IPL 2025: ಐಪಿಎಲ್ ಟೂರ್ನಿ ರದ್ದು, ಯಾವಾಗ ನಡೆಯಲಿದೆ ದ್ವಿತೀಯಾರ್ಧ?

IPL 2025

Share this post :

ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆ ಹಿನ್ನೆಲೆಯಲ್ಲಿ, ಇಂಡಿಯನ್‌ ಪ್ರಿಮಿಯರ್‌ ಲೀಗ್‌ (IPL)‌ 2025 ಪಂದ್ಯಾವಳಿಯನ್ನು ಬಿಸಿಸಿಐ ರದ್ದುಗೊಳಿಸಲಾಗಿದೆ. ಆಟಗಾರರು, ಪ್ರಾಂಚೈಸಿ, ಅಭಿಮಾನಿಗಳ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಇಂದು (ಮೇ 9) ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಪಹಲ್ಗಾಮ್‌ ಭಯೋತ್ಪಾದಕ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿಮ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿರುವ ಒಟ್ಟು 9 ಭಯೋತ್ಪಾದಕ ಶಿಬಿರಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದ ಮೇಲೆ, ಉಭಯ ರಾಷ್ಟ್ರಗಳ ನಡುವಿನ ಗಡಿಯಲ್ಲಿ ನಿರಂತರವಾಗಿ ಗುಂಡಿನ ಚಕಮಕಿ ನಡೆಯುತ್ತಿದೆ.

2025ರ ಪಂದ್ಯಾವಳಿಯನ್ನು ಅನಿರ್ದಿಷ್ಟಾವಧಿಗೆ ರದ್ದುಗೊಳಿಸಿ ಬಿಸಿಸಿಐ ಆದೇಶ ಹೊರಡಿಸಿದೆ. ಐಪಿಎಲ್‌ 2025 ಪಂದ್ಯಾವಳಿ ಬಹುತೇಕ ಪ್ಲೇಆಫ್‌ ಹಂತವನ್ನು ತಲುಪಿತ್ತು. ಆದರೆ ಅಷ್ಟರಲ್ಲಿ ಭಾರತ-ಪಾಕಿಸ್ತಾನ ನಡುವೆ ಸಂಘರ್ಷ ಆರಂಭವಾಯಿತು. ಗಡಿಯಲ್ಲಿ ಅಸಮಾನ್ಯ ಪರಿಸ್ಥಿತಿ ಇರುವಾಗ ಪಂದ್ಯಾವಳಿ ಮುನ್ನಡೆಸುವುದು ಸೂಕ್ತವೇ ಎಂಬ ಪ್ರಶ್ನೆ ಎದುರಾಗಿತ್ತು. ಈ ಕುರಿತು ಹಲವರು ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ನಿನ್ನೆ ಹಿಮಾಚಲ ಪ್ರದೇಶದ ಧರ್ಮಶಾಲಾ ಮೈದಾನದಲ್ಲಿ ನಡೆಯಬೇಕಿದ್ದ ಪಂಜಾಬ್‌ ಕಿಂಗ್ಸ್(ಪಿಬಿಕೆಎಸ್‌) ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ (ಡಿಸಿ) ನಡುವಿನ ಪಂದ್ಯವನ್ನು ರದ್ದುಗೊಳಿಸಿ ಬಿಸಿಸಿಐ ನಿರ್ಧಾರ ಪ್ರಕಟಿಸಿತ್ತು. ಇದೀಗ ಇಡೀ ಪಂದ್ಯಾವಳಿಯನ್ನೇ ಅನಿರ್ದಿಷ್ಟಾವಧಿಗೆ ರದ್ದುಗೊಳಿಸಿ ಬಿಸಿಸಿಐ ನಿರ್ಣಯ ಪ್ರಕಟಿಸಿದೆ. ಉಳಿದ 16 ಪಂದ್ಯಗಳ ಮರುನಿಗದಿಗೆ ಬಿಸಿಸಿಐ ಕಷ್ಟಪಡುತ್ತಿದೆ. ಭಾರತ ತಂಡದ ವೇಳಾಪಟ್ಟಿ ಮತ್ತು ಇತರ ಅಂತರರಾಷ್ಟ್ರೀಯ ಸರಣಿಗಳು ಮರುನಿಗದಿಗೆ ಸವಾಲಾಗಿದೆ. ಏಷ್ಯಾಕಪ್‌ನ ಭವಿಷ್ಯವೂ ಅನಿಶ್ಚಿತವಾಗಿದೆ.

ಐಪಿಎಲ್ 2025 ರಲ್ಲಿ ಇಲ್ಲಿಯವರೆಗೆ 57 ಪಂದ್ಯಗಳನ್ನು ಆಡಲಾಗಿದ್ದು, ಇನ್ನೂ 16 ಪಂದ್ಯಗಳು ಉಳಿದಿವೆ. ಈಗ ಈ ಪಂದ್ಯಗಳನ್ನು ಬೇರೆ ಯಾವುದಾದರೂ ದಿನಾಂಕದಂದು ನಡೆಸಬೇಕಾಗುತ್ತದೆ. ಆದರೆ ಐಪಿಎಲ್ ನಂತರ ಭಾರತ ತಂಡವು ತುಂಬಾ ಕಾರ್ಯನಿರತ ವೇಳಾಪಟ್ಟಿಯನ್ನು ಹೊಂದಿದೆ. ಜೂನ್‌ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು ಅಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿ ಆಗಸ್ಟ್ ವರೆಗೆ ನಡೆಯಲಿದೆ. ಇದಾದ ನಂತರ ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಆಡಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಐಪಿಎಲ್‌ಗೆ ಅವಕಾಶ ಕಂಡುಕೊಳ್ಳುವುದು ಬಿಸಿಸಿಐ ದೊಡ್ಡ ಸವಾಲಾಗಿದೆ.