ಮುದ್ದಂಡ ಹಾಕಿ ನಮ್ಮೆ: ಬೆಳ್ಳಿ ಹಬ್ಬದ ಪ್ರಶಸ್ತಿಗಾಗಿ ಮಂಡೇಪಂಡ Vs ಚೇಂದಂಡ ನಡುವೆ ಹಣಾಹಣಿ

Muddanda Cup Hockey Festival

Share this post :

ಮಡಿಕೇರಿ : ಹದಿನಾಲ್ಕರ ಹರೆಯದ ಪೋರ, ಗೋಲ್ ಕೀಪರ್ ಮಂಡೇಪಂಡ ದ್ಯಾನ್ ಬೆಳ್ಯಪ್ಪ ಅವರ ಅತ್ಯಮೋಘ ಆಟದ ಪ್ರದರ್ಶನದಿಂದ ಮಂಡೇಪಂಡ ಕೊಡವ ಕೌಟುಂಬಿಕ ಮುದ್ದಂಡ (Muddanda) ಕಪ್ ಹಾಕಿ ಪಂದ್ಯಾವಳಿಯ ಫೈನಲ್ ಪ್ರವೇಶಿಸಿದ್ದು, ಭಾನುವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಪ್ರಶಸ್ತಿಗಾಗಿ 3 ಬಾರಿಯ ಛಾಂಪಿಯನ್ ಬಲಿಷ್ಠ ಚೇಂದಂಡ ತಂಡವನ್ನು ಎದುರಿಸಲಿದೆ. ‘ಶೂಟೌಟ್’ನಲ್ಲಿ ಎದುರಾಳಿ, ಮೂರು ಬಾರಿಯ ಕೌಟುಂಬಿಕ ಹಾಕಿ ಪಂದ್ಯಾವಳಿ ಛಾಂಪಿಯನ್ ನೆಲ್ಲಮಕ್ಕಡ ತಂಡದ ಎರಡು ಗೋಲಿನ ಅವಕಾಶಗಳನ್ನು ಗೋಲಿ ಮಂಡೇಪಂಡ ಡ್ಯಾನ್ ಬೆಳ್ಯಪ್ಪ ವಿಫಲಗೊಳಿಸುತ್ತಿರುವಂತೆಯೇ ಮಂಡೇಪಂಡ ತಂಡ 5-4 ಗೋಲುಗಳ ಅಂತರದ ಮಹತ್ವದ ಗೆಲುವನ್ನು ತನ್ನದಾಗಿಸಿಕೊಂಡಿತು.

ದ್ವಿತೀಯ ಸೆಮಿಫೈನಲ್‌ನಲ್ಲಿ ಚೇಂದಂಡ ತಂಡ 3-1 ಗೋಲುಗಳ ಅಟಂತರದಿಂದ ಎದುರಾಳಿ ಕುಪ್ಪಂಡ (ಕೈಕೇರಿ) ತಂಡವನ್ನು ಮಣಿಸಿ ಫೈನಲ್‌ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿತು. ಮಂಡೇಪಂಡ-ನೆಲ್ಲಮಕ್ಕಡ- ಆಕ್ರಮಣಕಾರಿ ಆಟದ ಪ್ರದರ್ಶನ ಕಂಡ ಮೊದಲ ಸೆಮಿಫೈನಲ್‌ನಲ್ಲಿ ಮಂಡೇಪಂಡ ಮತ್ತು ನೆಲ್ಲಮಕ್ಕಡ ತಂಡಗಳು ಆರಂಭದಿAದಲೆ ಪಂದ್ಯದ ಮೇಲೆ ಹಿಡಿತ ಸಾಧಿಸಿ ಗೋಲುಗಳಿಸುವ ಪ್ರಯತ್ನಕ್ಕೆ ಇಳಿಯುವುದರೊಂದಿಗೆ ಪಂದ್ಯದ ರೋಚಕತೆ ಹೆಚ್ಚಿತು. ಮೊದಲ ಕ್ವಾರ್ಟರ್‌ನಲ್ಲಿ ನೆಲ್ಲಮಕ್ಕಡ ತಂಡ ಪಡೆದ ಮೊದಲ ಪೆನಾಲ್ಟಿ ಕಾರ್ನರ್‌ನಲ್ಲಿ ತಂಡದ ಪ್ರತೀಕ್ ಪೂವಣ್ಣ ಅವರು ಡ್ರಾಗ್ ಫ್ಲಿಕ್ ಮೂಲಕ ಸಿಡಿಸಿದ ಅತ್ಯಾಕರ್ಷಕ ಗೋಲು ತಂಡಕ್ಕೆ 1-0 ಗೋಲಿನ ಮುನ್ನಡೆಯನ್ನು ದೊರಕಿಸಿಕೊಟ್ಟಿತು.

