ಮಡಿಕೇರಿ : ಕಳೆದ ನಾಲ್ಕು ತಿಂಗಳು ಸುರಿದ ಮಳೆಯಿಂದ ಉಂಟಾದ ಹಾನಿ ಬಗ್ಗೆ ಲೋಕೋಪಯೋಗಿ, ಪಂಚಾಯತ್ ರಾಜ್, ಕೃಷಿ, ತೋಟಗಾರಿಕೆ, ಶಾಲಾ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಸ್ಥಳೀಯ ಸಂಸ್ಥೆ ಸೇರಿದಂತೆ ವಿವಿಧ ಇಲಾಖೆಗಳಿಂದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಮಾಹಿತಿ ಪಡೆದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಳೆಹಾನಿ ಪರಿಹಾರ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಕಳೆದ ನಾಲ್ಕು ತಿಂಗಳು ಸುರಿದ ಧಾರಾಕಾರ ಮಳೆಯಿಂದ ರಸ್ತೆ, ಸೇತುವೆ, ಶಾಲಾ ಹಾಗೂ ಅಂಗನವಾಡಿ ಕಟ್ಟಡಗಳು, ಹಾಗೆಯೇ ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ ಆಗಿದ್ದು, ಈ ಬಗ್ಗೆ ನಿಖರ ಅಂಕಿ ಅಂಶ ನೀಡುವಂತೆ ನಿರ್ದೇಶನ ನೀಡಿದರು.
ಸಭೆಯ ಆರಂಭದಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಈ ಬಾರಿ ಜೂನ್ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿದ್ದು, ೨೦೨೫ ರ ಜನವರಿ ೦೧ ರಿಂದ ಸೆಪ್ಟೆಂಬರ್, ೧೪ ರವರೆಗೆ ೨,೩೩೧ ಮಿ.ಮೀ. ವಾಡಿಕೆ ಮಳೆಗೆ, ೨,೭೯೯ ಮಿ.ಮೀ. ಮಳೆಯಾಗಿದೆ ಎಂದರು.
ಈ ಬಾರಿ ಮರ ಬಿದ್ದು ಇಬ್ಬರು, ಮನೆ ಗೂಡೆ ಕುಸಿದು ಒಬ್ಬರು ಮೃತ ಪಟ್ಟಿದ್ದಾರೆ. ಹಾಗೆಯೇ ೨೩ ಜಾನುವಾರುಗಳು ಮೃತ ಪಟ್ಟಿದ್ದು, ಪರಿಹಾರ ವಿತರಿಸಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಸಹ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ವಿಪತ್ತನ್ನು ಸಮರ್ಪಕವಾಗಿ ನಿರ್ವಹಿಸಲಾಗಿದೆ ಎಂದರು.
ಪ್ರಸ್ತುತ ಪ್ರಾಕೃತಿಕ ವಿಕೋಪ ನಿಧಿಯಡಿ ಜಿಲ್ಲಾಧಿಕಾರಿ ಅವರ ಪಿಡಿ ಖಾತೆಯಲ್ಲಿ ರೂ.೩೫೦೫.೧೪ ಲಕ್ಷ ಹಣವಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಹಾನಿ ಸಂಬಂಧ ೪.೫೨ ಕೋಟಿ ರೂ. ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
ಗರ್ವಾಲೆ ಗ್ರಾಮದ ಅಂಗನವಾಡಿಗೆ ಮರ ಬಿದ್ದು ಹಾನಿಯಾಗಿತ್ತು. ಉಳಿದಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವ್ಯಾಪ್ತಿಯ ಕಂಬಗಳು, ವಿದ್ಯುತ್ ಪರಿವರ್ತಕಗಳು ಹಾನಿಯಾಗಿದ್ದು, ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು.
ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗ ಮತ್ತು ಉಪ ವಿಭಾಗದಲ್ಲಿ ಸಹಾಯಕ ಹಾಗೂ ಕಿರಿಯ ಎಂಜಿನಿಯರ್‌ಗಳ ಕೊರತೆ ಇದ್ದು, ಕೆಲಸ ನಿರ್ವಹಿಸುವುದೇ ಕಷ್ಟವಾಗಿದೆ ಎಂದು ಸಭೆಯಲ್ಲಿ ಅವಲತ್ತುಕೊಂಡರು.
ಶಾಸಕರಾದ ಡಾ. ಮಂತರ್ ಗೌಡ, ಎ.ಎಸ್.ಪೊನ್ನಣ್ಣ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಇತರರು ಇದ್ದರು.



