ಮಧುಮೇಹ (Diabetes) ಎನ್ನುವುದು ಸಾಮಾನ್ಯವಾದ ಆರೋಗ್ಯ (Health) ಸಮಸ್ಯೆಗಳಲ್ಲಿ ಒಂದು. ಮಧುಮೇಹಕ್ಕೂ ಹೃದಯದ ಆರೋಗ್ಯಕ್ಕೂ ನಿಕಟ ಸಂಬಂಧ ಇದೆ. ಆದರೆ ಈ ವಿಚಾರವನ್ನು ಬಹುತೇಕರು ಕಡೆಗಣಿಸಿರುತ್ತಾರೆ. ಅದು ಸಲ್ಲದು. ಯಾಕೆಂದರೆ ಈ ಕಡೆಗಣನೆಯಿಂದ ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಗಾಢ ಪರಿಣಾಮ ಉಂಟಾಗಬಹುದು. ಹಾಗಾಗಿ ಈ ಕುರಿತು ಹೆಚ್ಚಿನ ಮಾಹಿತಿ ಹೊಂದುವುದು ಅವಶ್ಯ. ವ್ಯಕ್ತಿಗಳ ರಕ್ತದ ಸಕ್ಕರೆಯ ಮಟ್ಟ ಜಾಸ್ತಿ ಆದಾಗ ಅದು ಗ್ಲೂಕೋಸ್ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ಜೊತೆಗೆ ಹೃದಯದ ಕೆಲಸದ ಮೇಲೆ ಮತ್ತು ಒಟ್ಟಾರೆ ಹೃದಯರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಅದರಿಂದ ಹೆಚ್ಚಿನ ತೊಂದರೆ ಉಂಟಾಗಬಹುದು.
ಸಂಶೋಧನೆಯ ಪ್ರಕಾರ ಮಧುಮೇಹ ಹೊಂದಿರುವ ವ್ಯಕ್ತಿಗಳು ತಮ್ಮ ಜೀವನದ ಒಂದು ಹಂತದಲ್ಲಿ ಹೃದ್ರೋಗಕ್ಕೆ ತುತ್ತಾಗುವ ಅಪಾಯ ಜಾಸ್ತಿ ಇರುತ್ತದೆ. ರಕ್ತದ ಸಕ್ಕರೆ ಮಟ್ಟವು ಜಾಸ್ತಿಯಾದಾಗ ರಕ್ತನಾಳಗಳು ಮತ್ತು ಹೃದಯದ ಕಾರ್ಯನಿರ್ವಹಣೆಯಲ್ಲಿ ನೇರ ಭಾಗಿಯಾಗುವ ನರಗಳಿಗೆ ಹಾನಿ ಉಂಟಾಗಬಹುದಾಗಿದೆ. ಹಾಗಾಗಿ ಈ ಕುರಿತು ಎಚ್ಚರ ವಹಿಸಬೇಕಾಗಿದೆ. ಒಂದೊಳ್ಳೆಯ ಸಂಗತಿ ಏನೆಂದರೆ ನೀವು ನಿಮ್ಮ ಮಧುಮೇಹವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಹೃದಯರಕ್ತನಾಳದ ಕಾಯಿಲೆ ಉಂಟಾಗುವ ಅಪಾಯ ಕೂಡ ಕಡಿಮೆ ಆಗುತ್ತದೆ.
ಈ ಕುರಿತು ಮಾತನಾಡುವ ಬೆಂಗಳೂರಿನ ಸಹಕಾರ ನಗರದ ಆಸ್ಟರ್ ಸಿಎಂಐ ಹಾಸ್ಪಿಟಲ್ ನ ಚೀಫ್ ಸಿವಿಟಿಎಸ್ ಸರ್ಜನ್ ಡಾ. ಗಣೇಶಕೃಷ್ಣನ್ ಅಯ್ಯರ್ ಅವರು, “ಭಾರತದಲ್ಲಿ ಮಧುಮೇಹದಿಂದ ಬಳಲುತ್ತಿರುವ ಹಲವಾರು ಜನರು ತಮಗೆ ಹೃದಯ ಸಂಬಂಧಿ ಸಮಸ್ಯೆಗಳು ಕಾಡುತ್ತಿರುವುದಾಗಿ ತಿಳಿಸುತ್ತಿದ್ದಾರೆ. ಆತಂಕಕಾರಿ ವಿಚಾರವೇನೆಂದರೆ ಯುವ ಪೀಳಿಗೆಯಲ್ಲೂ ಇಂತಹ ಸಮಸ್ಯೆ ಕಂಡು ಬರುತ್ತಿದೆ.
