ಕುಶಾಲನಗರ : ಮೊಬೈಲ್ ಫೋಟೋಗ್ರ‍್ರಫಿ ಪರಿಣಾಮ ವೃತ್ತಿಪರ ಫೋಟೋಗ್ರಾಫರ್ ಹಾಗೂ ವಿಡಿಯೋಗ್ರಾಫರ್‌ಗಳ ಜೀವನ ದುಸ್ತರವಾಗಿದ್ದು, ಭವಿಷ್ಯದ ದಿನಗಳ ಚಿಂತೆ ಇವರನ್ನು ಕಾಡುತ್ತಿದೆ ಎಂದು ಕೊಡಗು ಜಿಲ್ಲಾ ಛಾಯಾಗ್ರಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆವರ್ತಿ ಮಹದೇವಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಕೊಡಗು ಪತ್ರಕರ್ತರ ಸಂಘ ಹಾಗೂ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿಂದ ಕುಶಾಲನಗರದ ಗೌಡ ಸಮಾಜದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಿಕಾ ವೃತ್ತಿಯಲ್ಲಿ ಪತ್ರಕರ್ತರು ಹಾಗೂ ಛಾಯಾಗ್ರಾಹಕರು ಒಂದೇ ನಾಣ್ಯದ ಎರಡು ಮುಖವೆಂದು ಬಣ್ಣಿಸಿದ ಅವರು, ಈ ಇಬ್ಬರ ಸಂಬಂಧ ಬಿಡಿಸಲಾಗದ ಅನುಬಂಧ ಎಂದು ಆವರು ಬಣ್ಣಿಸಿದರು.
ಕೊಡಗು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ ಪತ್ರಕರ್ತರಷ್ಟೇ ಜವಾಬ್ದಾರಿ ಛಾಯಾಚಿತ್ರಗಾಹಕರಿಗಿದೆ. ಒಬ್ಬ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುವ ಶಕ್ತಿ ಛಾಯಾಚಿತ್ರಕ್ಕಿದೆ. ಯಾವುದೇ ಛಾಯಾಚಿತ್ರವು ಸಂಬಂಧಿಸಿದ ವಿಷಯಕ್ಕೆ ಪೂರಕವಾಗಿರಬೇಕೇ ಹೊರತು ಮಾರಕವಾಗಿರಬಾರದು ಎಂದು ಹೇಳಿದರು.
ದತ್ತಿ ಪ್ರಶಸ್ತಿ ದಾನಿಗಳಾದ ಪತ್ರಕರ್ತರ ಸಂಘದ ಗೌರವ ಸಲಹೆಗಾರ ಬಿ.ಜಿ. ಅನಂತಶಯನ ಮಾತನಾಡಿ, ಬದಲಾದ ಆಧುನಿಕ ಯುಗದಲ್ಲಿ ಆರ್ಟಿಫಿಷಲ್ ಇಂಟಲಿಜೆನ್ಸ್‌ನಿಂದಾಗಿ ಫೋಟೋ ಹಾಗೂ ವಿಡಿಯೋಗ್ರಫಿ ಕ್ಷೇತ್ರ ಸಾಕಷ್ಟು ಕಮರಿ ಹೋಗುತ್ತಿದೆ. ಇದರಿಂದ ಛಾಯಾಗ್ರಾಹಕರ ಹಾಗೂ ವಿಡಿಯೋಚಿತ್ರಗಾರರ ಭವಿಷ್ಯ ತೂಗುಯ್ಯಾಲೆಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಉದ್ಯಮಿ ಹೆನ್ರಿಕ್ ಮಾರ್ಟಿನ್, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿದರು. ಬಿಜೆಪಿ ಯುವ ಮುಖಂಡ ಹೇರೂರು ಚಂದ್ರಶೇಖರ್, ಗುಡ್ಡೆಹೊಸೂರು ಪಂಚಾಯಿತಿ ಯೂತ್ ಸಂಘಟನೆ ಎಂ.ಎಸ್. ರಂಜಿತ್, ಗುಡ್ಡೆಹೊಸೂರು ಗ್ರಾಪಂ ಸದಸ್ಯ ನಿತ್ಯಾನಂದ ಕುಡೆಕಲ್ ಮಾತನಾಡಿದರು.

ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅನಂತಶಯನ ಅವರು ತಮ್ಮ ಪುತ್ರಿ ಡಾ. ಅನುಶ್ರೀ ಅವರ ಹ್ಯಾಪಿ ಟೀತ್ ಕ್ಲೀನಿಕ್ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ಛಾಯಾಚಿತ್ರ ಸ್ಪರ್ಧೆಯ ವಿಜೇತರಾದ ವಿಘ್ನೇಶ್ ಭೂತನಕಾಡು, ಕೊಡಗು ಪತ್ರಕರ್ತರ ಸಂಘದಿಂದ ಆಯೋಜಿಸಲಾದ ಸುದ್ದಿ ಚಿತ್ರ ಸ್ಪರ್ಧೆಯ ವಿಜೇತರಾದ ಕೆ.ಎಸ್. ಅನಿಲ್, ಗುಡ್ಡೆ ಮನೆ ವಿಶುಕುಮಾರ್, ವಿಡಿಯೋಗ್ರಫಿಯಲ್ಲಿ ಮಹಮ್ಮದ್ ಹನೀಫ್, ಉಷಾಪ್ರೀತಂ, ಸಾರ್ವಜನಿಕರಿಗೆ ಆಯೋಜಿತಗೊಂಡಿದ್ದ ರೀಲ್ಸ್ ಸ್ಪರ್ಧೆಯ ವಿಜೇತರಾದ ಭಾಗೀರಥಿ ಹುಲಿತಾಳ, ರಮ್ಯಾ ಮಾಚಯ್ಯ ಅವರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಪತ್ರಕರ್ತರ ಸಂಘದಿಂದ ಛಾಯಾಗ್ರಾಹಕರಾದ ಮಹಮ್ಮದ್ ಹನೀಫ್ ಹಾಗೂ ಸಂದೀಪ್ ಅವರನ್ನು ಸನ್ಮಾನಿಸಲಾಯಿತು.
ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿಂದ ಪುಲಿಯಂಡ ರಾಮ್ ದೇವಯ್ಯ ಜ್ಞಾನಗಂಗಾ ಶಾಲೆಯ ಹೆಸರಿನಲ್ಲಿ ಸಂಘದಲ್ಲಿ ಹಿರಿಯ ಪತ್ರಕರ್ತರಿಗೆ ಸ್ಥಾಪಿಸಿರುವ ದತ್ತಿ ಪ್ರಶಸ್ತಿಯನ್ನು ಸುಂಟಿಕೊಪ್ಪದ ಹಿರಿಯ ವರದಿಗಾರ ಕೆ.ಎಚ್. ಶಿವಣ್ಣ ಅವರಿಗೆ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಂಘದ ನವೀನ್ ಚಿನ್ನಪ್ಪ ಅವರನ್ನು ವೀಡಿಯೋಗ್ರಫಿ ಕ್ಷೇತ್ರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ನಿರ್ದೇಶಕರಾದ ಗುಡ್ಡೆಮನೆ ವಿಶ್ವಕುಮಾರ್ ಅವರಿಂದ ಛಾಯಾಚಿತ್ರಗಳ ಆಕರ್ಷಕ ಪ್ರದರ್ಶನ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಸಿಲ್ವೆಸ್ಟರ್ ಪ್ರಾರ್ಥಿಸಿದರೆ, ವಿಘ್ನೇಶ್ ಭೂತನಕಾಡು ಸ್ವಾಗತಿಸಿ, ಕೆ.ತಿಮ್ಮಪ್ಪ ನಿರೂಪಿಸಿದರು. ನವೀನ್ ಚಿನ್ನಪ್ಪ ವಂದಿಸಿದರು.



