ಬೆಂಗಳೂರು : ನಾಡಹಬ್ಬ ಮೈಸೂರು ದಸರಾ 2025 ಮಹೋತ್ಸವವನ್ನು ಸಾಹಿತಿ ಬಾನು ಮುಷ್ತಾಕ್ ಉದ್ಘಾಟಿಸುವುದಕ್ಕೆ ತಡೆ ನೀಡಬೇಕೆಂದು ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿದ್ದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಅದನ್ನು ವಜಾಗೊಳಿಸಿದ ಕೋರ್ಟ್ ದಸರಾ ಉದ್ಘಾಟಿಸಲು ಬಾನು ಮುಷ್ತಾಕ್ ಅವರಿಗೆ ಅನುಮತಿ ನೀಡಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾ.ಸಂದೀಪ್ ಮೆಹ್ತಾ ಅವರಿದ್ದ ಪೀಠ ಕರ್ನಾಟಕ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ. ದಸರಾ ಉದ್ಘಾಟನೆಯ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ಸಿ.ಎಂ.ಜೋಶಿ ಅವರಿದ್ದ ನ್ಯಾಯಪೀಠ ವಜಾಗೊಳಿಸಿತ್ತು.
ಅದನ್ನು ಪ್ರಶ್ನಿಸಿ ಬೆಂಗಳೂರಿನ ನಿವಾಸಿ ಗೌರವ್ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿ ವಜಾಗೊಳಿಸಿದ ನ್ಯಾಯಪೀಠವು, ಯಾವುದೇ ಒಂದು ನಿರ್ದಿಷ್ಟ ಧರ್ಮ ಅಥವಾ ನಂಬಿಕೆಯನ್ನು ಅನುಸರಿಸುವ ವ್ಯಕ್ತಿ ಇತರೆ ಧರ್ಮದ ಹಬ್ಬಗಳಲ್ಲಿ ಆಚರಣೆಯಲ್ಲಿ ಭಾಗಿಯಾಗುವುದರಿಂದ ಸಂವಿಧಾನದಡಿ ಲಭ್ಯವಿರುವ ಯಾವುದೇ ಹಕ್ಕುಗಳು ಉಲ್ಲಂಘನೆಯಾಗುವುದಿಲ್ಲ ಎಂದು ವಿಶ್ಲೇಷಣೆ ಮಾಡಿದೆ.
ಯಾವುದೇ ಸಾಂವಿಧಾನಿಕ ಅಥವಾ ಕಾನೂನು ಉಲ್ಲಂಘನೆಯಾಗಿದೆ ಎಂಬುದು ಇಲ್ಲಿ ಕಂಡುಬಂದಿಲ್ಲ. ಅದನ್ನು ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲವಾಗಿದ್ದಾರೆ ಎಂದು ಪೀಠ ಹೇಳಿದೆ.



