ಮಡಿಕೇರಿ : ಮಡಿಕೇರಿಯ ಶ್ರೀ ಮಲ್ಲಿಕಾರ್ಜುನ ಬಡಾವಣೆಯಲ್ಲಿರುವ ಶ್ರೀ ಕೋದಂಡರಾಮ(kodanda rama) ದೇವಾಲಯದ ರಾಮೋತ್ಸವ ಸಮಿತಿಯ ವತಿಯಿಂದ ಈ ಬಾರಿ ವಿವಿಧತೆಯಲ್ಲಿ ಏಕತೆ ಎಂಬ ಘೋಷವಾಕ್ಯದೊಂದಿಗೆ ೩೫ನೇ ವರ್ಷದ ರಾಮನವಮಿಯ ರಾಮೋತ್ಸವ ಹಾಗೂ ದೇವಾಲಯದ ದ್ವಿತೀಯ ವರ್ಷದ ಪ್ರತಿಷ್ಠಾಪನಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಶ್ರೀ ಕೋದಂಡ ರಾಮೋತ್ಸವ ಮಹಿಳಾ ಸಮಿತಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ(womens) ಸಮಿತಿಯ ಅಧ್ಯಕ್ಷೆ ಭಾರತಿ ರಮೇಶ್, ಏ.೫ ಮತ್ತು ೬ ರಂದು ನಡೆಯುವ ರಾಮೋತ್ಸವ ಕುರಿತು ಮಾಹಿತಿ ನೀಡಿದರು. ಎಲ್ಲಾ ದೇವಾಲಯಗಳ ಮತ್ತು ಸಂಘ ಸಂಸ್ಥೆಗಳ ಪ್ರಮುಖರು, ಕಾರ್ಯಕರ್ತರು, ಹಾಗೂ ಸುತ್ತಮುತ್ತಲಿನ ಎಲ್ಲಾ ಸಮುದಾಯಗಳ ಜನರು, ಭಕ್ತರನ್ನು ಒಗ್ಗೂಡಿಸಿಕೊಂಡು ರಾಮೋತ್ಸವವನ್ನು ಆಚರಿಸಲಾಗುತ್ತಿದ್ದು, ಉಪಸಮಿತಿಗಳನ್ನು ರಚಿಸಲಾಗಿದೆ. ಮಹಿಳಾ ಸಮಿತಿಯು ಬಹಳ ಮುಖ್ಯವಾದ ಜವಾಬ್ದಾರಿಯನ್ನು ನಿಭಾಯಿಸಲಿದೆ. ಮಹಿಳಾ ಸಮಿತಿಯಲ್ಲಿರುವವರು ವಿವಿಧ ದೇವಾಲಯ, ಸಂಘ ಸಂಸ್ಥೆಗಳಲ್ಲಿ ಸೇವೆಸಲ್ಲಿಸಿದವರಾಗಿದ್ದು, ರಾಮೋತ್ಸವದ ಮೂಲಕ ಶ್ರೀ ರಾಮನ(Rama) ಸೇವೆ ಮಾಡಲು ಉತ್ತಮ ಅವಕಾಶ ದೊರೆತಿದೆ.
ಮಹಿಳಾ ಸಮಿತಿಯು ಅನೇಕ ಉಪ ಸಮಿತಿಗಳನ್ನು ರಚಿಸಿಕೊಂಡಿದ್ದು, ಕಳಶ ಸಮಿತಿಯ ಅಧ್ಯಕ್ಷರಾಗಿ ಲಿಖಿತಾ ಸುರೇಂದ್ರ, ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಪೂರ್ಣಿಮಾ ಜಗದೀಶ್, ಭಜನಾ ಸಮಿತಿಯ ಅಧ್ಯಕ್ಷರಾಗಿ ವಿಶಾಲಾಕ್ಷಿ ಸುಕುಮಾರ್, ಪ್ರಸಾದ ಸಮಿತಿಯ ಅಧ್ಯಕ್ಷರಾಗಿ ವಿದ್ಯಾ ವೆಂಕಟರಾಮನ್ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಏ.೫ ಮತ್ತು ೬ ರಂದು ಭಕ್ತಿಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಏ.೫ರಂದು ಕೇಸರಿಮಯವಾದ ಅದ್ಭುತ ಮೆರವಣಿಗೆ ಸಾಗಲಿದೆ. ಮಹಿಳೆಯರು ಹಾಗೂ ಮಕ್ಕಳಿಗಾಗಿ ಕ್ರೀಡಾ ಸಮಿತಿ ರಚನೆಗೊಂಡಿದ್ದು, ಆಟೋಟ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿದೆ.
