ಕುಶಾಲನಗರ(kushalanagar) : ನಮ್ಮ ಭಾರತ ದೇಶದ ಸ್ವಾತಂತ್ರ್ಯದ ದಿನವು ರಾಷ್ಟ್ರದ ಇತಿಹಾಸದಲ್ಲೇ ಅತ್ಯಂತ ಮಹತ್ವದಾಗಿದ್ದು, ಶತಮಾನಗಳ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ದೇಶ ವಿಮೋಚನೆ ಹೊಂದಿದ ಸರ್ವ ಶ್ರೇಷ್ಠ ದಿನವಾಗಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ(Ashoka sangappa Aloora) ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದಂತಹ ಅದಮ್ಯ ಚೈತನ್ಯಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುತ್ತಾ, ವಿವಿಧತೆಯಲ್ಲಿ ಏಕತೆಯನ್ನು ಸಾರುವಂತಹ ವೈವಿಧ್ಯಮಯ ಭಾರತೀಯ ಜನಸಂಖ್ಯೆಯನ್ನು ಒಂದುಗೂಡಿಸುವ ಶಕ್ತಿಯಾಗಿದೆ. ಪ್ರಾದೇಶಿಕ, ಭಾಷಾ ಮತ್ತು ಸಾಂಸ್ಕೃತಿಕ ಭಿನ್ನತೆಗಳನ್ನು ಮೀರಿ, ದೇಶಭಕ್ತಿಯ ಉತ್ಸಾಹದಲ್ಲಿ ಜನರನ್ನು ಒಟ್ಟುಗೂಡಿಸುತ್ತದೆ. ತ್ರಿವರ್ಣ ಧ್ವಜ, ರಾಷ್ಟ್ರಗೀತೆ, ಮತ್ತು ಸಾಮೂಹಿಕ ಆಚರಣೆಗಳು ಭಾರತೀಯರಲ್ಲಿ ಹೆಮ್ಮೆಯ ಭಾವನೆಯನ್ನು ಬೆಳೆಸುತ್ತವೆ ಮತ್ತು ಅಖಂಡ ರಾಷ್ಟ್ರದ ಕಲ್ಪನೆಯನ್ನು ಬಲಪಡಿಸುತ್ತವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೊಡಗು ವಿಶ್ವವಿದ್ಯಾಲಯದ ಕುಲಸಚಿವ(ಮೌಲ್ಯಮಾಪನ) ಆದ ಡಾ. ಸುರೇಶ್ ಎಂ, ಪರಕೀಯರ ದಾಸ್ಯದಿಂದ ದೇಶ ಸ್ವಾತಂತ್ರ್ಯ ಹೊಂದಲು ಶ್ರಮಿಸಿದ ಮಹಾತ್ಮರನ್ನು ಹಾಗೂ ದೇಶದ ಉನ್ನತಿಗೆ ಶ್ರಮಿಸದವರನ್ನು ಸ್ಮರಿಸುವುದು ಮತ್ತು ಗೌರವಿಸುವುದು ಪ್ರತಿಯೊಬ್ಬ ದೇಶ ವಾಸಿಗಳ ಕರ್ತವ್ಯವಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಬೋಧಕ ವೃಂದ, ಬೋಧಕೇತರ ವೃಂದ, ತಾಂತ್ರಿಕ ವೃಂದ ಹಾಗೂ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



