ಮೈಸೂರು : ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ವಿಚಾರವಾಗಿ ನಡೆಯುತ್ತಿರುವ ಪರ-ವಿರೋಧ ವಿಚಾರ ಈಗ ನ್ಯಾಯಾಲಯ ಮೆಟ್ಟಿಲೇರಿದೆ.
ಬುಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುತ್ತಾರೆಂದು ಸರ್ಕಾರ ಹೇಳಿದಾಗಿನಿಂದ ಮಾಜಿ ಸಂಸದ ಪ್ರತಾಪ್ ಸಿಂಹ ತಮ್ಮ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರು. ಇದೀಗ ಅವರಿಂದ ದಸರಾ ಉದ್ಘಾಟನೆಗೆ ತಡೆ ನೀಡಬೇಕೆಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಕೆಲವು ದಿನದ ಹಿಂದೆ ಸರ್ಕಾರ ಹಾಸನದ ಬಾನು ಮುಷ್ತಾಕ್ ಮನೆಗೆ ತೆರಳಿ ಅಧಿಕೃತ ಆಹ್ವಾನ ನೀಡಿತ್ತು. ಸರ್ಕಾರ ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದಕ್ಕೆ ಬಾನು ಮುಷ್ತಾಕ್ ಕೂಡಾ ಧನ್ಯವಾದ ಹೇಳಿದ್ದರು. ಇದೀಗ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಪ್ರತಾಪ್ ಸಿಂಹ, ದಸರಾ ಉದ್ಘಾಟನೆ ಸಂದರ್ಭ ಚಾಮುಂಡೇಶ್ವರಿ ದೇವಿಗೆ ಪೂಜೆ ಮಾಡಬೇಕು. ಧಾರ್ಮಿಕ ಆಚರಣೆಯೊಂದಿಗೆ ಹಲವು ಸಂಪ್ರದಾಯ ಇದೆ. ಬಾನು ಮುಷ್ತಾಕ್ ಕನ್ನಡ, ಹಿಂದು ವಿರೋಧಿ ಮನಸ್ಥಿತಿ ಹೊಂದಿದ್ದಾರೆ. ಸರ್ಕಾರ ಜನರ ಭಾವನೆಗೆ ಬೆಲೆ ನೀಡದೆ ಏಕಪಕ್ಷೀಯವಾಗಿ ಅವರನ್ನು ಆಯ್ಕೆ ಮಾಡಿದೆ ಎಂದು ಹೇಳಿದ್ದಾರೆ.



