ಕೊಡಗಿನ ಭರವಸೆಯ ಪ್ರತಿಭೆ ವರ್ತ ಕಾಳಿ ಕಿರುಚಿತ್ರದ ನಿರ್ದೇಶಕ ಕೃತಾರ್ಥ ಮಂಡೆಕುಟ್ಟಂಡ

kritartha mandekuttanda

Share this post :

ಕೊಡಗಿನ ಹಲವಾರು ಅಪೂರ್ವ ಪ್ರತಿಭೆಗಳು ಸಿನಿಮಾ ರಂಗದಲ್ಲಿ ಹಲವಷ್ಟು ಸಾಧನೆ ಮಾಡುತ್ತಿದ್ದಾರೆ. ಅದರಲ್ಲಿ ಈಗ ಹೊಸ ಸೇರ್ಪಡೆ ಕೊಡಗಿನ ಯುವ ಪ್ರತಿಭಾನ್ವಿತ ಕೃತಾರ್ಥ್ ಮಂಡೆಕುಟ್ಟಂಡ. ‘ವರ್ತ ಕಾಳಿ’ ಎಂಬ ಕಿರು ಚಿತ್ರಕಥೆ (Short film) ಹಾಗು ನಿರ್ದೇಶನವನ್ನು ಮಾಡಿದ್ದಾರೆ ಕೃತಾರ್ಥ್ ಮಂಡೆಕುಟ್ಟಂಡ ಅವರು. ತಮ್ಮ ಸಂಪೂರ್ಣ ಪರಿಶ್ರಮವನ್ನು ಹಾಕಿ, ನಿದೇ೯ಶನದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. 14:59 ನಿಮಿಷಗಳ ಕಾಲ ಇರುವ ಕಿರು ಚಿತ್ರವು ಪ್ರತಿ ಕ್ಷಣವೂ ರಣ ರೋಚಕವಾಗಿದೆ. ಕಿರು ಚಿತ್ರವು ಪರಿಸರ ಸಂರಕ್ಷಣೆ, ಕೊಡವರಲ್ಲಿ ಇರುವ ಪ್ರಕೃತಿಯ ಆರಾಧನೆ, ಆಹಾರ ಸಂಸ್ಕೃತಿಯ ಸೊಗಡನ್ನು ಅಚ್ಚು ಕಟ್ಟಾಗಿ ದೃಶ್ಯಳಲ್ಲಿ ಕಟ್ಟಿಕೊಟ್ಟಿದ್ದಾರೆ.

ಈ ಕಿರು ಚಿತ್ರವು ಆ್ಯಂಟ್ ಆಂಡ್ ಶುಗರ್ ಪ್ರೊಡಕ್ಷನ್ ನಿಂದ ಹೊರ ಹೊಮ್ಮಿದ್ದು, ಡಾ. ಸಹನಾ ಅವರು ಬಂಡವಾಳ ಹೂಡಿದ್ದಾರೆ. ಮುಖ್ಯ ತಾರಾ ಗಣದಲ್ಲಿ ಭರತ್ ಜಿ.ಬಿ, ಧಾಮಿನಿ ಧನ್ ರಾಜ್ , ಅಮಿತ್ ಗಂಗೂರ್ ಅವರುಗಳು ಸಲೀಸಾಗಿ ನಿಭಾಯಿಸಿ ಮನೋಜ್ಞವಾಗಿ ನಟಿಸಿದ್ದಾರೆ. ಈ ಕಿರು ಚಿತ್ರವು ಅವಧಿಯಲ್ಲಿ ಚಿಕ್ಕದಾಗಿದ್ದರೂ ಕೂಡ ಸಂದೇಶದಲ್ಲಿ ಅಗಾಧ ವಿಚಾರಧಾರೆಯನ್ನು ನಮ್ಮ ಮನಕ್ಕೆ ಇಳಿಸುವ ಯತ್ನವನ್ನು ಮಾಡಿದೆ ಈ ತಂಡ. ಈ ಕಿರು ಚಿತ್ರ ನೋಡುತ್ತಾ ಹೋದಂತೆ ಕೊಡಗಿನಲ್ಲಿ ಇರುವ ಅರಣ್ಯ ಸಿರಿ, ದೇವರ ಕಾಡುಗಳು ನಮಗೇ ತಿಳಿಯದಂತೆ ಜ್ಞಾಪಕಕ್ಕೆ ಬರುತ್ತದೆ.

