ಮೈಸೂರು : ಬಾನು ಮುಷ್ತಾಕ್ ಮುಸ್ಲಿಂ ಅನ್ನುವ ಕಾರಣಕ್ಕೆ ನಾನು ದಸರಾ ಉದ್ಘಾಟನೆಗೆ ವಿರೋಧ ಪಡಿಸುತ್ತಿಲ್ಲ. ಹಿಂದುಗಳ ಅರಿಶಿಣ ಕುಂಕುಮದ ಕುರಿತಾಗಿನ ಅವರ ನಿಲುವಿನ ಬಗ್ಗೆ ನಮ್ಮ ಆಕ್ಷೇಪ ಇರುವುದು ಅಂತ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಬಾನು ಮುಷ್ತಾಕ್ ಬುಕರ್ ಪ್ರಶಸ್ತಿ ಗೆದ್ದಾಗ ನಾವೆಲ್ಲ ಅವರನ್ನು ಅಭಿನಂದಿಸಿದ್ದೇವೆ. ಆದರೆ ದಸರಾ ಉದ್ಘಾಟನೆಗೆ ಅವರನ್ನು ಆಯ್ಕೆ ಮಾಡಿದ ಸಂದರ್ಭದಲ್ಲಿ ನಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದು, ವಿರೋಧವನ್ನೂ ವ್ಯಕ್ತಪಡಿಸಿದ್ದೇವೆ. ಅವರಿಗೆ ಹಿಂದುಗಳ ಆಚರಣೆ, ದೇವರ ಆರಾಧನೆ ಬಗ್ಗೆ ನಂಬಿಕೆ ಇಲ್ಲ. ಇದನ್ನು ಅವರು ಈ ಹಿಂದೆ ಬಹಿರಂಗವಾಗಿಯೇ ಹೇಳಿದ್ದಾರೆ. ದಸರಾ ಅನ್ನುವುದು ನಮ್ಮ ಧಾರ್ಮಿಕ ಆಚರಣೆ. ಅಲ್ಲಿ ಚಾಮುಂಡೇಶ್ವರಿಗೆ ಕುಂಕುಮ ಹಚ್ಚುತ್ತಾರೆ, ಆರತಿ ಬೆಳಗುತ್ತಾರೆ. ಇದನ್ನು ಅವರು ಸ್ವೀಕರಿಸುತ್ತಾರಾ ಎಂದು ಪ್ರಶ್ನಿಸಿದರು.
ಈ ಹಿಂದೆ ಕವಿ ನಿಸಾರ್ ಅಹ್ಮದ್ ಅವರು ದಸರಾ ಉದ್ಘಾಟಿಸಿದ್ದರು. ಅವರು ಕನ್ನಡ ತಾಯಿಯ ಕುರಿತಾಗಿ ಒಳ್ಳೆಯ ಅಭಿಪ್ರಾಯ ಹೊಂದಿದ್ದರು. ಅವರ ಸಾಹಿತ್ಯದಲ್ಲೂ ಅದನ್ನು ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯನವರು ವಿನಾ ಕಾರಣ ದಾಖಲೆ ಇದ್ಯಾ ಅಂತೆಲ್ಲ ಮಾತನಾಡುತ್ತಾರೆ. ನಮ್ಮ ಹಿಂದುಗಳ ಭಾವನೆಗೆ ಧಕ್ಕೆಯಾಗುತ್ತದೆ ಅಂತ ವಿಚಾರವನ್ನು ಮುಂದಿಟ್ಟು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಹೇಳಿದರು.



