ಕುಶಾಲನಗರ : ಚಿಕ್ಕತ್ತೂರು ಗ್ರಾಮದಲ್ಲಿ ಪೋಷಣ ಅಭಿಯಾನ ಮತ್ತು ಆತ್ಮಹತ್ಯೆ ತಡೆ ದಿನಾಚರಣೆ ನಡೆಯಿತು. ಕೂಡುಮಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು.
ದೇಶದಲ್ಲಿ ಅಪೌಷ್ಟಿಕತೆ ತಡೆಯುವುದು ಮತ್ತು ಕಡಿಮೆ ತೂಕದ ಶಿಶುಗಳ ಜನನ ಮಟ್ಟವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಹೆಚ್ಚಿನ ಒತ್ತು ನೀಡಬೇಕೆಂದು ಹೇಳಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಮಾತನಾಡಿ, ಅಪೌಷ್ಟಿಕತೆಯಿಂದ ಪೌಷ್ಟಿಕತೆಯಡೆಗೆ ಸಮುದಾಯವನ್ನು ಕೊಂಡೊಯ್ಯುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶ. ವಿಶ್ವದಾದ್ಯಂತ ಏಳರಿಂದ ಎಂಟು ಲಕ್ಷ ಜನರು ಪ್ರತಿ ವರ್ಷ ಆತ್ಮಹತ್ಯೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಡಿಪ್ರೆಶನ್, ಅತಿಯಾದ ಮಾದಕ ವ್ಯಸನಗಳು, ಕನಸು ನನಸಾಗದಿದ್ದಾಗ, ಆಲೋಚನೆಗಳು ಈಡೇರದಿದ್ದಾಗ, ಭವಿಷ್ಯದ ಬಗ್ಗೆ ಭರವಸೆ ಇಲ್ಲದಿದ್ದಾಗ, ಏಕಾಂಗಿತನ ಕಾಡಿದಾಗ ನನ್ನವರು ಯಾರು ಇಲ್ಲ ಎಂಬ ಭಾವನೆ ಮೂಡಿದಾಗ, ಆಕ್ರಮಣ ಶೀಲತೆ ಮತ್ತು ಮುಂಗೋಪಿತನ ಇದ್ದಾಗ, ವಿಷಯಗಳನ್ನು ಮುಚ್ಚಿಟ್ಟಾಗ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಇಂತಹ ಲಕ್ಷಣಗಳನ್ನು ಗುರುತಿಸುವುದರಿಂದ ಜೀವ ಉಳಿಸಬಹುದು ಎಂದು ತಿಳಿಸಿದರು.
ಪಂಚಾಯಿತಿ ಸದಸ್ಯರಾದ ಪಾರ್ವತಮ್ಮ, ಖತೀಜ, ದಿನೇಶ್, ವಿನಾಯಕ ಯುವಕ ಸಂಘದ ಅಧ್ಯಕ್ಷ ಸಿ.ಸಿ. ಸ್ವಾಮಿ, ಅಂಗನವಾಡಿ ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.



