ಭಾಗಮಂಡಲ ಭಗಂಡೇಶ್ವರ ದೇವಾಲಯದ ಆವರಣ ಸ್ವಚ್ಛಗೊಳಿಸಿದ ಗಜಾನನ ಯುವಕ ಸಂಘ ಸದಸ್ಯರು…

Share this post :

coorg buzz

ಭಾಗಮಂಡಲ : ಇಲ್ಲಿನ ಗಜಾನನ ಯುವಕ ಸಂಘದ ವತಿಯಿಂದ ಭಗಂಡೇಶ್ವರ ದೇವಾಲಯದ ಆವರಣವನ್ನು ಶುಚಿಗೊಳಿಸಲಾಯಿತು. ಎರಡು ತಿಂಗಳಿನಿಂದ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ದೇವಾಲಯದ ಆವರಣದಲ್ಲಿ ಹಾವಸೆ(ಪಾಚಿ) ನಿರ್ಮಾಣವಾಗಿತ್ತು. ಇದರಿಂದಾಗಿ ದೇವಾಲಯಕ್ಕೆ ಆಗಮಿಸುವ ಭಕ್ತರು ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕುವಾಗ ಜಾರುವ ಪರಿಸ್ಥಿತಿ ಎದುರಾಗಿತ್ತು. ಈ ಬಗ್ಗೆ ಇಲ್ಲಿನ ಅರ್ಚಕರು ಇತ್ತೀಚೆಗೆ ಯುವಕ ಸಂಘದ ಪದಾಧಿಕಾರಿಗಳ ಗಮನಕ್ಕೆ ತಂದಿದ್ದರು.

ಈ ಹಿನ್ನೆಲೆಯಲ್ಲಿ ಯುವಕ ಸಂಘದ ಸದಸ್ಯರು ಸೋಮವಾರ ಕಾರ್ಯಪ್ರವೃತ್ತರಾಗಿ ಆವರಣವನ್ನು ಶುಚಿಗೊಳಿಸಿದರು. ಸುಣ್ಣ ಪುಡಿ, ಬ್ಲೀಚಿಂಗ್‌ ಪೌಡರ್‌ ಹಾಕಿ ನೆಲದಲ್ಲಿದ್ದ ಹಾವಸೆಯನ್ನು ತೆರವುಗೊಳಿಸಿದರು. ಸಂಘದ ಅಧ್ಯಕ್ಷ ಗೌರೀಶ್‌ ರೈ ನೇತೃತ್ವದಲ್ಲಿ ನಡೆದ ಈ ಸ್ವಚ್ಛತಾ ಕಾರ್ಯದಲ್ಲಿ 14 ಮಂದಿ ಸದಸ್ಯರು ಪಾಲ್ಗೊಂಡಿದ್ದರು.

ಈ ಬಗ್ಗೆ ಮಾತನಾಡಿದ ದೇವಾಲಯದ ಅರ್ಚಕ ಹರೀಶ್‌ ಭಟ್‌, ಆವರಣದಲ್ಲಿ ನೆಲ ಜಾರುತ್ತಿದ್ದ ಪರಿಣಾಮ ಹೊರ ಜಿಲ್ಲೆಯಿಂದ ಬಂದ ಕೆಲವು ಭಕ್ತರು ಜಾರಿ ಬಿದ್ದಿದ್ದರು. ಜುಲೈ 24ಕ್ಕೆ ಕ್ಷೇತ್ರದಲ್ಲಿ ಪೊಲಿಂಕಾನ ಉತ್ಸವ ಕೂಡಾ ಇದ್ದು, ಈ ಹಿನ್ನೆಲೆಯಲ್ಲಿ ಆವರಣವನ್ನು ಸ್ವಚ್ಛಗೊಳಿಸುವ ಅಗತ್ಯವಿತ್ತು. ಈ ಬಗ್ಗೆ ಸಂಘದ ಗಮನಕ್ಕೆ ತಂದಿದ್ದೆ. ಯುವಕರು ಮಳೆಯನ್ನೂ ಲೆಕ್ಕಿಸದೆ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದ್ದಾರೆ. ಈ ತಂಡದ ಸಾಮಾಜಿಕ ಕಾರ್ಯ ನಿರಂತರವಾಗಿ ಮುಂದುವರೆಯಲಿ ಎಂದು ಹಾರೈಸಿದರು.