ರಶ್ಮಿಕಾಗೆ ಸೂಕ್ತ ಭದ್ರತೆ ನೀಡಲು ಕೊಡವ ಕೌನ್ಸಿಲ್ ಒತ್ತಾಯ: ಕೊಡಗಿನ ಬೆಡಗಿ ಪರ ನಿಂತ ಖ್ಯಾತ ನಟಿಯರು

Rashmika Mandanna

Share this post :

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕೊಡಗಿನ ಬೆಡಗಿ. ಇವರು ಅಭಿನಯಿಸಿದ ಮೊದಲ ಚಿತ್ರ ಕನ್ನಡದ್ದು. ಆದರೆ ರಶ್ಮಿಕಾ ಕನ್ನಡ ಸರಿಯಾಗಿ ಮಾತಾಡಲ್ಲ, ಹೈದರಾಬಾದ್ ನನ್ನ ಊರು ಅಂತ ಹೇಳಿದ್ದಕ್ಕೆ ವಿಪರೀತ ಟ್ರೋಲ್​ಗೆ ಗುರಿಯಾಗುತ್ತಿದ್ದಾರೆ. ಶಾಸಕ ರವಿಕುಮಾರ್ ಅವರಂತೂ ರಶ್ಮಿಕಾ ಮಂದಣ್ಣಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ಬೆದರಿಕೆ ಧ್ವನಿಯಲ್ಲಿ ಹೇಳಿದ್ದರು. ಇದೀಗ ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ನಿಂತಿರುವ ಕೊಡವ ನ್ಯಾಷನಲ್ ಕೌನ್ಸಿಲ್ ರಶ್ಮಿಕಾಗೆ ಹೆಚ್ಚುವರಿ ಭದ್ರತೆ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.

ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯ ಗೃಹ ಸಚಿವ ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ. ಕೊಡವ ಬುಡಕಟ್ಟು ಜನಾಂಗಕ್ಕೆ ಸೇರಿದ ರಶ್ಮಿಕಾ ಮಂದಣ್ಣ ತಮ್ಮ ಕಠಿಣ ಶ್ರಮ ಮತ್ತು ಪರಿಶ್ರಮದಿಂದ ಇಂದು ಭಾರತೀಯ ಚಿತ್ರರಂಗದಲ್ಲಿ ಅಪ್ರತಿಮ ಸ್ಥಾನ ಸಂಪಾದನೆ ಮಾಡಿದ್ದಾರೆ. ರಶ್ಮಿಕಾ ಪರಿಶ್ರಮ, ಪ್ರತಿಭೆಯನ್ನು ಗೊತ್ತಿರದ ಕೆಲವರು ಅನವಶ್ಯಕವಾಗಿ ಟೀಕೆ ಮಾಡುತ್ತಿದ್ದಾರೆ. ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿರುವುದು ಬೆದರಿಕೆಗೆ ಸಮವಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ.

ರಶ್ಮಿಕಾ ಶ್ರೇಷ್ಠ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ ಅವರ ಸ್ವಂತ ನಿರ್ಧಾರ ಮತ್ತು ಅವರ ಆಯ್ಕೆಗಳನ್ನು ಸ್ವಾತಂತ್ರ್ಯದ ಹಕ್ಕನ್ನು ನಾವೆಲ್ಲರೂ ಗೌರವಿಸಬೇಕು ಅದನ್ನು ಬಿಟ್ಟು ಬೇರೆ ಯಾರದ್ದೋ ಸೂಚನೆಯಂತೆ, ನಿರೀಕ್ಷೆಯಂತೆ ಇರಬೇಕು ಎಂದು ಒತ್ತಡ ಹೇರಬಾರದು ಎಂದಿರುವ ನಾಚಪ್ಪ ಅವರು ರಶ್ಮಿಕಾ ಮಂದಣ್ಣ ಅವರು ಕೊಡವ ಸಮಾಜಕ್ಕೆ ಸೇರಿರುವ ಕಾರಣದಿಂದಲೇ ಬೇಕು ಬೇಕೆಂದೇ ಹೀಗೆ ನಡೆದುಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗೆ ಮಾಡುವರನ್ನು ಕೊಡವ ಪೋಬಿಯಾ ಎಂದು ಗುರುತಿಸಬೇಕಾಗುತ್ತೆ ಎಂದು ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಶಾಸಕ ಗಣಿಗ ರವಿ ಅವರ ಹೇಳಿಕೆಗೆ ಕೂಡ ಉತ್ತರ ನೀಡಿರುವ ಎನ್‌.ಯು ನಾಚಪ್ಪ ಕಾವೇರಿ ನದಿಯನ್ನು ಬಹುವಾಗಿ ಪ್ರೀತಿಸುವ ಮಂಡ್ಯದ ಜನರನ್ನು ಪ್ರತಿನಿಧಿಸುವ ಶಾಸಕರು ಅದೇ ಕಾವೇರಿ ಮಾತೆಯ ಪುತ್ರಿಯಾಗಿರುವ ರಶ್ಮಿಕಾ ಮಂದಣ್ಣ ಅವರನ್ನು ಅಗೌರವದಿಂದ ಕಂಡಿರುವುದು ಬೇಸರದ ವಿಚಾರ ಎಂದು ಹೇಳಿದ್ದಾರೆ. ಶಾಸಕರು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಹಾಗೂ ಜನರನ್ನು ರಕ್ಷಿಸುವ ಪ್ರಮಾಣ ವಚನ ಸ್ವೀಕರಿಸಿದವರು. ಈ ರೀತಿ ಅರ್ಥಹೀನ ಟೀಕಾಪ್ರಹಾರ ಖಂಡನೀಯ ಎಂದು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

