ಪೊನ್ನಂಪೇಟೆ: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ (ಕೆ.ಎಂ.ಇ.ಎಫ್.) ಸಹಯೋಗದಲ್ಲಿ ಸಂಸ್ಥೆಯ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿ ವರ್ಷದಂತೆ ಈ ಸಾಲಿನಲ್ಲೂ ಕೆ.ಎಂ.ಎ. ಪ್ರತಿಭಾ ಪುರಸ್ಕಾರ-2025 ಅನ್ನು ನೀಡಲು ಉದ್ದೇಶಿಸಲಾಗಿದ್ದು, ಈ ಕುರಿತು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
2024-25ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ತೇರ್ಗಡೆ ಹೊಂದಿ ಇದೀಗ ವಿದ್ಯಾಭ್ಯಾಸ ಮುಂದುವರಿಸುತ್ತಿರುವ ಕೆ.ಎಂ.ಎ. ಸದಸ್ಯರ ಮಕ್ಕಳು “ಕೆ. ಎಂ. ಎ. ಪ್ರತಿಭಾ ಪುರಸ್ಕಾರ-2025″ಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಎರಡೂ ವಿಭಾಗದಲ್ಲೂ ಶೇ.75%ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಎರಡೂ ವಿಭಾಗಗಳಲ್ಲಿ ಸಲ್ಲಿಕೆಯಾದ ಅರ್ಜಿಗಳ ಪೈಕಿ ಅತೀ ಹೆಚ್ಚು ಅಂಕ ಪಡೆದ ಆಧಾರದಲ್ಲಿ ತಲಾ13 ಅರ್ಜಿಗಳನ್ನು ಅಂತಿಮವಾಗಿ ಪರಿಗಣಿಸಲಾಗುವುದು. ಇದರಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ, ಇನ್ನುಳಿದ 10 ಅರ್ಹ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ಕೆ.ಎಂ.ಎ ಸದಸ್ಯರ ಪದವೀಧರ ಮಕ್ಕಳಿಗಾಗಿ ‘ಕೆ. ಎಂ. ಎ. ಪದವಿ ಪುರಸ್ಕಾರ’ವನ್ನು ಪ್ರಸ್ತುತ ವರ್ಷದಿಂದ ನೂತನವಾಗಿ ಆರಂಭಿಸಲು ನಿರ್ಧರಿಸಲಾಗಿದೆ. 2023-24ನೇ ಸಾಲಿನಲ್ಲಿ ಪದವೀಧರಾಗಿರುವ ಕೆ.ಎಂ.ಎ. ಸದಸ್ಯರ ಅರ್ಹ ಮಕ್ಕಳಿಂದ ಪದವಿ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಕಲೆ, ವಾಣಿಜ್ಯ, ವಿಜ್ಞಾನ ಹಾಗೂ ವೃತ್ತಿಪರ ಕೋರ್ಸುಗಳಾದ ಬಿ.ಇ., ಬಿ.ಟೆಕ್., ಬಿಬಿಎ, ಬಿಸಿಎ, ಬಿಎಚ್ಎಂ, ಬಿ.ಫಾರ್ಮ, ಬಿ.ಎಡ್., ಎಂ.ಬಿ.ಬಿ.ಎಸ್., ಬಿ.ಡಿ.ಎಸ್., ಬಿ.ಎ.ಎಂ. ಎಸ್., ಎಲ್.ಎಲ್. ಬಿ., ಪತ್ರಿಕೋದ್ಯಮ ಪದವಿ ಸೇರಿದಂತೆ ಮಾನ್ಯತೆ ಪಡೆದ ವಿದ್ಯಾಲಯಗಳಿಂದ ಪದವಿ ಪಡೆದ ಅರ್ಹ ಪದವೀಧರರು ಅರ್ಜಿಯೊಂದಿಗೆ ಪದವಿ ಪ್ರಮಾಣ ಪತ್ರ,ಆಧಾರ್ ಪ್ರತಿ, ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಮೂರು ಭಾವಚಿತ್ರಗಳನ್ನು ದಿನಾಂಕ 20-08-2025ರೊಳಗೆ ಸಲ್ಲಿಸಬೇಕಾಗಿದೆ. ಪದವಿ ಪುರಸ್ಕಾರ ವಿಭಾಗದ ವಿದ್ಯಾರ್ಥಿಗಳಿಗೆ ನಗದು ಬಹುಮಾನದ ಬದಲು ಆಕರ್ಷಕ ಸ್ಮರಣಿಕೆ, ಶಾಲು, ಹಾರ ಮತ್ತು ಪ್ರಶಂಸನ ಪತ್ರ ನೀಡಿ ಸನ್ಮಾನಿಸಲಾಗುವುದು.
