ಮಡಿಕೇರಿ : ಕೊಡಗು ಜಿಲ್ಲಾ ಬಂಟರ ಸಂಘದ ಮುಂದಿನ ಸಾಲಿನ ಅಧ್ಯಕ್ಷರಾಗಿ ಬಿ.ಡಿ. ಜಗದೀಶ್ ರೈ ಅವಿರೋಧ ಆಯ್ಕೆಯಾಗಿದ್ದಾರೆ.
ನಗರದ ಹೋಟೆಲ್ ಸಮುದ್ರ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆಯಿತು. ಜಗದೀಶ್ ರೈ ಅವರನ್ನು ಸಭೆಯಲ್ಲಿದ್ದ ಸರ್ವ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಿದರು.
ಬಳಿಕ ಮಾತನಾಡಿದ ಅಧ್ಯಕ್ಷ ಜಗದೀಶ್ ರೈ, ಶೀಘ್ರದಲ್ಲಿ ನೂತನ ಕಾರ್ಯಕಾರಿ ಮಂಡಳಿಯನ್ನು ರಚಿಸುವುದಾಗಿ ತಿಳಿಸಿದರು. ಬಂಟರ ಭವನ ನಿರ್ಮಾಣಕ್ಕಾಗಿ ಬೇಕಾದ ಎಲ್ಲಾ ತೊಡಕುಗಳನ್ನು ನಿವಾರಿಸಿ, ಕಟ್ಟಡ ನಿರ್ಮಾಣಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಸಮುದಾಯ ಬಾಂಧವರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಸಂಘದ ಸದಸ್ಯತ್ವ ಹೆಚ್ಚಳಕ್ಕೆ ಸಹಕರಿಸುವಂತೆ ಕೋರಿದರು.
ಅಂದಾಜು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಭವನದ ನೀಲ ನಕ್ಷೆಯನ್ನು ಸಭೆಯಲ್ಲಿ ಅನಾವರಣ ಮಾಡಲಾಯಿತು. ಭವನದ ವಿನೂತನ ಶೈಲಿಯ ನಕ್ಷೆಗೆ ಸಭೆ ಅನುಮೋದನೆ ನೀಡಿತು.
ಕಾರ್ಯದರ್ಶಿ ರವೀಂದ್ರ ವಿ. ರೈ ವಾರ್ಷಿಕ ವರದಿ, ಲೆಕ್ಕಪತ್ರ ವರದಿಯನ್ನು ಖಜಾಂಚಿ ರತ್ನಾಕರ ರೈ ವಾಚಿಸಿದರು. ಟ್ರಸ್ಟ್ನ ವರದಿಯನ್ನು ಸತೀಶ್ ರೈ ಫಾರೆಸ್ಟ್ ವ್ಯಾಲಿ ಮಂಡಿಸಿದರು. ಗೌರವಾಧ್ಯಕ್ಷ ಬಿ.ಬಿ. ಐತಪ್ಪ ರೈ, ವಿರಾಜಪೇಟೆ ತಾಲೂಕು ಸಂಘದ ಅಧ್ಯಕ್ಷ ಲೀಲಾಧರ ರೈ ವೇದಿಕೆಯಲ್ಲಿದ್ದರು.
ಹಿತಶ್ರೀ ಯೋಗೇಶ್ ಶೆಟ್ಟಿ ಪ್ರಾರ್ಥಿಸಿದರು. ಮಡಿಕೇರಿ ನಗರ ಘಟಕದ ಅಧ್ಯಕ್ಷ ಪ್ರಭು ರೈ ಸ್ವಾಗತಿಸಿದರು. ಬಾಲಕೃಷ್ಣ ರೈ ನಿರೂಪಿಸಿದರು. ಶರತ್ ಶೆಟ್ಟಿ ವಂದಿಸಿದರು.