Muddanda Cup Hockey Festival

ಮೊದಲ ಗೋಲಿನ ಮುನ್ನಡೆಯಿಂದ ಉತ್ತೇಜಿತ ನೆಲ್ಲಮಕ್ಕಡ ತಂಡ ಸತತ ದಾಳಿಗಳ ಮೂಲಕ ಮತ್ತೆರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆಯಿತಾದರು, ಅದನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ನೆಲ್ಲಮಕ್ಕಡ ತಂಡಕ್ಕೆ ಸಡ್ಡು ಹೊಡೆದ ಮಂಡೇಪಂಡ ತಂಡ ಯೋಜನಾಬದ್ಧ ದಾಳಿಗಳನ್ನು ಸಂಘಟಿಸಿದ್ದಲ್ಲದೆ, ಇದೇ ಮೊದಲ ಬಾರಿ ಅಳವಡಿಸಿದ್ದ ‘ರೆಫರಲ್’ಗೆ ಮೊರೆ ಹೋಗಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪಡೆಯುವ ಪ್ರಯತ್ನದಲ್ಲಿ ಒಮ್ಮೆ ಯಶಸ್ವಿಯಾಯಿತಾದರು, ದೊರಕಿದ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗದೆ ನಿರಾಶೆಗೊಂಡಿತು.

ದ್ವಿತೀಯ ಕ್ವಾರ್ಟರ್‌ನಲ್ಲಿ ಇತ್ತಂಡಗಳು ಸಮಬಲದ ಆಟದ ಪ್ರದರ್ಶನ ನೀಡಿದವಾದರು ಗೋಲುಗಳು ದಾಖಲಾಗದೆ ಮೊದಲ ಅವಧಿಯ ಮುಕ್ತಾಯಕ್ಕೆ ನೆಲ್ಲಮಕ್ಕಡ 1-0 ಗೋಲಿನ ಮುನ್ನಡೆಯನ್ನು ಉಳಿಸಿಕೊಂಡಿತು. ಮಂಡೇಪಂಡ ತಿರುಗೇಟು…. ತೃತೀಯ ಕ್ವಾರ್ಟರ್‌ನಲ್ಲಿ ನಿಖರ ಪಾಸ್‌ಗಳೊಂದಿಗೆ ಎದುರಾಳಿ ತಂಡದ ಗೋಲಿನ ಆವರಣಕ್ಕೆ ಸತತ ದಾಳಿಗಳನ್ನು ಸಂಘಟಿಸಿದ ಮಂಡೇಪಂಡ ತಂಡ, ನೆರವಂಡ ತಂಡದ ರಕ್ಷಣಾ ಕೋಟೆಯನ್ನು ಭೇದಿಸಿ ಮುನ್ನುಗ್ಗಿತಲ್ಲದೆ, ಮಂಡೇಪಂಡ ತಂಡದ ಮುನ್ಪಡೆ ಆಟಗಾರ ಗೌತಮ್ ಎದುರಾಳಿಯ ‘ಡಿ’ ಆವರಣದ ಬಲ ತುದಿಯಿಂದ ಸಿಡಿಸಿದ ಚೆಂಡು ಎದುರಾಳಿ ನೆಲ್ಲಮಕ್ಕಡ ತಂಡದ ಗೋಲಿಯನ್ನು ವಂಚಿಸಿ ಗೋಲ್ ಪೋಸ್ಟ್ನ ಒಳಹೋಗುತ್ತಿದ್ದಂತೆಯೇ ಪ್ರೇಕ್ಷಕರ ಹರ್ಷೋದ್ಘಾರ ಮುಗಿಲು ಮುಟ್ಟಿತು, ಕೊನೆಗೂ ಮಂಡೇಪಂಡ ತಂಡ ಸಮಬಲದ ಗೋಲು ದಾಖಲಿಸಿ ಪಂದ್ಯವನ್ನು 1-1 ಗೋಲಿನ ಸಮಸ್ಥಿತಿಗೆ ತಂದು ನಿಲ್ಲಿಸಿತು.

