ಆಯ್ಕೆ 1: ಕೊಡವ ಮುಸ್ಲಿಂ
“ಕೊಡವ ಮುಸ್ಲಿಂ” ಎಂದು ಗುರುತಿಸುವುದರಿಂದ ಕೊಡಗಿನ (ಕೂರ್ಗ್) ಒಂದು ವಿಶಿಷ್ಟ ಗುಂಪಾದ ಕೊಡವ ಮುಸ್ಲಿಮರ ಸಾಂಸ್ಕೃತಿಕ ಮತ್ತು ಜನಾಂಗೀಯ ಗುರುತನ್ನು ಒತ್ತಿಹೇಳುತ್ತದೆ. ಇದಕ್ಕೆ ತನ್ನದೇ ಆದ ಭಾಷೆ, ಪರಂಪರೆ ಮತ್ತು ಸಂಪ್ರದಾಯಗಳಿವೆ. ಜೊತೆಗೆ ಇಸ್ಲಾಮಿಕ್ ಸಿದ್ಧಾಂತದಲ್ಲಿ ಅಚಲವಾದ ನಂಬಿಕೆ ಹೊಂದಿರುವುದರಿಂದ “ಕೊಡವ ಮುಸ್ಲಿಂ” ಎಂದು ನೀವು ಗುರುತಿಸಿಕೊಂಡರೆ ನಿಮ್ಮ ‘ಮುಸ್ಲಿಂ’ ಎಂಬ ಹೆಗ್ ಗುರುತು ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ. ಅದು ಸಮೀಕ್ಷೆಯಲ್ಲಿ ನಿಮ್ಮ ನಿರ್ದಿಷ್ಟ ಸಮುದಾಯವನ್ನು ಗುರುತಿಸದೆ. ಇದರಿಂದ ಕೊಡವ ಮುಸ್ಲಿಮರು ತಮ್ಮ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಕಾಪಾಡಿಕೊಂಡಂತಾಗುತ್ತದೆ.
‘ಕೊಡವ ಮುಸ್ಲಿಮರು’ ಇದೀಗ ಕರ್ನಾಟಕ ಸರಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ರಲ್ಲಿ ಭವಿಷ್ಯದ ಬಗ್ಗೆ ಸರಿಯಾಗಿ ಚಿಂತಿಸಬೇಕು. ನಂತರ ಸಮೀಕ್ಷೆಯ ಡಿಜಿಟಲ್ ಫಾರ್ಮ್ ಭರ್ತಿ ಮಾಡುವಾಗ ಈ ಸೂಚನೆಗಳನ್ನು ಅನುಸರಿಸಿ:
ಧರ್ಮ:ಕಾಲಮ್ ಸಂಖ್ಯೆ 8: “ಇಸ್ಲಾಂ” ಎಂದು ದಾಖಲಿಸಿ.
ಜಾತಿ: ಕಾಲಮ್ ಸಂಖ್ಯೆ 9: “ಕೊಡವ ಮುಸ್ಲಿಂ (A0702)” ಎಂದು ದಾಖಲಿಸಿ.
ಉಪ-ಜಾತಿ: ಕಾಲಮ್ ಸಂಖ್ಯೆ 10: “ಅನ್ವಯವಾಗದು” ಎಂದು ದಾಖಲಿಸಿ.
ಮಾತೃಭಾಷೆ: ಕಾಲಮ್ ಸಂಖ್ಯೆ 15: “ಇತರೆ” ಎಂದು ಆಯ್ಕೆಮಾಡಿ (ಫಾರ್ಮ್‌ನಲ್ಲಿ ಆಯ್ಕೆ ಸಂಖ್ಯೆ 14 ಎಂದು ನಿರ್ದಿಷ್ಟಪಡಿಸಲಾಗಿದೆ). ಈ ಆಯ್ಕೆಯ ಪಕ್ಕದಲ್ಲಿ ಒದಗಿಸಲಾದ ಜಾಗದಲ್ಲಿ “ಪಯಕ” ಎಂದು ಸ್ಪಷ್ಟವಾಗಿ ಬರೆಸಿ.
ಆಯ್ಕೆ 2: ಮುಸ್ಲಿಂ
ಕೇವಲ “ಮುಸ್ಲಿಂ” ಎಂದು ಗುರುತಿಸುವುದರಿಂದ ನಿಮ್ಮ ಧಾರ್ಮಿಕ ಗುರುತಿಗೆ ಆದ್ಯತೆ ನೀಡಲಾಗುತ್ತದೆಯೇ ಹೊರತು ಕೊಡಗಿನ ಮೂಲ ನಿವಾಸಿ ಜನಾಂಗೀಯ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಕಡೆಗಣಿಸಿದಂತಾಗುತ್ತದೆ. ಏಕೆಂದರೆ, ಇದು ನಿಮ್ಮನ್ನು ವಿಶಾಲವಾದ ಮುಸ್ಲಿಂ ವರ್ಗದಡಿಯಲ್ಲಿ ಗುಂಪುಗೂಡಿಸುತ್ತದೆ. ಇದರಿಂದ ನೀವು ಕೇವಲ ವಿಶಾಲವಾದ ಮುಸ್ಲಿಂ ವರ್ಗದ ಅಡಿಯಲ್ಲಿರುವ ಸಾಮಾನ್ಯ ಸೌಲಭ್ಯಗಳಿಗೆ ಮಾತ್ರ ಅರ್ಹರಾಗಿರುತ್ತೀರಿ ಮತ್ತು ನಿಮ್ಮ ‘ಕೊಡವ ಮುಸ್ಲಿಂ’ ಎಂಬ ‘ಸ್ವಂತಿಕೆ’ಯ ಗುರುತು ಕಾಲಾನಂತರದಲ್ಲಿ ಮರೆಯಾಗಿ ಹೋಗುತ್ತದೆ.
