ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮೆಟಾದ (Meta) ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸ್ವಯಂ ಚಾಲಿತ ಕನ್ನಡ ಅನುವಾದ ವ್ಯವಸ್ಥೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ, ಈ ಕುರಿತು ಮೆಟಾ ತಪ್ಪಾದ ಕನ್ನಡ ಅನುವಾದಕ್ಕಾಗಿ ಕ್ಷಮೆಯಾಚಿಸಿದ್ದು ಜೊತೆ ಆಗಿರುವ ಸಮಸ್ಯೆ ಸರಿಪಡಿಸುವುದಾಗಿ ತಿಳಿಸಿದೆ. ಇತ್ತೀಚೆಗೆ ನಿಧನರಾದ ಹಿರಿಯ ನಟಿ ಸರೋಜಾದೇವಿ ಅವರ ಅಂತಿಮ ದರ್ಶನವನ್ನ ಸಿಎಂ ಸಿದ್ದರಾಮಯ್ಯ ಪಡೆದಿದ್ದರು. ಈ ಸಂಬಂಧ ಕರ್ನಾಟಕ ಮುಖ್ಯಮಂತ್ರಿಗಳ ಕಚೇರಿ(CMO) ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ಸಂತಾಪ ಸಂದೇಶವನ್ನ ಅನುವಾದಿಸುವಾಗ ಮೇಟಾದ ದೊಡ್ಡ ದೋಷ ಕಂಡು ಬಂದಿತ್ತು. ಕನ್ನಡದಲ್ಲಿ ಬರೆಯಲಾಗಿದ್ದ ಪೋಸ್ಟ್ ಇಂಗ್ಲೀಷ್ ಗೆ ತಪ್ಪಾಗಿ ಅನುವಾದವಾಗಿತ್ತು. ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ನಿಧನರಾದರು. ಬಹುಭಾಷಾ ತಾರೆ ಹಿರಿಯ ನಟಿ ಬಿ.ಸರೋಜಾದೇವಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು ಎಂದು ಅನುವಾದವಾಗಿತ್ತು.
ಈ ಸಂಬಂಧ ಫೇಸ್‌ಬುಕ್ ಮತ್ತು ಇನ್ ಸ್ಟಾಗ್ರಾಮ್ ನಂತಹ ಮೆಟಾ ವೇದಿಕೆಗಳಲ್ಲಿ ಕನ್ನಡ ವಿಷಯದ ದೋಷಯುಕ್ತ ಸ್ವಯಂ-ಅನುವಾದದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಂತಹ ಮೆಟಾದ ವೇದಿಕೆಗಳಲ್ಲಿ ಕನ್ನಡದ ದೋಷಯುಕ್ತ ಅನುವಾದವು ಸತ್ಯವನ್ನು ತಿರುಚುತ್ತಿದೆ ಮತ್ತು ಬಳಕೆದಾರರ ದಾರಿತಪ್ಪಿಸುತ್ತಿದೆ. ‘ಸಾಮಾಜಿಕ ಮಾಧ್ಯಮ ವೇದಿಕೆಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಅಧಿಕೃತವಾಗಿ ಸಂವಹನ ನಡೆಸುವಾಗ, ವ್ಯವಹರಿಸುವಾಗ ಈ ವೇದಿಕೆಗಳಲ್ಲಿನ ಸ್ವಯಂ ಚಾಲಿತ ಅನುವಾದಗಳು ಹೆಚ್ಚಾಗಿ ತಪ್ಪಾಗಿರುತ್ತವೆ ಮತ್ತು ಅದು ಅತ್ಯಂತ ಅಪಾಯಕಾರಿಯಾಗಿರುತ್ತದೆ ಎಂಬುದನ್ನು ನಾಗರಿಕರು ತಿಳಿದಿರಬೇಕು ಎಂದಿದ್ದರು.
ಈ ಕುರಿತು ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಅವರು ಮೆಟಾಗೆ ಜುಲೈ 16 ರಂದು ಇ-ಮೇಲ್ ಮೂಲಕ ಪತ್ರ ಬರೆದು, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಕನ್ನಡ ವಿಷಯದ ಸ್ವಯಂ ಚಾಲಿತ ಅನುವಾದದ ಬಗ್ಗೆ ಸಿಎಂ ಪರವಾಗಿ ಕಳವಳ ವ್ಯಕ್ತಪಡಿಸಿದ್ದರು.
ಕನ್ನಡದ ಅನುವಾದ ತಪ್ಪಾಗಿ ಆಗುತ್ತಿದೆ. ಇದರಿಂದ ಕನ್ನಡ ಅಪಾರ್ಥ ಆಗುತ್ತಿದೆ. ಹೀಗಾಗಿ ಅದನ್ನ ಸರಿಪಡಿಸುವವರೆಗೂ ಅನುವಾದವನ್ನ ನಿಲ್ಲಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಅನುವಾದದ ನಿಖರತೆಯನ್ನು ವಿಶ್ವಾಸಾರ್ಹವಾಗಿ ಸುಧಾರಿಸುವವರೆಗೆ ಕನ್ನಡ ವಿಷಯದ ಸ್ವಯಂಚಾಲಿತ ಅನುವಾದ ವೈಶಿಷ್ಟ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ತಿಳಿಸಿದ್ದರು.
ಇದೀಗ ಈ ಪತ್ರಕ್ಕೆ ಮೆಟಾ ಸಂಸ್ಥೆ ಸ್ಪಷ್ಟನೆ ನೀಡಿದ್ದು ಸಿಎಂ ಸಿದ್ದರಾಮಯ್ಯ ಬಳಿ ಕ್ಷಮೆ ಕೇಳಿದೆ. ಅಲ್ಲದೆ ಅನುವಾದದ ದೋಷವನ್ನು ಸರಿಪಡಿಸಿರುವುದಾಗಿ ತಿಳಿಸಿದೆ. ‘ಕನ್ನಡ ಅನುವಾದದಲ್ಲಿನ ಲೋಪಕ್ಕೆ ಕಾರಣವಾದ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಸರಿಪಡಿಸಲಾಗಿದೆ’ ಎಂದು ಮೆಟಾದ ವಕ್ತಾರರು ತಿಳಿಸಿದ್ದಾರೆ.