ಪೊನ್ನಂಪೇಟೆ: ಚೊಚ್ಚಲ ಕೃತಿಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು ಸಾಧನೆಗೈದ
ದುದ್ದಿಯಂಡ ಮುಸ್ಕಾನ್ ಸೂಫಿ ಅವರನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಸನ್ಮಾನಿಸಲಾಯಿತು. ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ಪ್ಯಾರಿಶ್ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಕೆಎಂಎ ಪ್ರತಿಭಾ ಪುರಸ್ಕಾರ-2025 ವಿತರಣೆ ಮತ್ತು ಸನ್ಮಾನ ಸಮಾರಂಭದಲ್ಲಿ ಮುಸ್ಕಾನ್ ಸೂಫಿ ಅವರನ್ನು ಸಂಸ್ಥೆಯ ಪರವಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಆರಂಭದಿಂದಲೇ ಇಂಗ್ಲೀಷ್ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ದುದ್ದಿಯಂಡ ಮುಸ್ಕಾನ್ ಸೂಫಿ ಅವರ ಮೊದಲ ಇಂಗ್ಲಿಷ್ ಕೃತಿ ‘ದಿಸ್ ಟೂ ಶೆಲ್ ಪಾಸ್’ ಅನ್ನು ಅಂತರಾಷ್ಟ್ರೀಯ ಖ್ಯಾತಿಯ ಬುಕ್ ಲಿಫ್ ಪಬ್ಲಿಕೇಶನ್ ಪ್ರಕಟಿಸಿತ್ತು. ನಂತರ ಈ ಕೃತಿ ಅಮೆರಿಕ ಮೂಲದ ಪ್ರಸಿದ್ಧ ಕವಿ ಎಮಿಲಿ ಡಿಕ್ಕಿನ್ಸನ್ ಸ್ಮರಣಾರ್ಥವಾಗಿ ನೀಡಲಾಗುವ 21ನೇ ಶತಮಾನದ ಅಂತರಾಷ್ಟ್ರೀಯ ಮಟ್ಟದ ‘ಇಂಡಿ ಆಥರ್ಸ್ ಅವಾರ್ಡ್ 2025’ ಕ್ಕೆ ನಾಮನಿರ್ದೇಶನಗೊಂಡಿತ್ತು. ಇದಕ್ಕೂ ಮೊದಲು ಬುಕ್ ಲಿಫ್ ಪಬ್ಲಿಕೇಶನ್ ಜಾರಿಗೊಳಿಸಿದ್ದ 21 ದಿನಗಳಲ್ಲಿ 21 ಕವನ ರಚಿಸುವ ‘ಸವಾಲುಗಳ ಅಭಿಯಾನ’ (Challenges Campaign) ದಲ್ಲಿ ಪಾಲ್ಗೊಂಡಿದ್ದ, ಮುಸ್ಕಾನ್ ಸೂಫಿ ಅವರು, ಸವಾಲುಗಳ ನಿರ್ದಿಷ್ಟ ಗುರಿ ಸಾಧಿಸಿ ಗಮನ ಸೆಳೆದಿದ್ದಾರೆ. ನಿಗದಿತ 21 ದಿನಗಳಲ್ಲಿ 28ಕ್ಕೂ ಹೆಚ್ಚು ಕವನಗಳನ್ನು ಸ್ವಯಂ ರಚಿಸಿದ ಮುಸ್ಕಾನ್ ಸೂಫಿ 50 ಪುಟಗಳ ಕವನ ಸಂಗ್ರಹಕ್ಕೆ ರೂಪು ನೀಡಿದ್ದರು.
ಕಾಲೇಜು ತರಗತಿಗಳ ಬಿಡುವಿನ ಸಮಯದಲ್ಲಿ ಕಾವ್ಯಕೃಷಿಯನ್ನು ಆರಂಭಿಸಿ ಗುರಿ ಸಾಧಿಸಿದ ಮುಸ್ಕಾನ್ ಸೂಫಿ ತಮ್ಮ ಮನಸ್ಸಿನಲ್ಲಿ ಮೂಡಿ ಬಂದ ವಿವಿಧ ಪ್ರಕಾರಗಳ ಭಾವನೆಗಳಿಗೆ ಅಕ್ಷರದ ರೂಪ ನೀಡಿದ್ದರು. ವಿವಿಧ ವಿಷಯಗಳನ್ನಿಟ್ಟುಕೊಂಡು ಮುಸ್ಕಾನ್ ಸೂಫಿ ಕವನ ರಚಿಸಿ ಭಾವನೆಗಳನ್ನು ಕವಿತೆಯಾಗಿಸಿದ್ದರು. ಮುಸ್ಕಾನ್ ಸೂಫಿ ಅವರ ಈ ಕವನ ಸಂಕಲನ ಮೊದಲ ಹಂತದಲ್ಲೇ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದು ಇಂಗ್ಲೀಷ್ ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿತ್ತು. ಮುಸ್ಕಾನ್ ಅವರ ಚೊಚ್ಚಲ ಕವನ ಸಂಕಲನ ಅಮೆಜಾನ್ ನಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಮಾರಾಟವಾಗಿರುವ ಪುಸ್ತಕಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತ್ತು.
ವಿರಾಜಪೇಟೆ ಸಮೀಪದ ನಲ್ವತ್ತೋಕ್ಲು ಮೂಲದವರಾದ ಕಾಫಿ ಉದ್ಯಮಿ ದುದ್ದಿಯಂಡ ಸೂಫಿ ಹಾಜಿ ಮತ್ತು ಮಸೂದ ಸೂಫಿ ದಂಪತಿಯ ಪುತ್ರಿಯಾಗಿರುವ ಮುಸ್ಕಾನ್ ಅವರು, ಮೈಸೂರಿನ ಸಂತ ಫಿಲೋಮಿನ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯ ಮತ್ತು ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದಾರೆ. ಕೊಡವ ಮುಸ್ಲಿಂ ಸಮುದಾಯದ ಹೆಣ್ಣು ಮಗಳೊಬ್ಬಳು ತನ್ನ ಚಿಕ್ಕ ಪ್ರಾಯದಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸಾಧನೆಯನ್ನು ಪರಿಗಣಿಸಿ ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿದೆ ಎಂದು ಸಂಸ್ಥೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.



