ಕಾಂತೂರು ಮೂರ್ನಾಡು – ಜಲ ಜೀವನ್‌ ಮಿಷನ್‌ ಯೋಜನೆ ಯಶಸ್ವಿ ಅನುಷ್ಠಾನ

Share this post :

ಮಡಿಕೇರಿ : ಕಾಂತೂರು ಮತ್ತು ಕಿಗ್ಗಾಲು ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆ ಯಶಸ್ವಿಯಾಗಿದ್ದು, ಎಲ್ಲಾ ಮನೆಗಳಿಗೆ ಶುದ್ದ ಕುಡಿಯುವ ನೀರು ಪೂರೈಕೆಯಾಗುತ್ತಿದೆ ಎಂದು ಕಾಂತೂರು ಮೂರ್ನಾಡು ಗ್ರಾ.ಪಂ ಅಧ್ಯಕ್ಷ ಕುಶನ್ ರೈ ತಿಳಿಸಿದರು.
ಮಡಿಕೇರಿ ತಾಲ್ಲೂಕಿನ ಕಾಂತೂರು ಮೂರ್ನಾಡು ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅನುಷ್ಠಾನಗೊಳಿಸಿರುವ ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಸರಬರಾಜು ಕಾಮಗಾರಿ ಪೂರ್ಣಗೊಂಡಿದೆ. ಸಂಸದ ಯದುವೀರ್ ಒಡೆಯರ್ ಮತ್ತು ಶಾಸಕ ಡಾ. ಮಂತರ್ ಗೌಡ ಯೋಜನೆಯನ್ನು ಲೋಕಾರ್ಪನೆಗೊಳಿಸಿದ್ದಾರೆ. ಜೆಜೆಎಂ ಯೋಜನೆಯ ಯಶಸ್ಸಿಗೆ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರವೇ ಮುಖ್ಯ ಕಾರಣ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಿಗ್ಗಾಲು ಗ್ರಾಮದ 246 ಮನೆಗಳು ಮತ್ತು ಕಾಂತೂರು ಗ್ರಾಮದ 726 ಮನೆಗಳಿಗೆ ನೀರು ಪೂರೈಕೆಯಾಗುತ್ತಿದೆ. ಕಾಂತೂರುವಿನಲ್ಲಿ ರೂ.89.29 ಲಕ್ಷ, ಕಿಗ್ಗಾಲುವಿನಲ್ಲಿ 1.81 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ನದಿಯ ನೀರು ಫಿಲ್ಟರ್ ಆಗಿ ಟ್ಯಾಂಕ್‌ಗಳಿಗೆ ಸರಬರಾಜಾಗಿ, ಅಲ್ಲಿಂದ ಮನೆಗಳಿಗೆ ಪೂರೈಕೆಯಾಗುತ್ತದೆ. ಬೇಸಿಗೆಯಲ್ಲೂ ನೀರಿನ ಕೊರತೆ ಉಂಟಾಗುವುದಿಲ್ಲ. ಐಕೊಳ, ಎಂ.ಬಾಡಗ, ಕೊಡಂಬೂರು, ಮುತ್ತಾರ್ಮುಡಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಿ.ಎಸ್. ರೇಖಾ, ಸದಸ್ಯರಾದ ಸುಮ, ವಿಜು ತಿಮ್ಮಯ್ಯ, ಯಶ್ವಿನ್ ಪೊನ್ನಪ್ಪ, ರೀತಾ ಸುದರ್ಶನ್ ಸುದ್ದಿಗೋಷ್ಠಿಯಲ್ಲಿದ್ದರು.

coorg buzz
coorg buzz