ಕೊಡವ ಮುಸ್ಲಿಂ’ ಎಂದು ಗುರುತಿಸುವುದರಿಂದ ಯಾವ ಪ್ರಯೋಜನಗಳಿವೆ?
1. ನಿರ್ದಿಷ್ಟ ಗುರುತು: ‘ಕೊಡವ ಮುಸ್ಲಿಂ’ ಎಂದು ಗುರುತಿಸುವುದರಿಂದ ನಿಮ್ಮ ಸಮುದಾಯದ ವಿಶಿಷ್ಟ ಸಾಮಾಜಿಕ- ಶೈಕ್ಷಣಿಕ ವಿವರವನ್ನು ದಾಖಲಿಸಲು ಸಹಾಯವಾಗುತ್ತದೆ. ಇದು ಶೈಕ್ಷಣಿಕ ಧನಸಹಾಯ, ಉದ್ಯೋಗ ಮೀಸಲಾತಿ ಅಥವಾ ಸಾಲ ಯೋಜನೆಗಳಂತಹ ನಿಮ್ಮ ಸಮುದಾಯದ ನಿರ್ದಿಷ್ಟ ಅಗತ್ಯಗಳಿಗೆ ಗುರಿಯಾಗಿಟ್ಟುಕೊಂಡ ಸರ್ಕಾರಿ ಯೋಜನೆಗಳಿಗೆ ಕಾರಣವಾಗಬಹುದು.
ಅಲ್ಲದೆ, ಇದು ಸಮೀಕ್ಷೆ ದತ್ತಾಂಶದಲ್ಲಿ ನಿಮ್ಮ ಸಮುದಾಯದ ಗೋಚರತೆಯನ್ನು ಬಲಪಡಿಸುತ್ತದೆ. ಭವಿಷ್ಯದಲ್ಲಿ ಈ ಸಮುದಾಯದ ನೀತಿ ರೂಪಿಸುವಿಕೆ ಮತ್ತು ಗುರುತಿಗೆ ಸಹಾಯ ಮಾಡುತ್ತದೆ.
2. ಮೀಸಲಾತಿ ಮತ್ತು ಯೋಜನೆ ಅರ್ಹತೆ: ಕೊಡವ ಮುಸ್ಲಿಮರು ಈ ಸಮೀಕ್ಷೆಯಲ್ಲಿ ತಮ್ಮ ನಿಖರವಾದ ಮಾಹಿತಿಯನ್ನು ನೀಡಿದರೆ ಭವಿಷ್ಯದಲ್ಲಿ ಕೊಡವ ಮುಸ್ಲಿಮರು ಇತರ ಹಿಂದುಳಿದ ವರ್ಗಗಳ (OBC) ಅಥವಾ ಇತರ ಮೀಸಲಾತಿ ವರ್ಗಗಳಡಿಯಲ್ಲಿ ವರ್ಗೀಕರಿಸಲ್ಪಡುವ ಸಾಧ್ಯತೆಗಳು ಹೆಚ್ಚಿದೆ. ಹೀಗೆ ಗುರುತಿಸಲ್ಪಟ್ಟರೆ ನೀವು ಮತ್ತು ನಿಮ್ಮ ಕುಟುಂಬವು ಭವಿಷ್ಯದಲ್ಲಿ ಉದ್ಯೋಗ ಮೀಸಲಾತಿ, ಶೈಕ್ಷಣಿಕ ಸೌಲಭ್ಯಗಳು, ಸಬ್ಸಿಡಿಗಳು ಅಥವಾ ಸಾಲ ಯೋಜನೆಗಳಿಗೆ ಪ್ರತ್ಯೇಕವಾಗಿ ಅರ್ಹರಾಗಬಹುದು.
