ಜಮ್ಮು-ಕಾಶ್ಮೀರದ ಪಹಲ್ಗಾಮ್‌ನ (Pahalgam) ಬೈಸರಾನ್ ವ್ಯಾಲಿಯಲ್ಲಿ ಏ. 22ರಂದು ನಡೆದ ಉಗ್ರರ ದಾಳಿ ತೀವ್ರ ಖಂಡನೀಯ. ಈ ದಾಳಿಯಲ್ಲಿ ನಮ್ಮ ಕರ್ನಾಟಕ ರಾಜ್ಯದ ಮೂರು ಸೇರಿದಂತೆ ಒಟ್ಟು 26 ಮಂದಿ ಅಮಾಯಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಘಟನೆಯಲ್ಲಿ ಮೃತಪಟ್ಟ ಎಲ್ಲರಿಗೂ ಸಂತಾಪಗಳು. ಹೃದಯವಿದ್ರಾವಕವಾದ ಉಗ್ರರ ಈ ದಾಳಿ ಮಾನವೀಯತೆಗೆ ಕಳಂಕವಾಗಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (KMA) ಖಂಡನೆ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ, ಭಯೋತ್ಪಾದನೆಯಿಂದ ಭಾರತವನ್ನು ಎಂದಿಗೂ ಅಸ್ಥಿರಗೊಳಿಸಲು ಸಾಧ್ಯವಿಲ್ಲ.ಆದರೆ ಭಯೋತ್ಪಾದಕರಂತಹ ವಿನಾಶಕಾರಿ ಶಕ್ತಿಗಳನ್ನು ನಾವೆಲ್ಲರೂ ಒಕ್ಕೊರಲಿನಿಂದ ಪ್ರತಿರೋಧಿಸಲೇಬೇಕು. ಸರ್ಕಾರಗಳು ಭಯೋತ್ಪಾದನೆಯನ್ನು ಬುಡಮೇಲು ಮಾಡಲು ಶೀಘ್ರವಾಗಿ ಕ್ರಮಕೈಗೊಳ್ಳಬೇಕು. ಇಂಥ ಘಟನೆಗಳು ಮತ್ತೆಂದೂ ಜರುಗಬಾರದು. ಮುಗ್ದ ಜನರನ್ನು ಹತ್ಯೆ ಮಾಡುವುದಕ್ಕೆ ಯಾವುದೇ ರೀತಿಯ ಸಮರ್ಥನೆ ಇಲ್ಲ. ಇದೊಂದು ಕ್ರೂರ ದಾಳಿಯಾಗಿದೆ ಎಂದು ಉಗ್ರರ ಅಟ್ಟಹಾಸದ ವಿರುದ್ಧ ತೀವ್ರ ಕಿಡಿ ಕಾರಿದ್ದಾರಲ್ಲದೆ, ಈ ಭಯೋತ್ಪಾದನೆಯನ್ನು ದೇಶದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿರುವುದು ಇಂದಿನ ಅನಿವಾರ್ಯ ಎಂದು ಒತ್ತಿ ಹೇಳಿದ್ದಾರೆ.
ಈ ರೀತಿಯ ಅಮಾನವೀಯ ಘಟನೆಗಳ ಹಿಂದಿರುವ ಭಯೋತ್ಪಾದಕರ ಉದ್ದೇಶ ಯುದ್ಧ ಅಲ್ಲ. ಸಮಾಜದಲ್ಲಿ ಭಯವನ್ನು ಉಂಟುಮಾಡಿ ಜನರ ಮಾನಸಿಕ ಶಕ್ತಿ ಕುಗ್ಗಿಸುವುದಾಗಿದೆ. ಆತಂಕವನ್ನು ಹರಡಿ ಸಮಾಜವನ್ನು ಒಡೆದು ದೇಶದ ಆರ್ಥಿಕ ಪ್ರಗತಿಯನ್ನು ತಡೆದು ಎಲ್ಲಾ ಹಂತದಲ್ಲೂ ನಿರಂಕುಶತೆಯನ್ನು ನಿರ್ಮಿಸುವುದೇ ಇವರ ದುರುದ್ದೇಶವಾಗಿರುತ್ತದೆ. ಆದ್ದರಿಂದ ನಮ್ಮ ದೇಶದ ಸ್ವಾಯತ್ತತೆಯನ್ನು ಕಾಪಾಡಿ ಅದನ್ನು ಪೋಷಿಸಬೇಕೆಂದರೆ, ಭಯೋತ್ಪಾದನೆಯನ್ನು ಅತ್ಯಂತ ಕಠಿಣವಾದ ಕ್ರಮಗಳ ನಿಭಾಯಿಸಿ ದೀರ್ಘಕಾಲಿಕವಾದ ಪರಿಹಾರವನ್ನು ಕಂಡುಕೊಳ್ಳುವುದೇ ಮುಂದಿರುವ ಮಾರ್ಗ ಎಂದು ಸೂಫಿ ಹಾಜಿ ತಿಳಿಸಿದ್ದಾರೆ.