ಕೊನೆಯ ಹಾಗೂ ನಾಲ್ಕವೇ ಕ್ವಾರ್ಟರ್‌ನಲ್ಲಿ ಇತ್ತಂಡಗಳು ದಾಳಿಯ ಆಟಕ್ಕೆ ಮೊರೆಹೋಗಿ ಕೆಲ ಗೋಲಿನ ಅವಕಾಶಗಳನ್ನು ಪಡೆದವಾದರು, ಅವುಗಳು ಗೋಲಾಗಿ ಪರಿವರ್ತನೆಯಾಗದೆ ಪಂದ್ಯ 1-1 ಗೋಲಿನೊಂದಿಗೆ ಡ್ರಾನಲ್ಲಿ ಮುಕ್ತಾಯವಾಯಿತು. ಶೂಟೌಟ್- ವಿಜೇತ ತಂಡವನ್ನು ನಿರ್ಧರಿಸುವ ಶೂಟೌಟ್‌ನಲ್ಲಿ ಮಂಡೇಪಂಡ ೪ ಗೋಲುಗಳನ್ನು ಗಳಿಸಿದರೆ, ನೆಲ್ಲಮಕ್ಕಡ ತಂಡ ೩ ಗೋಲುಗಳನ್ನಷ್ಟೆ ಗಳಿಸಲು ಶಕ್ತವಾಯಿತು. ಮಂಡೇಪಂಡ ತಂಡದ ಗೋಲಿ ಡ್ಯಾನ್ ಬೆಳ್ಯಪ್ಪ ಅತ್ಯಾಕರ್ಷಕ ಗೋಲು ರಕ್ಷಣೆೆಯ ಮೂಲಕ ಪ್ರೇಕ್ಷಕರ ನಿಜ ‘ಹೀರೋ’ ಆಗಿ ಕಂಗೊಳಿಸಿದರು. ಪರಾಜಿತ ತಂಡ ನೆಲ್ಲಮಕ್ಕಡ ತಂಡದ ಸಚಿನ್ ಅವರನ್ನು ಪಂದ್ಯ ಪುರುಷೋತ್ತಮರಾಗಿ ಗೌರವಿಸಲಾಯಿತು.

ಚೇಂದಂಡ-ಕುಪ್ಪಂಡ(ಕೈಕೇರಿ)- ರೋಚಕತೆಯಿಂದ ಕೂಡಿದ್ದ ದ್ವಿತೀಯ ಸೆಮಿಫೈನಲ್‌ನಲ್ಲಿ ಚೇಂದಂಡ ತಂಡ ಎದುರಾಳಿ ಕುಪ್ಪಂಡ ತಂಡದ ವಿರುದ್ಧ ಬಹುತೇಕ ಪಂದ್ಯದುದ್ದಕ್ಕೂ ಪ್ರಭುತ್ವ ಸಾಧಿಸಿ 3-1 ಗೋಲುಗಳ ಅಂತರದಿಂದ ಮಣಿಸಿತು. ಚೇಂದಂಡ ತಂಡದ ನಿಕಿನ್ ತಿಮ್ಮಯ್ಯ 1 ಹಾಗೂ ತಮ್ಮಯ್ಯ 2 ಗೋಲುಗಳನ್ನು ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪರಾಜಿತ ಕುಪ್ಪಂಡ(ಕೈಕೇರಿ) ತಂಡದ ಪರವಾಗಿ ನಾಚಪ್ಪ 1 ಗೋಲು ಗಳಿಸಿದರು. ಕುಪ್ಪಂಡ ಪಿ. ಸೋಮಯ್ಯ ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.