ಮಡಿಕೇರಿ : ಪ್ರಜಾತಂತ್ರ ವ್ಯವಸ್ಥೆಗೆ ವಿವಿಧ ಕಾಲ ಘಟ್ಟಗಳಲ್ಲಿ ಎದುರಾದ ಸಂಕಷ್ಟಗಳ ಸಂದರ್ಭಗಳಲ್ಲೆಲ್ಲ ಪತ್ರಿಕಾ ಕ್ಷೇತ್ರ ಅದಕ್ಕೆ ಎದುರಾಗಿ ಕಾರ್ಯ ನಿರ್ವಹಿಸುವ ಮೂಲಕ ‘ಪ್ರಜಾಪ್ರಭುತ್ವ’ ವ್ಯವಸ್ಥೆಯ ಸಂರಕ್ಷಣೆಗೆ ಶ್ರಮಿಸಿರುವುದಾಗಿ ಸಮಾಜ ಸೇವಕ ತೇಲಪಂಡ ಶಿವಕುಮಾರ್ ನಾಣಯ್ಯ ಅಭಿಪ್ರಾಯಿಸಿದರು.
ಕೊಡಗು ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಆಯೋಜಿತ ‘ಪತ್ರಿಕಾ ದಿನಾಚರಣೆ’ ಮತ್ತು ವಾರ್ಷಿಕ ಪ್ರಶಸ್ತಿ ಪದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕೊಡಗು ಪತ್ರಕರ್ತರ ಸಂಘದ ‘ಸ್ವಾಸ್ಥ್ಯ ಸುಂದರ, ಸಮಾಜ’ ಎನ್ನುವ ಘೋಷವಾಕ್ಯದಂತೆ ಪತ್ರಿಕಾ ಕ್ಷೇತ್ರವು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಸದಾ ಶ್ರಮಿಸುತ್ತಿದೆಯೆಂದು ತಿಳಿಸಿದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬಲ ತುಂಬುವ ಮತ್ತು ಬೆಂಬಲವನ್ನು ನೀಡುವ ಕಾರ್ಯದ ಮೂಲಕ ಸುಂದರ ಸಮಾಜ ನಿರ್ಮಾಣ ಸಾಧ್ಯವೆನ್ನುವ ಅನಿಸಿಕೆ ವ್ಯಕ್ತಪಡಿಸಿದರು.
ಪ್ರಸ್ತುತ ವ್ಯವಸ್ಥೆಯಲ್ಲಿ ಬಂಡವಾಳ ಶಾಹಿಗಳು, ಅಧಿಕಾರಸ್ಥರಿಂದ ನಿರಂತರವಾಗಿ ಅಧಿಕಾರದ ದುರ್ಬಳಕೆ ನಡೆಯುತ್ತಿದೆ. ಸ್ವಾತಂತ್ರ್ಯ ಪಡೆದು ಎಪ್ಪತ್ತೈದು ವರ್ಷಗಳು ಕಳೆದಿರುವ ಈ ದಿನಗಳಲ್ಲಿ ಸಮಬಾಳು, ಸಮಪಾಲು ಎನ್ನುವುದು ಸಮಾಜದಲ್ಲಿ ಇದೆಯೇ ಎನ್ನುವ ಬಗ್ಗೆ ಆತ್ಮಾವಲೋಕನ ಅತ್ಯಗತ್ಯವಾಗಿದೆ. ಪ್ರಸ್ತುತ ಶಿಕ್ಷಣ, ಆರೋಗ್ಯ, ಕೈಗಾರಿಕೆ ಕ್ಷೇತ್ರ ಸೇರಿದಂತೆ ಅಧಿಕಾರ ಸ್ಥಾನಗಳೆಲ್ಲವು ವಂಶಪಾರಂಪರ್ಯದ ಅಧಿಕಾರಕ್ಕೆ ಒಳಪಟ್ಟಿದೆಯೆಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಾರ್ತಾ ಮತ್ತು ಪ್ರಚಾರ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಮಾತನಾಡಿ, ಆರೋಗ್ಯಕರ ಸಮಾಜ ನಿಮಾಣದಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಮಹತ್ವ ಪೂರ್ಣವಾದದ್ದು. ಇಂತಹ ಪತ್ರಿಕಾ ಕ್ಷೇತ್ರ ಬದಲಾವಣೆಗಳಿಗೆ ತನ್ನನ್ನು ತೆರೆದುಕೊಳ್ಳುತ್ತಿರುವ ಈ ದಿನಮಾನಗಳಲ್ಲಿ, ಅದನ್ನು ಎಲ್ಲರೂ ಒಗ್ಗೂಡಿ ಎದುರಿಸಿ ಮುನ್ನಡೆಯುವ ಬಗ್ಗೆ ಚಿಂತಿಸುವ ಅಗತ್ಯವಿದೆಯೆಂದು ತಿಳಿಸಿದರು.
