ಕೊಡವ ಹಾಕಿ ಪ್ರೀಮಿಯರ್‌ ಲೀಗ್‌ – ಪಳೆ ತಾಲೂಕ್ ಚಾಂಪಿಯನ್, ಕೂರ್ಗ್ ಟೈಟಾನ್ಸ್ ರನ್ನರಪ್..!

Share this post :

ಮೈಸೂರು : ಚಾಮುಂಡಿ ವಿಹಾರ ಹಾಕಿ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಕೊಡವ ಹಾಕಿ ಪ್ರೀಮಿಯರ್ ಲೀಗ್‌ನಲ್ಲಿ ಪಳೆ ತಾಲೂಕ್ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.
ಪಳೆ ತಾಲೂಕ್ ಹಾಗೂ ಕೂರ್ಗ್ ಟೈಟಾನ್ಸ್ ನಡುವೆ ಫೈನಲ್‌ ಪಂದ್ಯ ನಡೆಯಿತು. ಪಳೆ ತಾಲೂಕ್ ತಂಡ 3-1 ಗೋಲುಗಳ ಅಂತರದಲ್ಲಿ ಗೆದ್ದು ಕೊಡವ ಹಾಕಿ ಪ್ರೀಮಿಯರ್ ಲೀಗ್ ಚಾಂಪಿಯನ್ ಪಟ್ಟ ಅಲಂಕರಿಸಿತು. ರನ್ನರಪ್‌ ಪ್ರಶಸ್ತಿಗೆ ಕೂರ್ಗ್ ಟೈಟಾನ್ಸ್ ಭಾಜನವಾದರೆ, ಮೂರನೇ ಸ್ಥಾನಕ್ಕೆ ಕೊಡವು ವಾರಿಯರ್ಸ್ ತಂಡ ತೃಪ್ತಿ ಪಟ್ಟುಕೊಂಡಿತು. ಗೆದ್ದ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಲಾಯಿತು.
ಮೈಸೂರು ಕೊಡವ ಸಮಾಜ, ಹಾಕಿ ಮೈಸೂರು ಹಾಗು ಮೈಸೂರು ಕೊಡವ ಸಮಾಜ ಯೂತ್ ವಿಂಗ್ ಸಹಯೋಗದಲ್ಲಿ ಮೂರು ದಿನ ಕಾಲ ನಡೆದ ಹಾಕಿ ಹಬ್ಬದಲ್ಲಿ ಕೂರ್ಗ್ ಟೈಟಾನ್ಸ್, ಕೂರ್ಗ್ ಯುನೈಟೆಡ್, ಎಂಟಿಬಿ ರಾಯಲ್ಸ್, ಕೊಡವ ಟ್ರೈಬ್, ಪಳೆ ತಾಲೂಕ್, ಅಂಜಿಗೇರಿ ನಾಡ್, ಕೊಡವು ವಾರಿಯರ್ಸ್, ಕಾಕೋಟ್ ಸ್ಟ್ರೈಕರ್ಸ್, ಸೌತ್ ಸೈಡ್ ರೇಂಜರ್ಸ್ ಹಾಗು ಕನೆಕ್ಟಿಂಗ್ ಕೊಡವಾಸ್ ತಂಡಗಳು ಪಾಲ್ಗೊಂಡಿದ್ದವು. ಚೆಪ್ಪುಡಿರ ಕಾರ್ಯಪ್ಪ, ಚೋಕಿರ ಅನಿತಾ ದೇವಯ್ಯ ಹಾಗೂ ಅಜ್ಜೆಟ್ಟಿರ ವಿಕ್ರಮ್ ಉತ್ತಪ್ಪ ಪಂದ್ಯಾಟದ ವೀಕ್ಷಕ ವಿವರಣೆ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಶ್ರೀರಾಂಪುರ ಶಾಸಕ ಟಿ.ಎಸ್. ಶ್ರೀವತ್ಸ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ, ಹಾಕಿ ಮೈಸೂರು ಅಧ್ಯಕ್ಷ ಕೊಂಗಂಡ ದಿಲೀಪ್, ಮೈಸೂರು ಕೊಡವ ಸಮಾಜ ಅಧ್ಯಕ್ಷ ಪೊಂಜಂಡ ಗಣಪತಿ, ಯುಕೋ ಅಧ್ಯಕ್ಷ ಕೊಕ್ಕಲೆಮಡ ಮಂಜು ಚಿನ್ನಪ್ಪ, ಡಾ.ಸೋನಿಯಾ ಮಂದಪ್ಪ, ವಂಸಿ ಮೆರ್ಲಾ, ಭಾರತೀಯ ಹಾಕಿ ಆಟಗಾರ ಸಿ.ಬಿ. ಪೂವಣ್ಣ, ಸಿನಿ ತಾರೆಯರಾದ ಅಣ್ಣಾಡಿಯಂಡ ವಿಕಾಶ್ ಉತಯ್ಯ, ಐಮುಡಿಯಂಡ ಶ್ವೇತಾ ಚಂಗಪ್ಪ, ತಾಪಂಡ ಕೃಷಿ ಮತ್ತಿತರರು ಪಾಲ್ಗೊಂಡಿದ್ದರು.

ವರದಿ: ಚೆಯ್ಯಂಡ ಬನೀತ್ ಬೋಜಣ್ಣ