ಮಡಿಕೇರಿ: ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚಬಾರದು, ಪರಿಶಿಷ್ಟ ಸಮುದಾಯಗಳಿಗೆ ಮೀಸಲಿಟ್ಟ ಅನುದಾನವನ್ನು ಬೇರೆಡೆಗೆ ಬಳಸದಿರಿ, ಕಾಫಿ ಉತ್ಪಾದನೆ ಕುಂಠಿತವಾಗಿದ್ದು ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯ ಹಳೆಯ ಖಾಸಗಿ ಬಸ್‌ನಿಲ್ದಾಣದಲ್ಲಿ ಅಹೋರಾತ್ರಿ ಧರಣಿ ಪ್ರಾರಂಭಿಸಿದೆ. ಒಂದು ವೇಳೆ ಬೇಡಿಕೆಗಳು ಈಡೇರದೇ ಹೋದರೆ ಮಾರ್ಚ್ 11ರಂದು ಕೊಡಗು ಜಿಲ್ಲಾ ಬಂದ್‌ಗೆ ಕರೆ ನೀಡಲಾಗುವುದು ಎಂದು ಕೊಡಗು ಜಿಲ್ಲಾ ಬಿಜೆಪಿ ಹೇಳಿದೆ.
ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚದೇ ಉಳಿಸಬೇಕು, ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಬಾರದು ಹಾಗೂ ಇಲ್ಲಿನ ಸಿ ಮತ್ತು ಡಿ ಭೂಮಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಈ ಮೂರೂ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದರೆ ಬಂದ್‌ಗೆ ಕರೆ ನೀಡುವುದಿಲ್ಲ. ಆದರೆ, ಸರ್ಕಾರ ಎಂದಿನಂತೆ ನಿರ್ಲಕ್ಷ್ಯ ಧೋರಣೆ ತಳೆದರೆ ಬಂದ್‌ಗೆ ಕರೆ ನೀಡುವುದು ಖಚಿತ ಎಂದಿದ್ದಾರೆ.
ಧರಣಿಯನ್ನು ಜಿಲ್ಲಾಧಿಕಾರಿ ಕಚೇರಿ ಮುಂಭಾಗವೇ ನಡೆಸಬೇಕಾಗಿತ್ತು. ಆದರೆ, ಅದರ ಪಕ್ಕದಲ್ಲೆ ಪಿಯು ಪರೀಕ್ಷಾ ಕೇಂದ್ರ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಪ್ರತಿಭಟನೆಯನ್ನು ಹಳೆಯ ಖಾಸಗಿ ಬಸ್‌ನಿಲ್ದಾಣದಲ್ಲಿ ನಡೆಸಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ ತಿಳಿಸಿದರು.
ಕೊಡಗು ಜಿಲ್ಲಾ ಬಿಜೆಪಿ ಬೇಡಿಕೆಗಳು
* ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚಬಾರದು
* ದೇವಸ್ಥಾನ ಬಳಕೆಯ ವನ್ಯಜೀವಿ ಉತ್ಪನ್ನಗಳಿಗೆ ಅವಕಾಶ ನೀಡಿ
* ಸಿ ಮತ್ತು ಡಿ ಭೂಮಿಯನ್ನು ಮೀಸಲು ಅರಣ್ಯ ಎಂದು ಮಾಡಬಾರದು
* ಕಾಫಿ ಉತ್ಪಾದನೆ ಕುಂಠಿತವಾಗಿದ್ದು ಪರಿಹಾರ ನೀಡಬೇಕು
* ವಿದ್ಯಾನಿಧಿ ಯೋಜನೆಯನ್ನು ಮುಂದುವರಿಸಬೇಕು
* ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕು
* ವನ್ಯಜೀವಿ – ಮಾನವ ಸಂಘರ್ಷ ತಡೆಗೆ ಶಾಶ್ವತ ಯೋಜನೆ ರೂಪಿಸಬೇಕು
* ಖಾಸಗಿ ಭೂಮಿಯಲ್ಲಿ ಮರಗಳ ಗಣತಿ ನಡೆಸಬಾರದು
* ಪರಿಶಿಷ್ಟ ಸಮುದಾಯಗಳಿಗೆ ಮೀಸಲಿಟ್ಟ ಅನುದಾನವನ್ನು ಬೇರೆಡೆಗೆ ಬಳಸದಿರಿ