ರಶ್ಮಿಕಾ ಮಂದಣ್ಣ ಬೆನ್ನಿಗೆ ನಿಂತ ಖ್ಯಾತ ನಟಿಯರು
ಯಾರೋ ಒಬ್ಬರನ್ನು ನೆಗೆಟಿವ್ ಆಗಿ ಬ್ರಾಂಡ್ ಮಾಡುವುದು ಕೆಟ್ಟದು. ಯಾರು ಯಾವತ್ತು ಬೇಕಿದ್ದರೂ ತಮ್ಮ ಜರ್ನಿಯನ್ನು ಶುರು ಮಾಡಬಹುದು. 10 ಸಿನಿಮಾ ಫ್ಲಾಪ್ ಆಗಿ 1 ಹಿಟ್ ಕೊಟ್ಟವರು ಇದ್ದಾರೆ, ಆರಂಭದಿಂದ ಹಿಟ್ ಕೊಟ್ಟು ಮನೆಗೆ ಹೋಗಿರವವರು ಇದ್ದಾರೆ. ಇಲ್ಲಿ ಯಾರೂ ಗೋಲ್ಡನ್‌ ಲೆಗ್‌ ಐರನ್ ಲೆಗ್‌ ಅಂತ ಇಲ್ಲ. ಟ್ರೋಲ್‌ಗಳನ್ನು ರಶ್ಮಿಕಾ ಮಂದಣ್ಣ ನಿರ್ಲಕ್ಷ್ಯ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತದೆ. ಅವರು ಅವರ ಪಾಡಿಗೆ ಇದ್ದಾರೆ ನಾವು ಸುಮ್ಮನೆ ಮಾತನಾಡುತ್ತಿರುವುದು. ಅವರು ಎಲ್ಲಿ ಹೋಗಬೇಕು ಏನು ಮಾಡಬೇಕು ಅಂತ ಕ್ಲಾರಿಟಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ ನಾವು ಮಾತನಾಡಿ ಉಪಯೋಗವಿಲ್ಲ ಎಂದು ರಶ್ಮಿಕಾ ಪರ ಮಾತನಾಡಿದ್ದಾರೆ.

ನಟಿ ರಮ್ಯಾ ಮಾತನಾಡಿ, ಟ್ರೋಲ್‌ ಮಾಡುವುದನ್ನು ಎಲ್ಲರೂ ನಿಲ್ಲಿಸಬೇಕು ಅಂತ ಹೇಳ್ತೀನಿ.. ಉದಾಹರಣೆಗೆ, ನಟಿ ರಶ್ಮಿಕಾ ಬಗ್ಗೆ ಟ್ರೋಲ್ ಕೆಟ್ಟದಾಗಿರುತ್ತೆ, ಅದು ಸ್ಟಾಪ್ ಆಗಬೇಕು. ಅದರಲ್ಲೂ ಮುಖ್ಯವಾಗಿ ನಟಿಯರ ಬಗ್ಗೆ ಟ್ರೋಲ್ ಮಾಡೊದು ಹೆಚ್ಚು. ಕಾರಣ, ಅವರು ಸಾಫ್ಟ್ ಆಗಿರ್ತಾರೆ, ಅವರು ಅದಕ್ಕೆ ಏನೂ ಆಕ್ಷನ್ ತಗೊಳ್ಳೋದಿಲ್ಲ ಅನ್ನೋ ಕಾರಣಕ್ಕೆ.. ಆದರೆ, ಅದು ತಪ್ಪು, ಈ ಟ್ರೋಲ್ ಬಿಸಿನೆಸ್ ನಿಲ್ಲಬೇಕು ಎಂದಿದ್ದಾರೆ.