ಒಂದು ವೇಳೆ ಮಧುಮೇಹವನ್ನು ಸರಿಯಾಗಿ ನಿರ್ವಹಿಸದಿದ್ದರೆ ಅದರಿಂದ ಅಧಿಕ ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್ ಮತ್ತು ಹೆಚ್ಚಿನ ಟ್ರೈಗ್ಲಿಸರೈಡ್ ಗಳಂತಹ ಹೃದಯರಕ್ತನಾಳದ ಕಾಯಿಲೆಯನ್ನುಂಟು ಮಾಡುವ ಅಪಾಯಕಾರಿ ಅಂಶಗಳು ಹೆಚ್ಚು ಕಾಡಬಹುದಾಗಿದೆ. ಹಾಗಾಗಿ ಗ್ಲೂಕೋಸ್ ಏರಿಳಿತಗಳನ್ನು ತಪ್ಪಿಸುವ ಕಡೆಗೆ ಜನರು ಹೆಚ್ಚಿನ ಗಮನ ನೀಡುವುದು ಅವಶ್ಯ. ಮಧುಮೇಹದಿಂದ ಬಳಲುತ್ತಿರುವ ಮಂದಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಸಲಹೆಗಳು ಇಲ್ಲಿದೆ.
ಹೃದಯ ಆರೋಗ್ಯಕ್ಕೆ ಪೂರಕವಾದ ಆಹಾರವನ್ನು ಸೇವಿಸಿ: ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟ್ ಹೊಂದಿರುವ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಯಾಕೆಂದರೆ ಅದರಿಂದ ಕೊಲೆಸ್ಟ್ರಾಲ್ ಮಟ್ಟ ಜಾಸ್ತಿಯಾಗುವ ಸಂಭವವಿದೆ. ಸಾಮಾನ್ಯವಾಗಿ ಬೆಣ್ಣೆ, ರೆಡ್ ಮೀಟ್ ಮತ್ತು ಫುಲ್ ಫ್ಯಾಟ್ ಡೈರಿ ಉತ್ಪನ್ನಗಳಲ್ಲಿ ಈ ಸ್ಯಾಚುರೇಟೆಡ್ ಫ್ಯಾಟ್ ಇರುತ್ತವೆ. ಕರಿದ ಮತ್ತು ಸಂಸ್ಕರಿಸಿದ ಆಹಾರಗಳಲ್ಲಿ ಬಳಸುವ ಭಾಗಶಃ ಹೈಡ್ರೋಜನೀಕರಿಸಿದ ಎಣ್ಣೆಗಳಲ್ಲಿ ಟ್ರಾನ್ಸ್ ಫ್ಯಾಟ್ ಗಳು ಕಂಡುಬರುತ್ತವೆ. ಸೊಪ್ಪು, ಧಾನ್ಯಗಳು ಮತ್ತು ಪ್ರೋಟೀನ್ ಭರಿತ ಆಹಾರಗಳು ಸೇರಿದಂತೆ ಸಮತೋಲಿತ ಆಹಾರ ಸೇವಿಸುವುದು ಬಹಳ ಒಳ್ಳೆಯದು.
ನಿಯಮಿತ ವ್ಯಾಯಾಮ: ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಆ ಮೂಲಕ ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟಗಳನ್ನು ನಿರ್ವಹಿಸಬೇಕು. ನಿಯಮಿತವಾಗಿ ಮಾಡುವ ದೈಹಿಕ ಚಟುವಟಿಕೆಗಳು ನಿಮ್ಮ ಮಧುಮೇಹವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಪ್ರತೀ ವಾರ ಕನಿಷ್ಠ 150 ನಿಮಿಷಗಳಾದರೂ ಮಧ್ಯಮ ತೀವ್ರತೆಯಲ್ಲಿ ದೈಹಿಕ ವ್ಯಾಯಾಮ ಮಾಡಬೇಕು.
