ಮಡಿಕೇರಿ : ಮಡಿಕೇರಿಯಲ್ಲಿ ನಡೆಯುತ್ತಿರುವ ಮುದ್ದಂಡ ಕಪ್ ಹಾಕಿ ಉತ್ಸವಕ್ಕೆ (Muddanda Hockey Festival) ಇಂದು ಶ್ವಾನ ಪ್ರದರ್ಶನ ಮೆರುಗು ನೀಡಿತು. ವಿವಿಧ ತಳಿಯ ಶ್ವಾನಗಳು ಹಾಕಿ (Hockey) ಮೈದಾನದಲ್ಲಿ ಆಕರ್ಷಣೆ ಮತ್ತು ಚಾಕಚಕ್ಯತೆಯಿಂದ ನೋಡುಗರ ಗಮನ ಸೆಳೆದವು. ಪಶುವೈದ್ಯಕೀಯ ಇಲಾಖೆಯ ಸಹಯೋಗದಲ್ಲಿ ನಡೆದ ಶ್ವಾನ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು ಮಾನವನ ವಿಶ್ವಾಸ, ನಂಬಿಕೆಗೆ ಅರ್ಹವಾದ ನಿಷ್ಠಾವಂತ ಸಾಕು ಪ್ರಾಣಿಗಳಲ್ಲಿ ಶ್ವಾನ ಅಗ್ರ ಸ್ಥಾನ ಪಡೆದಿದೆ. ಮನೆಯಲ್ಲಿ ಪ್ರಾಣಿಗಳನ್ನು ಸಾಕುವುದರಿಂದ ನಿಷ್ಕಲ್ಮಶವಾದ ಪ್ರೀತಿ ಬೆಳೆಯುತ್ತದೆ. ಪ್ರತಿಯೊಬ್ಬರು ಪ್ರಾಣಿಗಳನ್ನು ಉತ್ತಮ ರೀತಿಯಲ್ಲಿ ಪೋಷಣೆ ಮಾಡಬೇಕು ಎಂದರು.
ಪಶುಸAಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಲಿಂಗರಾಜು ಹಾ.ದೊಡ್ಡಮನಿ ಮಾತನಾಡಿ, ಪ್ರಾಣಿಗಳನ್ನು ರೇಬಿಸ್ ಕಾಯಿಲೆಯಿಂದ ರಕ್ಷಿಸಲು ಲಸಿಕೆ ಏಕೈಕ ಮಾರ್ಗವಾಗಿದ್ದು, ಜಿಲ್ಲೆಯ ಎಲ್ಲಾ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಉಚಿತ ಲಸಿಕೆ ನೀಡಲಾಗುತ್ತಿದೆ. ಸಾರ್ವಜನಿಕರು ತಮ್ಮ ಪ್ರಾಣಿಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವ ಮೂಲಕ ಮಾರಣಾಂತಿಕ ಕಾಯಿಲೆಯಿಂದ ರಕ್ಷಿಸುವಂತೆ ಸಲಹೆ ನೀಡಿದರು.
ಪ್ರಾಣಿಗಳನ್ನು ಉತ್ತಮ ರೀತಿಯಲ್ಲಿ ಪಾಲನೆ, ಪೋಷಣೆ ಮಾಡಬೇಕು. ಮನೆಗಳಲ್ಲಿ ಮುದ್ದಾದ ಶ್ವಾನಗಳನ್ನು ಸಾಕುವ ಮೂಲಕ ಮುಂದಿನ ದಿನಗಳಲ್ಲಿ ನಡೆಯುವ ಶ್ವಾನ ಪ್ರದರ್ಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ಅವರು ಮಾತನಾಡಿ, ಶ್ವಾನಪ್ರಿಯರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿವಿಧ ತಳಿಯ ಶ್ವಾನಗಳನ್ನು ನೋಡಲು ಅವಕಾಶವಾಗಿದೆ. ಪ್ರಸ್ತುತ ದಿನಗಳಲ್ಲಿ ರಾಷ್ಟç ಅಂತರಾಷ್ಟೀಯ ಮಟ್ಟದಲ್ಲಿ ಶ್ವಾನಗಳಿಗೆ ಹೆಚ್ಚು ಬೇಡಿಕೆ ಇದೆ. ಮನುಷ್ಯನಿಗೆ ಅತೀ ಆತ್ಮೀಯವಾದ ಮತ್ತು ನಂಬಿಕೆ ಪ್ರಾಣಿ ಶ್ವಾನವಾಗಿದ್ದು, ಮುಂದಿನ ವರ್ಷಗಳಲ್ಲಿ ನಡೆಯುವ ಹಾಕಿ ಹಬ್ಬಗಳಲ್ಲೂ ಶ್ವಾನ ಪ್ರದರ್ಶನ ನಡೆಸುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದರು.