ಪತ್ರಿಕಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಪತ್ರಕರ್ತರಿಗೆ ಮಾಸಾಶನ ಸೌಲಭ್ಯವಿದ್ದು, ಇಲ್ಲಿಯವರೆಗೆ ಇದರ ಸೌಲಭ್ಯವನ್ನು ಆರು ಮಂದಿ ಜಿಲ್ಲೆಯಲ್ಲಿ ಪಡೆದುಕೊಂಡಿದ್ದಾರೆ. ಇದೀಗ ರಾಜ್ಯ ಸರ್ಕಾರ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಒದಗಿಸುತ್ತಿದ್ದು, ಇಂತಹ ಸೌಲಭ್ಯಗಳನ್ನು ಪತ್ರಕರ್ತರು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳು ಹಾಗೂ ಹಿರಿಯ ಪತ್ರಕರ್ತರಾದ ಕೆ. ತಿಮ್ಮಪ್ಪ ಮಾತನಾಡಿ, ಪ್ರಸ್ತುತ ಪತ್ರಿಕಾ ಕ್ಷೇತ್ರ ಎನ್ನುವುದು ಹಲ ಬದಲಾವಣೆಗಳಿಗೆ ತನ್ನನ್ನು ತೆರೆದುಕೊಂಡಿದೆ. ಆನ್‌ಲೈನ್ ಮತ್ತು ಇಲೆಕ್ಟ್ರಾನಿಕ್ ಕ್ಷೇತ್ರಗಳು ಹೆಚ್ಚು ಸಕ್ರಿಯವಾಗಿವೆ ಮತ್ತು ಸಮೃದ್ಧವಾಗಿವೆ. ಹೀಗಿದ್ದೂ ಪತ್ರಿಕೆಗಳನ್ನು ಕೈಯಲ್ಲಿ ಹಿಡಿದು ಓದುವ ಆ ಹಿತವೆ ಅಪರೂಪದ್ದು. ಮಾನವನ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತಿರುವ ಮಾಧ್ಯಮಗಳು ಜಗತ್ತನ್ನು ಮತ್ತಷ್ಟು ಹತ್ತಿರಕ್ಕೆ ತಂದಿರುವುದಾಗಿ ತಿಳಿಸಿದರು.
ಸರ್ಕಾರದ ಗ್ರಾಮೀಣ ಬಸ್ ಪಾಸ್‌ಗಳನ್ನು ಪಡೆಯುವಲ್ಲಿನ ನಿರ್ಬಂಧಗಳನ್ನು ಬದಲಾವಣೆ ಮಾಡುವ ಮೂಲಕ ಆ ಸೌಲಭ್ಯ ಎಲ್ಲಾ ಪತ್ರಕರ್ತರಿಗೆ ದೊರಕುವಂತೆ ಆಗಬೇಕೆನ್ನುವ ಅನಿಸಿಕೆ ವ್ಯಕ್ತಪಡಿಸಿದರು.
ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವದೃದ್ಧಿ ಸಂಘದ ಅಧ್ಯಕ್ಷ ಜಿ.ವಿ. ರವಿ ಕುಮಾರ್ ಮಾತನಾಡಿ, ಪತ್ರಕರ್ತರಿಗೆ ಸಮಾಜದಲ್ಲಿ ಗೌರವವಿರುವುದರೊಂದಿಗೆ, ಅಷ್ಟೇ ಜವಾಬ್ದಾರಿಗಳೂ ಇದೆ. ಪತ್ರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಇಂದಿನ ಕಾಲಘಟ್ಟಕ್ಕೆ ಅನುಗುಣವಾದ ಜ್ಞಾನವನ್ನು ಪಡೆದುಕೊಂಡು ಮುನ್ನಡೆಯುವುದರೊಂದಿಗೆ ಭಾಷಾ ಜ್ಞಾನವನ್ನು ಪಡೆಯುವುದು ಅತ್ಯವಶ್ಯವೆಂದು ತಿಳಿಸಿದರು.
ಕೊಡಗು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ಕೊಡಗಿನ ಶನಿವಾರಸಂತೆಯಲ್ಲಿ ೧೪೨ ವರ್ಷದ ಹಿಂದೆ ‘ ಕೊಡಗು ಚಂದ್ರಿಕೆ’ ಪತ್ರಿಕೆಯ ಆರಂಭದೊಂದಿಗೆ ಜಿಲ್ಲೆಯಲ್ಲಿ ಪತ್ರಿಕಾ ಕ್ಷೇತ್ರ ಪದಾರ್ಪಣೆ ಮಾಡಿ ಮುನ್ನಡೆಯುತ್ತಾ ಬಂದಿದೆ. ಶನಿವಾರಸಂತೆ ಕೊಡಗಿನ ಪತ್ರಿಕಾ ಕ್ಷೇತ್ರದ ಆರಂಭಕ್ಕೆ ಕಾರಣವಾಗಿರುವಂತೆಯೇ, ಇದೇ ಊರು ಕೊಡಗಿನ ಹೆಮ್ಮೆಯ ಸೇನಾನಿ ಫೀ.ಮಾ.ಕಾರ್ಯಪ್ಪ ಅವರ ಹುಟ್ಟಿದ ಊರೂ ಆಗಿದೆಯೆಂದು ಸಂತಸ ವ್ಯಕ್ತಪಡಿಸಿದರು. ಇದೇ ಸಂದರ್ಭ ಅವರು ಸರ್ಕಾರ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಿದೆಯಾದರು, ಅದರಲ್ಲಿನ ನಿರ್ಬಂಧಗಳಿಂದ ಅದನ್ನು ಹೆಚ್ಚಿನವರು ಪಡೆಯಲು ಸಾಧ್ಯವಾಗದ ಸ್ಥಿತಿ ಇರುವುದಾಗಿ ಬೇಸರ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷರಾದ ಅನಿಲ್ ಎಚ್.ಟಿ., ಪತ್ರಿಕಾ ಕ್ಷೇತ್ರ, ವಿವಿಧ ಕಾಲ ಘಟ್ಟಗಳಲ್ಲಿ ಹಲವು ಸವಾಲುಗಳನ್ನು ಎದುರಿಸಿಕೊಂಡು ಬರುತ್ತಿದೆ. ಮೊಬೈಲ್, ಇಂಟರ್‌ನೆಟ್ ಮೊದಲಾದ ಆಧುನಿಕ ವ್ಯವಸ್ಥೆಗಳ ನಡುವಿನ ಸವಾಲುಗಳನ್ನು ಪತ್ರಿಕೆ ಸಮರ್ಥವಾಗಿ ಎದುರಿಸಿ ಮುನ್ನಡೆದಿದೆ. ಪ್ರಸ್ತುತ ಕೃತಕ ಬುದ್ಧಿ ಮತ್ತೆಯ ಸವಾಲು ಪತ್ರಿಕಾ ಕ್ಷೇತ್ರದ ಮುಂದಿದೆಯಾದರು ಅದು ಅಷ್ಟಾಗಿ ಪತ್ರಿಕಾ ಕ್ಷೇತ್ರದ ಮೇಲೆ ಪ್ರಭಾವ ಬೀರಿಲ್ಲವೆಂದು ಅಭಿಪ್ರಾಯಿಸಿದರು.
ವಾರ್ಷಿಕ ಪ್ರಶಸ್ತಿ ಪ್ರದಾನ- ಸಮಾರಂಭದಲ್ಲಿ ಈ ಬಾರಿಯ ವಾರ್ಷಿಕ ಪ್ರಶಸ್ತಿಗಳನ್ನು ೧೦ ಮಂದಿಗೆ ಪ್ರದಾನ ಮಾಡಲಾಯಿತು.
ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಯನ್ನು ಕುಡೆಕಲ್ ಸಂತೋಷ್‌ರಿಗೆ, ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿ ಮೋಹನ್ ರಾಜ್, ಅತ್ಯುತ್ತಮ ಪರಿಣಾಮಕಾರಿ ವರದಿ ಪ್ರಶಸ್ತಿಯನ್ನು ಪ್ರಸಾದ್ ಸಂಪಿಗೆ ಕಟ್ಟೆ, ರಾಜಕೀಯ ವರದಿ ಪ್ರಶಸ್ತಿಯನ್ನು ವಿಘ್ನೇಶ್ ಭೂತನಕಾಡು , ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಯನ್ನು ಸುನಿಲ್ ಪೂಜಾರಿ, ಕೊಡಗಿನ ಆದಿವಾಸಿ ಜನಾಂಗದ ಜೀವನ ಕುರಿತ ಮಾನವೀಯ ವರದಿ ಪ್ರಶಸ್ತಿಯನ್ನು ಡಿ.ಪಿ.ಲೋಕೇಶ್, ಅತ್ಯುತ್ತಮ ಕೃಷಿ ವರದಿ ಪ್ರಶಸ್ತಿಯನ್ನು ವಿನೋದ್ ಮೂಡಗದ್ದೆ ಅವರಿಗೆ ಅತಿಥಿ ಗಣ್ಯರು ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಿದರು.
ದೃಶ್ಯ ವಾಹಿನಿಯಲ್ಲಿ ಪ್ರಸಾರವಾದ ಮಾನವೀಯ ವರದಿಗೆ ಟಿವಿ ಒನ್ ವಾಹಿನಿಯ ಪರವಾಗಿ ಸೈಯ್ಯದ್ ಇರ್ಫಾನ್, ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಉತ್ತಮ ವರದಿ ಪ್ರಶಸ್ತಿಯನ್ನು ಟಿ.ಜೆ. ಪ್ರವೀಣ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು.
ಗೌರವಾರ್ಪಣೆ- ಕೊಡಗು ಪತ್ರಕರ್ತರ ಸಂಘಕ್ಕೆ ದತ್ತಿ ನಿಧಿಯನ್ನು ನೀಡಿರುವ ಕಾಂತಿ ಸತೀಶ್, ನಾಗೇಂದ್ರ ಪ್ರಸಾದ್ ಮತ್ತು ಅಂಜನ್ ಪ್ರಸಾದ್, ಗುಡ್ಡೆಮನೆ ವಿಶು ಕುಮಾರ್, ಬಿ.ಜಿ. ಅನಂತಶಯನ, ಭಾಗೀರಥಿ ಮಹಂತೇಶ್ ಅವರನ್ನು ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ಇದೇ ಸಂದರ್ಭ ಪತ್ರಿಕಾ ದಿಣಾಚರಣೆ ಉದ್ಘಾಟಿಸಿದ ಸಮಾಜ ಸೇವಕ ತೇಲಪಂಡ ಶಿವಕುಮಾರ್ ನಾಣಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಟಿ.ಜೆ. ಪ್ರವೀಣ್ ಕುಮಾರ್ ಅವರು ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಸ್ವಾಗತಿಸಿದರು. ಕುಡೆಕಲ್ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಸನ್ಮಾನಿತರನ್ನು ಶಿವಪ್ಪ, ಹನೀಫ್, ರಂಜಿತ್ ಕವಲಪಾರ, ನವೀನ್ ಚಿನ್ನಪ್ಪ, ಗುರುದರ್ಶನ್, ನಾಸೀರ್, ಪ್ರಭಾಕರ್, ವತ್ಸಲ, ದುಶ್ಯಂತ್ ಮತ್ತು ಉಷಾ ಪ್ರೀತಂ ಸಭೆಗೆ ಪರಿಚಯಿಸಿದರು. ಪಿ.ಎಂ. ರವಿ ವಂದಿಸಿದರು.
