ಗೋಣಿಕೊಪ್ಪ : ಕ್ರೀಡಾ ಚಟುವಟಿಕೆಗಳ ಆಯೋಜನೆ ಮತ್ತು ಕ್ರೀಡಾ ಪ್ರತಿಭೆಗಳ ಉತ್ತೇಜನಕ್ಕೆ ಸಂಬಂಧಿಸಿದಂತೆ ಮಾತ್ರ ಸೀಮಿತವಾಗಿ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿಯನ್ನು (ಕೆ.ಎಂ.ಎಸ್. ಎ.) ನೂತನವಾಗಿ ಅಸ್ತಿತ್ವಕ್ಕೆ ತರಲಾಗಿದೆ. ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷ ಆಲೀರ ರಶೀದ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ಸ್ಥಾಪನೆ ಕುರಿತು ವಿರಾಜಪೇಟೆಯಲ್ಲಿ ನಡೆದ ರಚನಾ ಸಭೆಯಲ್ಲಿ ಈ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಅಕಾಡೆಮಿಯ ಪ್ರಧಾನ ಕಾರ್ಯದರ್ಶಿಗಳಾಗಿ, ಹಿರಿಯ ಕ್ರೀಡಾಪಟು ಕೊಟ್ಟೋಳಿ ಗ್ರಾಮದ ಮೀತಲತಂಡ ಎಂ. ಇಸ್ಮಾಯಿಲ್ ಮತ್ತು ಕೋಶಾಧಿಕಾರಿಗಳಾಗಿ ಕಾಟ್ರಕೊಲ್ಲಿಯ ಆಲೀರ ಎ. ಅಬ್ದುಲ್ ಅಜ್ಹೀಜ್ಹ್ ಅವರನ್ನು ಸಭೆ ಅವಿರೋಧವಾಗಿ ಆಯ್ಕೆಗೊಳಿಸಿತು.
ಉಳಿದಂತೆ ಅಕಾಡೆಮಿಯ ಉಪಾಧ್ಯಕ್ಷರಾಗಿ ವಿರಾಜಪೇಟೆಯ ಕೇಂಗೋಟಂಡ ಎಸ್. ಸೂಫಿ, ಕುಂಜಿಲದ ಕುಂಡಂಡ ಎ. ರಜ್ಹಾಕ್, ಜಂಟಿ ಕಾರ್ಯದರ್ಶಿಗಳಾಗಿ ಕೊಳಕೇರಿಯ ಕಣ್ಣಪ್ಪಣೆ ವೈ. ಅಶ್ರಫ್ ಹಾಗೂ ಕ್ರೀಡಾ ಸಂಚಾಲಕರಾಗಿ ಕೊಂಡಂಗೇರಿಯ ಕತ್ತಣಿರ ಹೆಚ್. ಅಬ್ದುಲ್ ರಹಿಮಾನ್ (ಅಂದಾಯಿ) ಅವರು ಅವಿರೋಧವಾಗಿ ನೇಮಕಗೊಂಡಿದ್ದಾರೆ.
ನಿರ್ದೇಶಕರಾಗಿ ಎಡಪಾಲದ ಕುಪ್ಪೋಡಂಡ ಎ ಅಬ್ದುಲ್ ರಶೀದ್, ಕಾಟ್ರಕೊಲ್ಲಿಯ ಆಲೀರ ಹುಸೈನ್, ಐಮಂಗಲದ ಕೋಳುಮಂಡ ಎಸ್. ರಫೀಕ್, ಹುದೂರಿನ ಪುಂಜೆರ ಹೆಚ್. ಅಬ್ದುಲ್ಲ, ಹಳ್ಳಿಗಟ್ಟಿನ ಚಿಮ್ಮಿಚ್ಚಿರ ಕೆ. ಅಬ್ದುಲ್ಲ ಮತ್ತು ಕಾಟ್ರಕೊಲ್ಲಿಯ ಅಕ್ಕಳತಂಡ ಎ. ಶಫೀಕ್ ಅವರನ್ನು ಸಭೆ ಅವಿರೋಧವಾಗಿ ನೇಮಕಗೊಳಿಸಿ ಅಕಾಡೆಮಿಯ ಕಾರ್ಯ ಚಟುವಟಿಕೆಗಳನ್ನು ಪ್ರಾರಂಭಿಸುವಂತೆ ಸೂಚಿಸಿತು.
ಈ ಕುರಿತು ಮಾತನಾಡಿರುವ ನೂತನ ಅಧ್ಯಕ್ಷರಾದ ಆಲೀರ ರಶೀದ್, ಅಕಾಡೆಮಿಗೆ ಅಗತ್ಯವಿರುವ ಸೂಕ್ತವಾದ ಲಾಂಛನವನ್ನು ಕ್ರೀಡಾ ತಜ್ಞರ ತಂಡವೊಂದು ವಿನ್ಯಾಸಗೊಳಿಸುತ್ತಿದೆ. ಈ ಕಾರ್ಯ ಪೂರ್ಣಗೊಂಡ ಕೂಡಲೇ ಮೊದಲ ಕಾರ್ಯಕ್ರಮವಾಗಿ ಲಾಂಛನವನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಗುವುದು. ನಂತರ ಅಕಾಡೆಮಿಯ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.