ಎರಡು ದಿನಗಳ ರಾಮೋತ್ಸವದಲ್ಲಿ ೧೦ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳಲಿದ್ದು, ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಭಾರತಿ ರಮೇಶ್ ಮಾಹಿತಿ ನೀಡಿದರು.
ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಜಯಂತಿ ಶೆಟ್ಟಿ ಮಾತನಾಡಿ ಏ.೫ ರಂದು ಮಧ್ಯಾಹ್ನ ೩ ಗಂಟೆಗೆ ನಗರದ ಗಾಂಧಿ ಮೈದಾನದಿಂದ ಶ್ರೀ ಕೋದಂಡರಾಮ ದೇವಾಲಯದವರೆಗೆ ರಾಮ ದೇವರ ಮೆರವಣಿಗೆ ನಡೆಯಲಿದೆ. ಭಜನಾ ತಂಡ, ಚಂಡೆ ವಾದ್ಯ, ವಿವಿಧ ಕಲಾ ತಂಡಗಳು, ಕಳಶ ಹೊತ್ತ ಮಹಿಳೆಯರು ಹಾಗೂ ಭಕ್ತರು ವಾದ್ಯಗೋಷ್ಠಿಗಳೊಂದಿಗೆ ನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ತೆರಳಲಿದ್ದಾರೆ ಎಂದರು.
ಮೆರವಣಿಗೆ ದೇವಾಲಯವನ್ನು ತಲುಪಿದ ನಂತರ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿದ್ದು, ಎಲ್ಲಾ ಸಮುದಾಯಗಳ ಸಾಂಪ್ರದಾಯಿಕ ಕಲೆಗಳು ಪ್ರದರ್ಶನಗೊಳ್ಳಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಏ.೫ ಮತ್ತು ೬ ರಂದು ಎರಡು ದಿನ ಸಂಜೆ ನಡೆಯಲಿದೆ.
ಏ.೬ ರಂದು ಬೆಳಿಗ್ಗೆ ಗಣಪತಿ ಹೋಮ, ಪ್ರತಿಷ್ಠಾಪನಾ ಉತ್ಸವ ಮತ್ತು ರಾಮೋತ್ಸವದ ಪ್ರಯುಕ್ತ ವಿಶೇಷ ಪೂಜೆ ಮತ್ತು ಮಹಾಪೂಜೆ ಜರುಗಲಿದೆ ಎಂದು ತಿಳಿಸಿದರು.
ಭಜನಾ ಸಮಿತಿಯ ಮಹಿಳಾ ಅಧ್ಯಕ್ಷೆ ವಿಶಾಲಾಕ್ಷಿ ಸುಕುಮಾರ್ ಮಾತನಾಡಿ ಶ್ರೀಕೋದಂಡ ರಾಮೋತ್ಸವಕ್ಕೆ ೧೨ ಕ್ಕೂ ಹೆಚ್ಚು ಭಜನಾ ತಂಡಗಳು ವಿಶೇಷ ಮೆರುಗು ನೀಡಲಿದ್ದು, ಉತ್ಸವದಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಉಪಾಧ್ಯಕ್ಷೆ ಸುಜಾತ ಜಗದೀಶ್ ಮಾತನಾಡಿ ಏ.೫ರಂದು ಶ್ರೀರಾಮನ ಮೆರವಣಿಗೆ ಸಂದರ್ಭ ಕಳಶ ಹೊತ್ತ ಮಹಿಳೆಯರು ಕೇಸರಿ ವಸ್ತçಧಾರಿಗಳಾಗಿ ಸಾಗಲಿದ್ದಾರೆ ಎಂದರು.
ಮತ್ತೊಬ್ಬ ಉಪಾಧ್ಯಕ್ಷೆ ಸರಿತಾ ಅಯ್ಯಪ್ಪ ಮಾತನಾಡಿ ಎರಡು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಾ.೨೫ ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಆಸಕ್ತ ತಂಡಗಳು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಮಹೇಶ್ (೯೬೬೩೩೨೬೨೦೪) ಅವರನ್ನು ಸಂಪರ್ಕಿಸುವಂತೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿತಾ ಸುಧಾಕರ್ ಇದ್ದರು.