ಸಾಂಸ್ಕೃತಿಕ ನಗರಿಯಲ್ಲಿ ಕೊಡವ ಹಾಕಿ ಪ್ರೀಮಿಯರ್‌ ಲೀಗ್‌ – ಜೂ. 27ರಿಂದ ಮೈಸೂರಿನಲ್ಲಿ ಚೊಟ್ಟಲ ಟೂರ್ನಿ

Share this post :

ವರದಿ : ಚೆಯ್ಯಂಡ ಬನೀತ್ ಬೋಜಣ್ಣ

ಮೈಸೂರು : ಕೊಡಗು ಅಥವಾ ಕೊಡವರು ಎಂದಾಗ ನಮಗೆ ನೆನಪಿಗೆ ಬರುವ ಹಲವು ವಿಷಯಗಳಲ್ಲಿ ಕ್ರೀಡೆಯು ಒಂದು. ಅದರಲ್ಲೂ ಹಾಕಿ ಕ್ರೀಡೆ ಕೊಡಗಿನಲ್ಲಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಭಾರತದ ಹಾಕಿ ತಂಡಕ್ಕೆ ನಮ್ಮ ಜಿಲ್ಲೆಯ ಅಸಂಖ್ಯಾತ ಆಟಗಾರರು ಆಡಿದ್ದಾರೆ. ಇದರಿಂದ ಕೊಡಗನ್ನು ಭಾರತದ ಹಾಕಿಯ ತೊಟ್ಟಿಲು ಎಂದು ಕರೆಯುತ್ತಾರೆ.
ಹಾಕಿಯ ಮೂಲಕ ಕೊಡವ ಜನಾಂಗವನ್ನು ಮತ್ತಷ್ಟು ಒಗ್ಗೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಕೊಡಗಿನಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವ ನಡೆಯುತ್ತದೆ. ಅದರಂತೆ ಮೈಸೂರಿನಲ್ಲಿ ಈ ವರ್ಷ ವಿಭಿನ್ನವಾದ ಒಂದು ಹಾಕಿ ಹಬ್ಬ ಆಯೋಜನೆಗೊಳ್ಳುತ್ತಿದೆ. ಮೈಸೂರು ಕೊಡವ ಸಮಾಜದ ಯೂತ್ ವಿಂಗ್‌ನ ವತಿಯಿಂದ ಕೊಡವ ಹಾಕಿ ಪ್ರೀಮಿಯರ್ ಲೀಗ್ ಹಮ್ಮಿಕೊಳ್ಳಲಾಗಿದೆ. ಜೂನ್ 27 ರಿಂದ 29ರವರೆಗೆ ಮೈಸೂರಿನ ಚಾಮುಂಡಿ ವಿಹಾರ ಟರ್ಫ್ ಮೈದಾನದಲ್ಲಿ ಈ ಟೂರ್ನಿ ನಡೆಯಲಿದೆ.
ಈ ಪಂದ್ಯಾಟ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಹತ್ತು ತಂಡಗಳು ಭಾಗವಹಿಸಲಿದ್ದು, ತಂಡಕ್ಕೆ ಆಟಗಾರರನ್ನು ಬಿಡ್ಡಿಂಗ್‌ ಮೂಲಕ ಖರೀದಿಸಬೇಕಾಗುತ್ತದೆ. ಆ ಪ್ರಕ್ರಿಯೆಯನ್ನು ಆಯೋಜಕರು ಈಗಾಗಲೇ ಪೂರ್ಣಗೊಳಿಸಿದ್ದಾರೆ. 220ಕ್ಕೂ ಹೆಚ್ಚು ಪ್ರತಿಭಾನ್ವಿತ ಆಟಗಾರರನ್ನು ತಂಡಗಳು ಖರೀದಿಸಿವೆ. ಮೂರು ದಿನಗಳ ಕಾಲ ಈ ಪಂದ್ಯಾಟ ನಡೆಯಲಿದ್ದು, ಇದರಿಂದ ಕೊಡವ ಸಮುದಾಯದ ಯುವ ಹಾಕಿ ಆಟಗಾರರಿಗೆ ಪ್ರೋತ್ಸಾಹ ಸಿಗಲಿದೆ. ಇಂತಹ ಪಂದ್ಯಗಳಿಂದ ಕರ್ನಾಟಕ ಹಾಗೂ ಭಾರತ ಹಾಕಿ ತಂಡಕ್ಕೆ ಇನ್ನಷ್ಟು ಪ್ರತಿಭಾನ್ವಿತ ಹಾಕಿ ಆಟಗಾರರು ಸಿಗುವ ಭರವಸೆ ಇದೆ. ಕೋಟೇರ ವೇದಿತ್ ಉತ್ತಯ್ಯ ಅವರ ನೇತೃತ್ವದ ಕೊಡವ ಸಮಾಜ ಯೂತ್ ವಿಂಗ್ ತಂಡ ಪಂದ್ಯಾವಳಿಯ ಯಶಸ್ಸಿಗಾಗಿ ಬೇಕಾದ ಎಲ್ಲಾ ಸಿದ್ಧತೆಯಲ್ಲಿ ತೊಡಗಿದ್ದು, ಯುವಕರ ತಂಡ ಹಗಲಿರುಳು ಶ್ರಮಿಸುತ್ತಿದೆ.