ಪಾಲಿಕ್ಲಿನಿಕ್ ಜಿಲ್ಲಾ ಉಪನಿರ್ದೇಶಕ ಕ್ಯಾಪ್ಟನ್ ಡಾ.ಸಿ.ಪಿ.ತಿಮ್ಮಯ್ಯ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಶ್ವಾನವನ್ನು ಸಾಕುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮಿಂದ ಯಾವುದೇ ಪ್ರಾಣಿಗಳನ್ನು ಸಾಕಲು ಸಾಧ್ಯವಾಗದೇ ಇದ್ದಲ್ಲಿ ಶ್ವಾನವನ್ನು ಸಾಕುವಂತೆ ಸಲಹೆ ನೀಡಿದರು. ಶ್ವಾನಗಳ ಒಡನಾಟದಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ, ಶ್ವಾನಗಳನ್ನು ದತ್ತು ಪಡೆದು ಆರೈಕೆ ಮಾಡುವಂತೆ ತಿಳಿಸಿದರು.
ಪಶುಸಂಗೋಪನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಪ್ರಸನ್ನ, ನಿವೃತ್ತ ಉಪನಿರ್ದೇಶಕ ಡಾ.ಕೆ.ಪಿ.ಅಯ್ಯಪ್ಪ, ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಕಾರ್ಯದರ್ಶಿ ಮುದ್ದಂಡ ಆದ್ಯ ಪೂವಣ್ಣ, ಉಪಾಧ್ಯಕ್ಷ ಡೀನ್ ಬೋಪಣ್ಣ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ವಿವಿಧ ತಳಿಯ ಶ್ವಾನಗಳ ಆಕರ್ಷಣೆ
ಶ್ವಾನ ಪ್ರದರ್ಶನದಲ್ಲಿ ರಾಟ್ ವಿಲ್ಲರ್, ಗ್ರೇಟ್‌ಡೇನ್, ಮ್ಯಾಸ್ಟಿಫ್, ಸೈಬೀರಿಯನ್ ಹಸ್ಕಿ, ಪಗ್, ಬುಲ್‌ಡಾಗ್, ಗೋಲ್ಡನ್ ರೆಟ್ರೀವರ್, ಬೀಗಲ್, ಲ್ಯಾರ್ಬಡರ್, ಜರ್ಮನ್ ಶಫರ್ಡ್, ಮುಧೋಳ್ ಹೌಂಡ್ ಸೇರಿದಂತೆ ೧೭ ವಿವಿಧ ತಳಿಯ ಅಧಿಕ ಸಂಖ್ಯೆಯ ಶ್ವಾನಗಳು ಆಕರ್ಷಿಸಿದವು.
ವಿಜೇತ ಶ್ವಾನಗಳು
ಶ್ವಾನ ಪ್ರದರ್ಶನದಲ್ಲಿ ಕೇಚೇಟಿರ ಮದನ್ ಅವರ ಗ್ರೇಟ್ ಡೇನ್ ತಳಿ ಪ್ರಥಮ, ಕುಶಾಲನಗರದ ಶರಣ್ ಕುಮಾರ್ ಅವರ ರಾಟ್ ವಿಲ್ಲರ್ ದ್ವಿತೀಯ, ಅರೆಕಾಡು ಎ.ಕೆ.ಸೋಮಣ್ಣ ಅವರ ಮಿನಿ ಪಿಚ್ಛರ್ ತೃತೀಯ, ಮಡಿಕೇರಿಯ ಎಂ.ಐ.ರಾಹುಲ್ ಅವರ ಜರ್ಮನ್ ಶಫರ್ಡ್ ನಾಲ್ಕನೇ ಸ್ಥಾನ ಹಾಗೂ ತಾನ್ಯ ತಂಗಮ್ಮ ಅವರ ಸೈಬೀರಿಯನ್ ಹಸ್ಕಿ ೫ನೇ ಸ್ಥಾನ ಪಡೆದುಕೊಂಡಿತು. ವಿಜೇತರ ಶ್ವಾನಗಳಿಗೆ ಆಕರ್ಷಕ ಟ್ರೋಫಿ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಅಲ್ಲದೇ ಭಾಗವಹಿಸಿದ್ದ ಎಲ್ಲಾ ಶ್ವಾನಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಎಲ್ಲಾ ಶ್ವಾನಗಳಿಗೆ ಜಿಲ್ಲಾ ಪಶುವೈದ್ಯಕೀಯ ಇಲಾಖೆಯಿಂದ ಉಚಿತ ರೇಬಿಸ್ ಲಸಿಕೆ ಹಾಗೂ ಔಷಧಿ, ಪಾಲಿಕ್ಲಿನಿಕ್ ನಿಂದ ಜಂತು ನಾಶಕ ಲಸಿಕೆ ಹಾಕಲಾಯಿತು.