ಕೊಡಗು ಪತ್ರಕರ್ತರ ಸಂಘ(ರಿ) ಕ್ಷೇಮಾಭಿವೃದ್ಧಿ ಸಮಿತಿಯಿಂದ ಬೃಹತ್ ಆರೋಗ್ಯ ತಪಾಸಣಾ ಉಚಿತ ಶಿಬಿರ

Share this post :

ಮಡಿಕೇರಿ : ಕೊಡಗು ಪತ್ರಕರ್ತರ ಸಂಘ(ರಿ)ಇದರ ಕ್ಷೇಮಾಭಿವೃದ್ಧಿ ಸಮಿತಿಯಿಂದ 2025 ರ ಸೆಪ್ಟೆಂಬರ್‌ 12ರಂದು ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ಪತ್ರಕರ್ತರು, ಪತ್ರಕರ್ತರ ಕುಟುಂಬ ವರ್ಗ, ಪತ್ರಿಕಾ ಕ್ಷೇತ್ರದ ಸಿಬ್ಬಂದಿ, ಪತ್ರಿಕಾ ವಿತರಕರು ಹಾಗೂ ಕುಟುಂಬದವರಿಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆಯ 15 ವಿಭಾಗಗಳ ನುರಿತ ತಜ್ಞರುಗಳು ಹಾಗೂ ವೈದ್ಯರುಗಳು ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ನೇತ್ರ ತಜ್ಞರು, ಜನರಲ್ ಮೆಡಿಸಿನ್, ಮೂಳೆ ತಜ್ಞರು, ಇ.ಎನ್.ಟಿ. ತಜ್ಞರು, ಶ್ವಾಸಕೋಶ ತಜ್ಞರು, ದಂತ ವೈದ್ಯಕೀಯ, ಶಸ್ತ್ರ ಚಿಕಿತ್ಸಕರು, ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಶ್ರವಣ ಆರೋಗ್ಯ ತಜ್ಞರು, ಮಾನಸಿಕ ಆರೋಗ್ಯ ತಜ್ಞರು ಮುಂತಾದ 15 ವಿಭಾಗಗಳ ನುರಿತ ತಜ್ಞರು ಈ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಆರೋಗ್ಯಕ್ಕೆ ಸಂಬಂಧಿಸಿದ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಆಯುಷ್ಮಾನ್ ಭಾರತ್ ಯೋಜನಾಧಿಕಾರಿ ಕೂಡ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಈ ಶಿಬಿರ ನಡೆಯಲಿದ್ದು, ಶಾಸಕ ಡಾ. ಮಂತರ್‌ ಗೌಡ ಉದ್ಘಾಟಿಸಲಿದ್ದಾರೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆಯ ಡೀನ್ ನಿರ್ದೇಶಕ ಡಾ. ಲೋಕೇಶ್ ಎ.ಜೆ, ವೈದ್ಯಕೀಯ ಅಧೀಕ್ಷಕ ಡಾ. ಹೆಚ್.ಕೆ. ಸೋಮಶೇಖರ್, ಜಿಲ್ಲಾ ಸರ್ಜನ್ ಡಾ. ನಂಜುಂಡಯ್ಯ ಹಾಗೂ ತುರ್ತು ಚಿಕಿತ್ಸಾ ಘಟಕದ ಮುಖ್ಯಸ್ಥ ಡಾ. ಮೋಹನ್‌ ಅಪ್ಪಾಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರೋಗ್ಯ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ನೀಡಲಿದ್ದಾರೆ.
ಕೊಡಗು ಪತ್ರಕರ್ತರ ಸಂಘ(ರಿ) ಕ್ಷೇಮಾಭಿವೃದ್ಧಿ ಸಮಿತಿ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಈ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಪತ್ರಕರ್ತರು, ಪತ್ರಕರ್ತರ ಕುಟುಂಬ ವರ್ಗದವರು, ಪತ್ರಿಕಾ ಕ್ಷೇತ್ರದ ಸಿಬ್ಬಂದಿ, ಪತ್ರಿಕಾ ವಿತರಕರು ಹಾಗೂ ಕುಟುಂಬವರ್ಗದವರು ಬಂದು ಎಲ್ಲಾ ವಿಭಾಗಗಳ ನುರಿತ ತಜ್ಞರಿರುವ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೊಡಗು ಪತ್ರಕರ್ತರ ಸಂಘ, ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿಕುಮಾರ್ ಜಿ.ವಿ. ಹಾಗೂ ಪ್ರಧಾನ ಕಾರ್ಯದರ್ಶಿ ಅರುಣ್‌ ಕೂರ್ಗ್ ಪತ್ರಿಕಾ ಪ್ರಕಟಣೆಯ ಮೂಲಕ ಕೋರಿಕೊಂಡಿದ್ದಾರೆ.

coorg buzz
coorg buzz