ಮಡಿಕೇರಿ : ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ (Coorg Women Coffee Awareness Body – CWCAB) ವತಿಯಿಂದ ಅಂತಾರಾಷ್ಟ್ರೀಯ ಕಾಫಿ ದಿನವನ್ನು ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (KOIMS)ಬೋಧಕ ಆಸ್ಪತ್ರೆಯ ಸಭಾಂಗಣದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾಫಿ ಉತ್ಪಾದನೆ ಹೆಚ್ಚಿಸುವ ಗುರಿ ಹಾಗೂ ಆರೋಗ್ಯದ ದೃಷ್ಟಿಯಿಂದ ಕಾಫಿ ಸೇವನೆಯ ಮಹತ್ವದ ಬಗ್ಗೆ ಗಣ್ಯರು ಮಾತನಾಡಿದರು. ಮುಖ್ಯ ಭಾಷಣ ಮಾಡಿದ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ (CPA)ನ ಮಾಜಿ ಅಧ್ಯಕ್ಷ ಎನ್.ಎ. ಅಪ್ಪಯ್ಯ, ಭಾರತೀಯ ಕಾಫಿಯನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಪಡಿಸುವಲ್ಲಿ ಕಾಫಿ ಡೇ ಸಂಸ್ಥಾಪಕ ದಿ. ಸಿದ್ಧಾರ್ಥ್ ಅವರ ಕೊಡುಗೆಯನ್ನು ಸ್ಮರಿಸಿದರು.
ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ “2047ರ ವೇಳೆಗೆ ಭಾರತವು 7 ಲಕ್ಷ ಟನ್ಗಳಷ್ಟು ಕಾಫಿಯನ್ನು ಉತ್ಪಾದಿಸುವ ಗುರಿ ಹೊಂದಿದೆ ಎಂದು ಮಡಿಕೇರಿಯಲ್ಲಿ ಸೆಪ್ಟಂಬರ್ 24ರಂದು ನಡೆದ ಕಾಫಿ ದಸರಾ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಕಾಫಿ ಬೆಳೆಗಾರರು ಶ್ರಮಿಸಬೇಕು. ಹಾಗೆಯೇ, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ FPO (ರೈತ ಉತ್ಪಾದಕ ಸಂಸ್ಥೆ) ಗಳನ್ನು ಸ್ಥಾಪಿಸಿ ಗುಣಮಟ್ಟದ ಕಾಫಿ ಉತ್ಪಾದನೆ ಮತ್ತು ನೇರ ಮಾರುಕಟ್ಟೆ ಮಾಡಿದಲ್ಲಿ ಉತ್ತಮ ಮತ್ತು ಸ್ಥಿರ ಬೆಲೆ ನಿರೀಕ್ಷಿಸಬಹುದು” ಎಂದು ಸಲಹೆ ನೀಡಿದರು. ಅಲ್ಲದೆ, ಕೊಡಗಿನ ಕಾಫಿಯನ್ನು ವಿಶ್ವಮಟ್ಟದಲ್ಲಿ ಪ್ರಚುರಪಡಿಸುತ್ತಿರುವ CWCABಯ ಕಾರ್ಯವನ್ನು ಶ್ಲಾಘಿಸಿದರು.
ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ (KPA)ನ ಉಪಾಧ್ಯಕ್ಷ ಎಂ.ಸಿ. ಕಾರ್ಯಪ್ಪ ಮಾತನಾಡಿ, ಆರೋಗ್ಯ ದೃಷ್ಟಿಯಿಂದ ಕಾಫಿ ಸೇವನೆಯ ಉಪಯುಕ್ತತೆಗಳನ್ನು ವಿವರಿಸಿದರು. ವಿದ್ಯಾರ್ಥಿಗಳು ಮತ್ತು ಯುವಜನತೆ ಉತ್ತಮ ಪಾನೀಯವಾಗಿ ಡಾರ್ಕ್ ರೋಸ್ಟೆಡ್ ಕಾಫಿಯನ್ನು ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ವೈದ್ಯಕೀಯ ವಿದ್ಯಾರ್ಥಿಗಳು ಇದರ ಕುರಿತು ಆಳವಾದ ಅಧ್ಯಯನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಮೆಡಿಕಲ್ ಕಾಲೇಜಿನ ಡೀನ್ ಮತ್ತು ನಿರ್ದೇಶಕ ಡಾ. ಲೋಕೇಶ್ ಅವರು, ಉತ್ತಮ ಗುಣಮಟ್ಟದ ಕಾಫಿ ಸೇವನೆಯು ಆರೋಗ್ಯಕ್ಕೆ ಮತ್ತು ಜನರೊಂದಿಗೆ ಸಂವಹನಕ್ಕೆ ಉತ್ತೇಜಕವಾಗಿದೆ ಎಂದು ಅಭಿಪ್ರಾಯಪಟ್ಟರು. ತುರ್ತು ಚಿಕಿತ್ಸಾ ಘಟಕದ ಮುಖ್ಯಸ್ಥರಾದ ಡಾ. ಮೋಹನ್ ಅಪ್ಪಾಜಿ ಅವರು, “ಕಾಫಿ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಗುಣಮುಖವಾಗಿರುವುದನ್ನು ಕಂಡಿದ್ದೇವೆ. ನಮ್ಮ ಕಾಫಿಯನ್ನು ಉತ್ತಮ ಗುಣಮಟ್ಟದೊಂದಿಗೆ ಉತ್ಪಾದಿಸಿ ಪ್ರಚಾರ ಮಾಡಬೇಕು” ಎಂದರು. ಬಾಲ್ಯದಲ್ಲಿ ತಮ್ಮ ತಾಯಿ ಬೆಲ್ಲದೊಂದಿಗೆ ನೀಡುತ್ತಿದ್ದ ಬ್ಲಾಕ್ ಕಾಫಿಯ ಆಹ್ಲಾದಕರ ಅನುಭವವನ್ನು ಸ್ಮರಿಸಿದ ಅವರು, ಕೊಡಗು ಕಾಫಿ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ಕಾರಣ, ಅಂತಾರಾಷ್ಟ್ರೀಯ ಕಾಫಿ ದಿನದ ಮಾದರಿಯಲ್ಲೇ ರಾಷ್ಟ್ರೀಯ ಕಾಫಿ ದಿನವನ್ನು ಆಚರಿಸುವಂತಾಗಬೇಕು ಎಂದು ಕರೆ ನೀಡಿದರು.
ಕಾಫಿ ಮಂಡಳಿ ಉಪ ನಿರ್ದೇಶಕ ಡಾ. ವಿ. ಚಂದ್ರಶೇಖರ್, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ (CPA)ನ ಅಧ್ಯಕ್ಷ ನಂದಾ ಬೆಳ್ಯಪ್ಪ, ಕಾಫಿ ಮಂಡಳಿ ನಿರ್ದೇಶಕ ತಳೂರು ಕಿಶೋರ್ ಕುಮಾರ್, ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆಯ (CWCAB) ಖಜಾಂಚಿ ಕುಟ್ಟೇಟಿರ ಕುಮಾರಿ ಕುಂಞಪ್ಪ ಮುಂತಾದವರಿದ್ದರು.
ಭವ್ಯ ದಿನೇಶ್ ಪ್ರಾರ್ಥಿಸಿದರು. CWCABಯ ಪ್ರಧಾನ ಕಾರ್ಯದರ್ಶಿ ಅಪ್ಪನೆರವಂಡ ಅನಿತಾ ನಂದ ಸ್ವಾಗತಿಸಿದರು. ನಿಶಾ ಮೋಹನ್ ವಂದಿಸಿದರು.



