ಕೊಡಗಿನಲ್ಲಿ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಳ : ಅರಣ್ಯ ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯ

Share this post :

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ವನ್ಯಜೀವಿ-ಮಾನವ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೂ ಅರಣ್ಯ ಸಚಿವರು ಜಿಲ್ಲೆಯ ಬಗ್ಗೆ ಕಾಳಜಿ ತೋರುತ್ತಿಲ್ಲ. ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಅರಣ್ಯ ಸಚಿವರು ರಾಜೀನಾಮೆ ನೀಡುವಂತೆ ವೀರಾಜಪೇಟೆ ಮಂಡಲ ಬಿಜೆಪಿ ವಕ್ತಾರ ಚೆಪ್ಪುಡೀರ ರಾಕೇಶ್‌ ದೇವಯ್ಯ ಆಗ್ರಹಿಸಿದ್ದಾರೆ.
ವನ್ಯಜೀವಿ ಹಾಗೂ ಮಾನವ ಸಂಘರ್ಷ ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು ಹಾಗೂ ಇದರಿಂದ ಜನರ ಸಾವು ನೋವುಗಳು ಹೆಚ್ಚು ಸಂಭವಿಸುತ್ತಿದ್ದರೂ ಅರಣ್ಯ ಸಚಿವರು ಇದಕ್ಕೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇಷ್ಟೊಂದು ಸಾವು ನೋವುಗಳು ಸಂಭವಿಸಿದ್ದರು ಅರಣ್ಯ ಸಚಿವರು ಕೊಡಗು ಜಿಲ್ಲೆಗೆ ಭೇಟಿ ಮಾಡಿ ಇಲ್ಲಿಯ ಅರಣ್ಯ ಇಲಾಖೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಸಹ ಮಾಡಿಲ್ಲ. ಅರಣ್ಯ ಸಚಿವರು ಬರೀ ವಿಧಾನಸೌಧದ ಕಚೇರಿಯಲ್ಲಿ ಕುಳಿತುಕೊಂಡರೆ ನಮ್ಮ ಜನರ ಹಾಗೂ ನಮ್ಮ ಜಿಲ್ಲೆಯಲ್ಲಿ ಉಂಟಾಗುತ್ತಿರುವ ವನ್ಯಜೀವಿಗಳ ಉಪಟಳ ಬಗ್ಗೆ ಗೊತ್ತಾಗುವುದಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಅರಣ್ಯ ಸಚಿವರು ಕೂಡಲೇ ತಮ್ಮ ಕಚೇರಿಯಿಂದ ಹೊರ ಬಂದು ಕೊಡಗು ಜಿಲ್ಲೆಗೆ ಭೇಟಿ ಕೊಟ್ಟು ಇಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ನಿಗಾ ವಹಿಸಬೇಕು. ಇಲ್ಲವಾದಲ್ಲಿ ಇವರು ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

coorg buzz
coorg buzz