ಮಡಿಕೇರಿ: ಪ್ರಭಾವಿಗಳ ಬೆಂಬಲದಿಂದ ಜಿಲ್ಲೆಯಲ್ಲಿ ಭೂ ಕುಸಿತ ಪ್ರದೇಶಗಳಲ್ಲಿ ನಿರ್ಮಾಣ ಮಾಡಿರುವ ರೆಸಾರ್ಟ್‌ಗಳನ್ನು ಜಿಲ್ಲಾಡಳಿತ ನೆಲಸಮಗೊಳಿಸಬೇಕು ಎಂದು ಪರಿಸರವಾದಿ (Environmentalist) ಕರ್ನಲ್ ಸಿ.ಪಿ.ಮುತ್ತಣ್ಣ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಡಗಿನಲ್ಲಿ ತೋಟ, ಜಮ್ಮಾ ಬಾಣೆ ಮತ್ತು ಜೌಗು ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗೆ ಪರಿವರ್ತಿಸುವುದನ್ನು ನಿಷೇಧಿಸುತ್ತದೆ. ಅಲ್ಲದೇ, ಭೂ ಪರಿವರ್ತನೆಗಾಗಿ ಯಾವುದೇ ಅರ್ಜಿ ಸಲ್ಲಿಕೆಯಾದಲ್ಲಿ ಅದನ್ನು ಪರಿಶೀಲಿಸಲು ಮತ್ತು ಭೂ ಕುಸಿತ ಪೀಡಿತ ಪ್ರದೇಶಗಳಲ್ಲಿ ಪರಿವರ್ತನೆಗಳಿಗೆ ಅನುಮತಿ ನಿರಾಕರಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸುವ ಆದೇಶ ಹೊರಡಿಸಿತ್ತು. ಆದರೆ, ಆದೇಶದ ನಂತರ ಬಿಳಿಗೇರಿ, ಮಕ್ಕಂದೂರು, ಖೆದಕಲ್, ಗಾಳಿಬೀಡು, ಕಿರಂಗಂದೂರು ವ್ಯಾಪ್ತಿಯಲ್ಲಿ ಬೃಹತ್ ರೆಸಾರ್ಟ್‌ಗಳು ನಿರ್ಮಾಣವಾಗುತ್ತಿದೆ ಎಂದು ದೂರಿದರು.
ಈಗಲೇ ಕೊಡಗು (Kodagu) ಜಿಲ್ಲೆಯಲ್ಲಿ ದೊಡ್ಡ ದೊಡ್ಡ ರೆಸಾರ್ಟ್‌ಗಳು ತಲೆ ಎತ್ತಿದೆ. ಇಷ್ಟೆಲ್ಲಾ ಆದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ರೆಸಾರ್ಟ್ ನಿರ್ಮಾಣಕ್ಕೆ ಅನುಮತಿ ನೀಡಿದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಜಿ ತ ನೆಲಸಮ ಮಾಡಬೇಕು ಎಂದು ಒತ್ತಾಯಿಸಿದ ಅವರು, ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು. ಜಿಲ್ಲೆಯ ಜನತೆ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಸಮಾಜಸೇವಕರಾದ ಗೋಪಿನಾಥ್, ಗ್ರಾಮಸ್ಥರಾದ ಎಸ್.ಸಿ.ಗಿರೀಶ್, ಕೆ.ಜಿ.ನಿತೀಶ್, ಕಿರಗಂದೂರು ಗ್ರಾಮ ಆಡಳಿತದ ಅಧ್ಯಕ್ಷ ಚಿದಾನಂದ್, ಕಾರ್ಯದರ್ಶಿ ಬಿ.ಬಿ.ರಶೀನ್ ಕುಮಾರ್ ಉಪಸ್ಥಿತರಿದ್ದರು.