ರಕ್ತದ ಗ್ಲೂಕೋಸ್ ಮಟ್ಟವನ್ನು ನಿಯಮಿತವಾಗಿ ಚೆಕ್ ಮಾಡಿ: ಸಿಜಿಎಂ ಸಾಧನದ ಮೂಲಕ ಗ್ಲೂಕೋಸ್ ಮಟ್ಟವನ್ನು ನೋಡುತ್ತಾ ಇರಬೇಕು. ಆಗ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚು ಕಡಿಮೆಯಾದರೆ ನಿಮ್ಮ ಗಮನಕ್ಕೆ ಬರುತ್ತದೆ. ದಿನದಲ್ಲಿ ಕನಿಷ್ಠ 17 ಗಂಟೆಗಳ ಕಾಲ ನಿಮ್ಮ ಗ್ಲೂಕೋಸ್ ಮಟ್ಟವು ನಿಗದಿತ ಗ್ಲೂಕೋಸ್ ರೇಂಜ್ ನಲ್ಲಿ (70 – 180 mg/dl) ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಧೂಮಪಾನ ಮತ್ತು ಮದ್ಯಪಾನ ಮಾಡಬೇಡಿ: ಧೂಮಪಾನವು ನಿಮ್ಮ ರಕ್ತನಾಳಗಳ ಒಳಪದರವನ್ನು ಹಾನಿಗೊಳಿಸುತ್ತದೆ ಮತ್ತು ಮಧುಮೇಹದಿಂದ ಉಂಟಾಗುವ ನಿಮ್ಮ ಅಪಧಮನಿಗಳ ಕಿರಿದಾಗುವಿಕೆಯ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸುತ್ತದೆ. ಜೊತೆಗೆ ನೀವು ಮದ್ಯಪಾನವನ್ನೂ ಕಡಿಮೆ ಮಾಡಬೇಕು. ಯಾಕೆಂದರೆ ಅದರಿಂದ ಮಧುಮೇಹದ ಔಷಧಿಗಳು ಪರಿಣಾಮ ಬೀರುವುದಕ್ಕೆ ತೊಂದರೆಯಾಗುತ್ತದೆ ಮತ್ತು ರಕ್ತದ ಸಕ್ಕರೆ ಮಟ್ಟದ ಮೇಲೂ ಅದರಿಂದ ಪರಿಣಾಮ ಉಂಟಾಗುತ್ತದೆ.
ಒತ್ತಡ ನಿರ್ವಹಣೆ: ನೀವು ಒತ್ತಡಕ್ಕೆ ಒಳಗಾದಾಗ ನಿಮ್ಮ ದೇಹವು ಒತ್ತಡದ ಹಾರ್ಮೋನುಗಳನ್ನು ಸೃಷ್ಟಿಸುತ್ತದೆ. ಅದರಿಂದ ನಿಮ್ಮ ರಕ್ತದ ಸಕ್ಕರೆ ಮಟ್ಟವು ಜಾಸ್ತಿಯಾಗಬಹುದು ಮತ್ತು ಇನ್ಸುಲಿನ್ ಪ್ರತಿರೋಧ ಉಂಟಾಗಬಹುದು. ಕಾಲಾನಂತರದಲ್ಲಿ ಇದರಿಂದ ನಿಮ್ಮ ರಕ್ತದೊತ್ತಡ ಜಾಸ್ತಿಯಾಗುತ್ತದೆ. ಅದರಿಂದ ಹೃದ್ರೋಗ ಸಮಸ್ಯೆ ಉಂಟಾಗುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಹಾಗಾಗಿ ನೀವು ಒತ್ತಡವನ್ನು ನಿಯಂತ್ರಿಸಲೇಬೇಕು. ಒತ್ತಡವನ್ನು ಕಡಿಮೆ ಮಾಡಲು ಸಂಗೀತ ಕೇಳಿ, ಯೋಗ ಮಾಡಿ ಅಥವಾ ನೃತ್ಯ ಮಾಡಿ. ವಿಶೇಷವಾಗಿ ಪ್ರೀತಿಪಾತ್ರರ ಜೊತೆ ಸಮಯ ಕಳೆಯಿರಿ.