short film

ಈ ಕಿರುಚಿತ್ರಕ್ಕೆ ಸೂಕ್ತ ಸಂಭಾಷಣೆಯನ್ನು ರಾಘವೇಂದ್ರ ರಾವ್ ಬರೆದಿದ್ದಾರೆ. ಸಿನಿಮಾಟೋಗ್ರಾಫಿಯನ್ನು ಸಾಗರ್. ಎನ್ ಮಾಡಿದ್ದಾರೆ. ಕಳೆದ ವರ್ಷ ಮೈಸೂರು ದಸರಾದ ಕಿರುಚಿತ್ರ ಸ್ಪರ್ಧೆಯಲ್ಲಿ ಸ್ಪರ್ಧಿಸಿ, ಮೆಚ್ಚುಗೆಗೆ ಪಾತ್ರವಾಗಿತ್ತು. ಬೆಸ್ಟ್ ಸಿನಿಮಾಟೋಗ್ರಾಫಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು. ಒಳ್ಳೆಯ ಜನ ಮೆಚ್ಚುಗೆಯನ್ನು ಕೂಡ ಪಡೆಯಿತು. ವರ್ತಿಕಾಳಿ ಕಿರುಚಿತ್ರವು ಲಂಡನ್ ನಲ್ಲಿ ಕೂಡ ವಿಷೇಶ ಪ್ರದರ್ಶನವನ್ನು ನೀಡಿ, 200 ಮಂದಿ ನಿಮಾ೯ಪಕರು, ಚಿತ್ರಕಥೆ ಬರಹಗಾರರು, ಕ್ಯಾಮರಾ ಮ್ಯಾನ್ ಗಳ ಮುಂದೆ ಸೈ ಎನಿಸಿಕೊಂಡು ಪ್ರಶಂಸೆಗೆ ಪಾತ್ರವಾಯಿತು.

 

ಇದೀಗ ದಾದಾ ಸಾಹೇಬ್ ಅವರ ಹೆಸರಿನಲ್ಲಿ ನಡೆಯುವ ಅಂತರಾಷ್ಟ್ರೀಯ ಕಿರು ಚಿತ್ರ ಸ್ಪರ್ಧೆಯಲ್ಲಿ ವಿಶ್ವದ ಹಲವೆಡೆಯ 1000 ಕಿರು ಚಿತ್ರಗಳ ಪೈಕಿ ಬೆಸ್ಟ್ ಆಫ್ 100 ನಲ್ಲಿ ಆಯ್ಕೆಯಾಗಿ ಸದ್ದು ಮಾಡಿದೆ. ಬೆಸ್ಟ್ 50 ಯಲ್ಲಿಯು ಆಯ್ಕೆ ಆಗುವ ಬಲವಾದ ಸಾಧ್ಯತೆಗಳು ಇದೆ. ನಂತರ ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ. ತದ ನಂತರದ ದಿನಗಳಲ್ಲಿ ವರ್ತಕಾಳಿ ಕಿರು ಚಿತ್ರವನ್ನು ಫೈನ್ ಶಾಟ್ಸ್, ಯು ಟ್ಯಾಬ್, ಏಕಲಂ ಪ್ಲಾಟ್ ಫಾಮ್೯ಗಳಲ್ಲಿ ಬಿಡುಗಡೆ ಮಾಡಲು ಯಾಚಿಸಿದ್ದಾರೆ.

ಕೃತಾರ್ಥ್ ಕೊಡಗಿನ ಕುವರ!
ಡಿಸೆಂಬರ್ 2000ನೇ ಇಸವಿ 28ರಂದು ಜನಿಸಿದ ಕೃತಾರ್ಥ್ ಅವರು ಕೊಡಗಿನ ವಿರಾಜಪೇಟೆಯ ಕೈಕೇರಿ ಗ್ರಾಮದಲ್ಲಿ ತಾಯಿ ಡಾ. ಸಹನಾ ಡಿ.ಟಿ ಹಾಗೂ ತಂದೆ ಹೆಚ್ ಜಿ ಪವಿತ್ರ ಅವ್ರಿಗೆ ಸುಪುತ್ರನಾಗಿ ಜನಿಸಿದರು. ಈಗ ಪ್ರಸ್ತುತ ಸಿದ್ದಾಪುರದಲ್ಲಿ ಮನೆಯಲ್ಲಿ ಕುಟುಂಬ ವಾಸವಿದೆ. ಬಾಲ್ಯದಿಂದಲೇ ಪ್ರತಿಭಾನ್ವಿತರಾಗಿದ್ದ ಕೃತಾರ್ಥ್ ಜನರಿಗೆ ಮನೋರಂಜನೆ ನೀಡುವಲ್ಲಿ ಸಂತಸ ಪಡುತ್ತಿದ್ದರು. ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಬಿಶೋಪ್ ಕಾಟನ್ಸ್ ಬಾಯ್ಸ್ ಸ್ಕೂಲ್ನಲ್ಲಿ ಮುಗಿಸಿದರು.

ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ಸಿಂಧಿ ಪಿ ಯು ಕಾಲೇಜಿನಲ್ಲಿ ಮಾಡಿದರು. ಪದವಿ ಶಿಕ್ಷಣವನ್ನು ಪತ್ರಿಕೋದ್ಯಮ ಹಾಗೂ ಸಮುಹ ಮಾಧ್ಯಮ ವಿಷಯವನ್ನು ಐಚಿಕ ವಿಷಯವಾಗಿ ಇಟ್ಟುಕೊಂಡು ಮಣಿಪಾಲದ ಯೂನಿವರ್ಸಿಟಿಯಿಂದ ಪಡೆದರು. ವೆಸ್ಟ್ ಲಂಡನ್ ಯೂನಿವರ್ಸಿಟಿಯ ಮೇಟಿಫಿಲ್ಮ್ ಸ್ಕೂಲ್ನಲ್ಲಿ ಫಿಲಂ ಮೇಕಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು. ನಂತರ ಫಿಲಂ ಮೇಕಿಂಗ್ ನಲ್ಲಿ ಪಿಜಿ ಡಿಪ್ಲೊಮೊ ಕೋರ್ಸ್ ಅನ್ನು ಕ್ಯಾಂಬ್ರಿಜ್ ಆ್ಯಕ್ಟಿಂಗ್ ಅಕಾಡಮಿಯಿಂದ ಪೂರ್ಣಗೊಳಿಸಿದರು.

ಈ ಮಟ್ಟಿಗಿನ ಉನ್ನತ ಶಿಕ್ಷಣ ಪಡೆದು ಹಿಂತಿರುಗಿ ನೋಡದ ಅವರು ನಂತರ ಬ್ರಿಟಿಷ್ ಫಿಲಂ ಉದ್ಯಮದಲ್ಲಿ ಸಕ್ರಿಯವಾಗಿ 2 ಕಮರ್ಷಿಯಲ್ಗಳನ್ನು ‘ಮೋಡ್ ಕಾಫಿ’ ಹಾಗೂ ‘ರಿಲೋ ಸಿಂಕ್ ಎ ಐ’ ಆ್ಯಪ್ ಗಾಗಿ ಕ್ರಿಯಾಶೀಲವಾಗಿ ಮಾಡಿಕೊಟ್ಟರು. ನಂತರ ‘ಸೋಲ್ ಶೆಬ್ಯಾಂಗ್’ ಎಂಬ ಮ್ಯೂಸಿಕ್ ಬ್ಯಾಂಡಿಗೆ ಮಿನಿ ಡಾಕ್ಯುಮೆಂಟರಿಯನ್ನು ತಯಾರಿಸಿದರು. ‘ಅವರ್ ನೆಸ್ಟ್’ ಹೆಸರಿನ ಆಂಗ್ಲ ಭಾಷೆಯ ಮಿನಿ ವೆಬ್ ಸೀರೀಸ್ಗೆ ಮೂರು ಸಂಚಿಕೆಗಳನ್ನು ನಿರ್ದೇಶಿಸಿದರು.

ಪಾಸ್‌ ಇಂಡಿಯಾ ನಿರ್ದೇಶಕರಾದ ರಾಜ ಮೌಳಿ ಅವರು ತಮ್ಮ ಆದರ್ಶ ಎನ್ನುವ ಕೃತಾರ್ಥ್ ಮುಂದಿನ ದಿನಗಳಲ್ಲಿ ನಟ ಹಾಗೂ ನಿರ್ದೇಶಕನಾಗಿ ವಿಶ್ವ ಪ್ರಸಿದ್ಧಿ ಪಡೆಯುವ ಧ್ಯೇಯ ಹಾಗೂ ಹುಮ್ಮಸ್ಸಿನೊಂದಿಗೆ ಸಾಗುತ್ತಿದ್ದಾರೆ. ನಮ್ಮ ಊರಿನ ಪ್ರತಿಭೆ ವಿಶ್ವ ಮಟ್ಟದಲ್ಲಿ ಬೆಳೆಯುತ್ತಿರೋದು ಸಂತಸದ ವಿಷ್ಯವಲ್ಲದೆ ಮತ್ತೇನು ನೀವೇ ಹೇಳಿ…?!

ಕೃಪೆ: kendavare