ಈಗಾಗಲೇ ಘೋಷಣೆಯಾಗಿರುವ 2024-25ನೇ ಸಾಲಿನ 5ನೇ, 7ನೇ ಮತ್ತು 10ನೇ ತರಗತಿಯ ಮದ್ರಸಾ ಪಬ್ಲಿಕ್ ಪರೀಕ್ಷೆಯ ಫಲಿತಾಂಶದಲ್ಲಿ ಹೆಚ್ಚಿನ ಅಂಕಗಳಿಸಿರುವ ಕೆ.ಎಂ.ಎ. ಸದಸ್ಯರ ಮಕ್ಕಳು ಮದ್ರಸಾ ವಿಭಾಗದ ಕೆ.ಎಂ.ಎ. ಪ್ರತಿಭಾ ಪುರಸ್ಕಾರ-2025ಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಈ ವಿಭಾಗದಲ್ಲೂ ಅರ್ಜಿ ಸಲ್ಲಿಸಲು ಕನಿಷ್ಟ ಶೇ.75% ಕ್ಕಿಂತ ಮೇಲ್ಪಟ್ಟು ಅಂಕಗಳಿಸಿರುವ ವಿದ್ಯಾರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.
ಎಸ್.ಎಸ್. ಎಲ್. ಸಿ., ದ್ವಿತೀಯ ಪಿಯುಸಿ ಮತ್ತು ಮದ್ರಸಾ ವಿಭಾಗದ ಪ್ರತಿಭಾ ಪುರಸ್ಕಾರಕ್ಕಾಗಿ ಶಾಲಾ ಮುಖ್ಯೋಪಾಧ್ಯಾಯರಿಂದ/ ಕಾಲೇಜಿನ ಪ್ರಾಂಶುಪಾಲರಿಂದ/ ಮದರಸ ಅಧ್ಯಾಪಕರಿಂದ ‘ದೃಢೀಕೃತಗೊಂಡ ಅಂಕಪಟ್ಟಿ’, ವಿದ್ಯಾಭ್ಯಾಸ ಮುಂದುವರಿಸುತ್ತಿರುವ ಬಗ್ಗೆ ಹಾಲಿ ‘ವ್ಯಾಸಂಗ ದೃಢೀಕರಣ ಪತ್ರ’, ಬ್ಯಾಂಕ್ ಪಾಸ್ ಬುಕ್ ಪ್ರತಿ ಸೇರಿದಂತೆ ತಮ್ಮ ಮನೆತನದ ಮತ್ತು ಪೋಷಕರ ಪೂರ್ಣ ವಿವರ, ದೂರವಾಣಿ ಸಂಖ್ಯೆ ಹಾಗು ಇತ್ತೀಚಿನ 3 ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಲು ದಿನಾಂಕ 20-08-2025ರಂದು ಕೊನೆಯ ದಿನವಾಗಿರುತ್ತದೆ. ಭಾವಚಿತ್ರ ಮತ್ತು ದೂರವಾಣಿ ಸಂಖ್ಯೆ ಇಲ್ಲದ ಅರ್ಜಿಗಳನ್ನು ಮೊದಲ ಹಂತದಲ್ಲೆ ತಿರಸ್ಕರಿಸಲಾಗುವುದು. ಎಲ್ಲಾ ವಿಭಾಗಗಳಲ್ಲಿ ಅರ್ಜಿ ಸಲ್ಲಿಸುವ ಅರ್ಹ ವಿದ್ಯಾರ್ಥಿಗಳ ಪೋಷಕರ ಪೈಕಿ ಒಬ್ಬರು (ತಂದೆ ಅಥವಾ ತಾಯಿ) ಕೆ.ಎಂ.ಎ. ಸದಸ್ಯತ್ವ ಪಡೆದು ಕನಿಷ್ಠ ಒಂದು ವರ್ಷ ಪೂರ್ಣಗೊಂಡಿರಬೇಕು ಎಂಬುದು ಕಡ್ಡಾಯವಾಗಿರುತ್ತದೆ.
ಅರ್ಹರು, ಅಧ್ಯಕ್ಷರು, ಕೊಡವ ಮುಸ್ಲಿಂ ಅಸೋಸಿಯೇಷನ್ (ರಿ.), ಪ್ರಧಾನ ಕಚೇರಿ, ಡಿ.ಎಚ್.ಎಸ್. ಕಟ್ಟಡ, ಮುಖ್ಯ ರಸ್ತೆ, ವಿರಾಜಪೇಟೆ, ಕೊಡಗು ಜಿಲ್ಲೆ, ಪಿನ್ ಕೋಡ್: 571218. ಈ ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9886060342 (ಪ್ರಧಾನ ಕಾರ್ಯದರ್ಶಿ) ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.