ನವದೆಹಲಿ : ರಾಜ್ಯದಲ್ಲೀಗ ಹೃದಯಾಘಾತಕ್ಕೊಳಗಾಗಿ ಮೃತರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಏನು ಕಾರಣ ಅನ್ನುವ ಬಗ್ಗೆ ವಿವಿಧ ವರ್ಗದ ಜನ ವಿವಿಧ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಕೋವಿಡ್ ಲಸಿಕೆಯ ಅಡ್ಡ ಪರಿಣಾಮವೇ ಹೃದಯಾಘಾತಕ್ಕೆ ಕಾರಣ ಅಂತ ಒಂದು ವರ್ಗ ವಾದಿಸುತ್ತಿದೆ. ಆದರೆ ಕೋವಿಡ್ ಲಸಿಕೆಗೂ ಹೃದಯಾಘಾತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ICMR, AIIMS ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.
ಕೋವಿಡ್ ಲಸಿಕೆಯ ಅಡ್ಡಪರಿಣಾಮದಿಂದ ಈ ರೀತಿ ಆಗುತ್ತಿದೆ ಎಂಬ ಮಾತು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕೋವಿಡ್ -19 ಲಸಿಕೆ ಮತ್ತು ಹೃದಯಾಘಾತದಿಂದ ಉಂಟಾಗುವ ಹಠಾತ್ ಸಾವಿಗೆ ಸಂಬಂಧವಿಲ್ಲ ಎಂದಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಏಮ್ಸ್ ನಡೆಸಿದ ಅಧ್ಯಯನಗಳು ಈ ಆರೋಪವನ್ನು ಅಲ್ಲಗಳೆದಿವೆ ಎಂದು ಸಚಿವಾಲಯ ಹೇಳಿದೆ.
ಭಾರತದಲ್ಲಿ ಕೋವಿಡ್ -19 ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ದೃಢಪಡಿಸಿವೆ. ಕೋವಿಡ್ ವ್ಯಾಕ್ಸಿನ್‌ನಿಂದ ಹಾರ್ಟ್ ಅಟ್ಯಾಕ್ ಆಗಲ್ಲ. ಹಠಾತ್ ಹೃದಯಾಘಾತದ ಸಾವುಗಳಿಗೆ ಜೀವನಶೈಲಿ ಕಾರಣ. ಆನುವಂಶಿಕತೆ, ಜೀವನಶೈಲಿ, ಸೇರಿದಂತೆ ವಿವಿಧ ಅಂಶಗಳಿಂದಾಗಿ ಹೃದಯಾಘಾತ ಸಂಭವಿಸುತ್ತಿದೆ ಎಂದು ಸ್ಪಷ್ಟಪಡಿಸಿದೆ.