ಒಂದು ವೇಳೆ , ಕೊಡವ ಮುಸ್ಲಿಂ ಸಮುದಾಯದ ವ್ಯಕ್ತಿಗಳು ಸಮೀಕ್ಷೆಯಲ್ಲಿ ತಮ್ಮ ವಿವರಗಳನ್ನು “ಕೊಡವ ಮುಸ್ಲಿಂ” ಎಂದು ದಾಖಲಿಸಿದರೆ, ಅವರು ತಕ್ಷಣವೇ ವಿಶಾಲವಾದ “ಮುಸ್ಲಿಂ” ವರ್ಗದಡಿಯಲ್ಲಿ ಇರುವ ಸರ್ಕಾರಿ ಯೋಜನೆಗಳಿಂದ (ಉದಾಹರಣೆಗೆ, ಮೀಸಲಾತಿ ಅಥವಾ ಸಾಲ ಯೋಜನೆಗಳು) ಪ್ರಯೋಜನ ಪಡೆಯುವುದು ನಿಲ್ಲುವುದಿಲ್ಲ. (ಏಕೆಂದರೆ ಅವರ ವಿಶಿಷ್ಟ ವರ್ಗೀಕರಣಕ್ಕೆ ಅರ್ಹತೆಗೆ ಪ್ರತ್ಯೇಕ ಗುರುತಿನ ಅಗತ್ಯವಿರಬಹುದು, ಇದು ಇನ್ನೂ ಖಾತರಿಯಾಗಿಲ್ಲ.)
3. ಸಾಂಸ್ಕೃತಿಕ ಗುರುತು: ‘ಕೊಡವ ಮುಸ್ಲಿಂ’ ಎಂದು ಗುರುತಿಸುವುದರಿಂದ ಸಾಮೂದಾಯಿಕ ವೈಶಿಷ್ಟತೆ, ಸಂಸ್ಕೃತಿ ಮತ್ತು ಭಾಷೆಯನ್ನು ಕಾಪಾಡಲು ಮತ್ತು ಉತ್ತೇಜಿಸಲು ಸಹಾಯವಾಗುತ್ತದೆ. ಒಂದು ವೇಳೆ ಕೊಡವ ಮುಸ್ಲಿಮರು ವಿಶಾಲವಾದ “ಮುಸ್ಲಿಂ” ವರ್ಗದಲ್ಲಿ ಸೇರ್ಪಡೆಯಾದರೆ ಅವರ ಸಾಮೂದಾಯಿಕ ವೈಶಿಷ್ಟತೆ, ಕೇಂದ್ರ ಸರಕಾರದ ಪ್ರತ್ಯೇಕ ಸವಲತ್ತು ಮರೆಯಾಗಬಹುದು.
ಶಿಫಾರಸು: ಕೊಡವ ಮುಸ್ಲಿಮರು ಕರ್ನಾಟಕದ OBC ಅಥವಾ ಜಾತಿ ಸಮೀಕ್ಷೆಯ ಪಟ್ಟಿಗಳಲ್ಲಿ ಸೇರ್ಪಡೆಯಾದರೆ, ಸರಿಯಾದ ಪ್ರಾತಿನಿಧ್ಯವನ್ನು ಖಾತರಿಪಡಿಸಲು, ನಿಮ್ಮ ಮುಸ್ಲಿಂ ಗುರುತನ್ನು ಕಾಪಾಡಿಕೊಳ್ಳಲು ಮತ್ತು ಭವಿಷ್ಯದಲ್ಲಿ ನಿಮ್ಮ ಸಮುದಾಯಕ್ಕೆ ವಿಶೇಷವಾದ ಸೌಲಭ್ಯಗಳಿಗೆ ಗುರಿಯಾಗಿಟ್ಟ ಸಾಲ ಯೋಜನೆಗಳು ಅಥವಾ ಮೀಸಲಾತಿಗಳಿಗೆ ಸಂಭವನೀಯ ಪ್ರವೇಶವನ್ನು ಪಡೆಯಲು “ಕೊಡವ ಮುಸ್ಲಿಂ” ಎಂದು ಗುರುತಿಸಬೇಕು. ಆದರೆ, “ಕೊಡವ ಮುಸ್ಲಿಂ” ಎಂದು ದಾಖಲಿಸುವುದರಿಂದ ನೀವು ತಕ್ಷಣವೇ ವಿಶಾಲವಾದ “ಮುಸ್ಲಿಂ” ವರ್ಗದಡಿಯಲ್ಲಿ ಇರುವ ಸರ್ಕಾರಿ ಯೋಜನೆಗಳಿಂದ ಮುಕ್ತರಾಗುವುದಿಲ್ಲ. ಏಕೆಂದರೆ ನಿಮ್ಮ ಸಮುದಾಯದ ವಿಶಿಷ್ಟ ವರ್ಗೀಕರಣದ ಅರ್ಹತೆ ಅಂತಿಮಗೊಳ್ಳಲು ಕಾಲಾವಕಾಶ ಬೇಕಾಗುತ್ತದೆ.
ಆದ್ದರಿಂದ, ಈ ಸಮೀಕ್ಷೆ ಕೊಡವ ಮುಸ್ಲಿಂ ಸಮುದಾಯದಂತೆ ಮೂಲ ನಿವಾಸಿ ಸಮುದಾಯಗಳಿಗೆ ಹೆಚ್ಚು ಮಹತ್ವಪೂರ್ಣವಾಗಿದೆ.
✍️ ಹಿದಾಯತುಲ್ಲಾ ಕುವೇಂಡ
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವೃತ್ತಿನಿರತ ವಕೀಲರು, ಬೆಂಗಳೂರು.



