ನೀಲಿ ಸುಂದರಿ ಕೊಡಗಿನಲ್ಲಿ ಸದ್ದು ಮಾಡ್ತಾ ಇದ್ದಾಳೆ. ಕುಶಾಲನಗರದ ತಾವರೆ ಕೆರೆ ತನ್ನ ಹೆಸರಿಗೆ ವಿರುದ್ಧವಾಗಿ ನೀಲಿ ಬಣ್ಣದ ವಾಟರ್ ಹಯಾಸಿಂತ್‌ಗೆ ಪ್ರಖ್ಯಾತಿಗೊಳ್ಳುತ್ತಾ ಇದೆ. ಪರಿಸರ ಸಮತೋಲನದ ದೃಷ್ಟಿಯಿಂದ ನೋಡುವುದಾದರೆ ಈಕೆ ನೀಲ ಸುಂದರಿಯಲ್ಲ. ಬ್ಲೂ ಡೆವಿಲ್..!
ಇದರ ಬಗ್ಗೆ ಒಂದಷ್ಟು ವಿಚಾರಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಸಾಮಾನ್ಯವಾಗಿ ಐಕಾರ್ನಿಯಾ ಹೆಸರಿನಿಂದ ಗುರುತಿಸಲ್ಪಡುವ ಈ ಜಲ ಸಸ್ಯ ತೇಲುವ ಸಸ್ಯದ ಬಗೆಯದ್ದು. ಕೇವಲ ಅಲಂಕಾರಿಕ ಸಸ್ಯವಾಗಿ ಭಾರತದ ಬಂಗಾಳಕ್ಕೆ ಪರಿಚಯವಾದ ಇದರ ಮೂಲ ದಕ್ಷಿಣ ಅಮೇರಿಕ. ಇಂದು ದೇಶವ್ಯಾಪಿ ಹರಡಿಕೊಂಡಿದೆ. ಇದು ಒಂದು ರೀತಿಯಲ್ಲಿ ಆಕ್ರಮಣಕಾರಿಯಾಗಿ ಹಬ್ಬಿ ಬೆಳೆಯಬಲ್ಲ ಸಸ್ಯ. ಒಂದು ಸಸ್ಯ ಸಾವಿರಾರು ಸಂಖ್ಯೆಯಲ್ಲಿ ಬೀಜಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಆ ಬೀಜಗಳು ಮೊಳೆಯಲು ಸೂಕ್ತ ವಾತಾವರಣ ಇಲ್ಲದಿದ್ದರೂ ಹಲವಷ್ಟು ವರ್ಷಗಳ ಕಾಲ ತನ್ನಿರುವಿಕೆಯನ್ನ ಕಾಯ್ದುಕೊಳ್ಳಬಲ್ಲದು.
ತನ್ನ ಸುಂದರ ಹೂವು, ಆಕರ್ಷಕ ಬಣ್ಣ, ಅಲಂಕಾರಿಕ ಎಲೆಗಳ ಕಾರಣಕ್ಕೆ ಅಲಂಕಾರಿಕ ಸಸ್ಯವಾಗಿ ಪರಿಚಯವಾದರೂ ಅದರ ಆಕ್ರಮಣಕಾರಿ ಬೆಳೆಯುವಿಕೆ ಪರಿಣಾಮ ಬೀರಿದ್ದು ಮಾತ್ರ ಜಲರಾಶಿಯ ಮೇಲೆ. ಜಲ ಸಂಪನ್ಮೂಲಗಳ ಆಮ್ಲಜನಕ ಮಟ್ಟವನ್ನು ತೀವ್ರವಾಗಿ ಕಡಿಮೆ ಮಾಡುತ್ತಾ ಜಲಜೀವಿಗಳ ಪ್ರಾಣಕ್ಕೆ ಸಂಚಕಾರ ತರುವ ರೀತಿಯಲ್ಲಿ ಇದು ಬೆಳೆಯಬಲ್ಲದು. ಜಲರಾಶಿಯ ಮೇಲ್ಪದರದಲ್ಲಿ ಹಬ್ಬಿಕೊಂಡು ಸೂರ್ಯನ ಕಿರಣಗಳು ತಳ ಮುಟ್ಟದ ರೀತಿ ತಡೆಯುತ್ತದೆ. ಮೀನು ಕೃಷಿಗೆ ಜಲರಾಶಿ ಬಳಕೆಯಾಗುತ್ತಿದ್ದಲ್ಲಿ ಮೀನು ಹಿಡುವಳಿಯೇ ಇದರಿಂದ ಸಾಧ್ಯವಾಗದಿರಬಹುದು. ಒಂದು ಹೆಕ್ಟೇರ್ ನಷ್ಟು ಪ್ರದೇಶದಲ್ಲಿ ಹಬ್ಬಿಕೊಂಡಿರುವ ಈ ಕಳೆ ಸಸ್ಯ 350 ಮೆಟ್ರಿಕ್ ಟನ್ ನಷ್ಟು ಸಾವಯವ ಜೈವಿಕ ವಸ್ತುವನ್ನು ಉತ್ಪಾದಿಸಬಲ್ಲದು. ಒಂದೊಮ್ಮೆ ಇದರ ನೀರಿನಲ್ಲಿನ ವಿಷಯುಕ್ತ ಲೋಹಗಳನ್ನು, ರಾಸಾಯನಿಕಗಳನ್ನು ಹೀರಿಕೊಳ್ಳುವ ಗುಣದ ಕಾರಣಕ್ಕೆ ಮಲಿನಗೊಂಡ ನೀರನ್ನು ವಿಷರಹಿತ ಮಾಡುವುದಕ್ಕಾಗಿ ಈ ಗಿಡಗಳನ್ನು ಬೆಳೆಸಿದರಾದರೂ ಇದರ ಬೆಳೆಯುವ ಹರವು ಬೇರೆಯದ್ದೇ ಸಮಸ್ಯೆ ತಂದೊಡ್ಡಿತು.
ಈ ಸಸ್ಯಗಳು ಕೊಳೆತು ಜೈವಿಕ ರಾಶಿ ಉತ್ಪತ್ತಿಯಾಗಿ ಹೀರಿಕೊಂಡ ವಿಷ ಪದಾರ್ಥಗಳು ದ್ವಿತೀಯಕ ಮಾಲಿನ್ಯಕಾರಕಗಳಾಗಿ ಜಲಚರಗಳಿಗೆ, ಅವುಗಳನ್ನು ಬಳಸುವ ಜನರಿಗೂ ತೊಂದರೆಯುಂಟುಮಾಡಬಹುದು. ಅಲ್ಲದೇ ಸಸ್ಯವೂ ಸಂಪೂರ್ಣ ನೀರಿನಿಂದ ತುಂಬಿಕೊಂಡಿರುವುದರಿಂದ ಸೊಳ್ಳೆಗಳ ಆವಾಸ ಸ್ಥಾನವೂ ಆಗಬಲ್ಲದು.
ಈ ಸಸ್ಯಗಳು ಇಡೀ ನದಿಯ ವ್ಯಾಪ್ತಿಯನ್ನು, ಸಂಪೂರ್ಣ ಕೆರೆಯನ್ನು ಆವರಿಸಿಕೊಂಡು ಜಲಸಾರಿಗೆಗೆ, ಮೀನುಗಾರಿಕೆಗೆ ತೊಂದರೆಯುಂಟು ಮಾಡಿದ ಹಲವಾರು ನಿದರ್ಶನಗಳಿವೆ. ಇದನ್ನು ನಿಯಂತ್ರಿಸುವುದು ಸಾಧ್ಯವಿಲ್ಲವೇ. ತಕ್ಕ ಮಟ್ಟಿಗಿನ ಸೂಕ್ತ ವಾತಾವರಣ ಸಿಕ್ಕರೂ ಸಾಕು ಸಣ್ಣದೊಂದು ಗಿಡ ಅಥವಾ ಬೀಜ ವನವಾಗಿ ಹಬ್ಬುವ ಸಾಮರ್ಥ್ಯವಿದೆ ಇದಕ್ಕೆ. ಜೈವಿಕ ಸಮತೋಲನವನ್ನೇ ಬುಡಮೇಲು ಮಾಡಬಹುದು. ಇತರ ಯಾವ ಸಸ್ಯಗಳನ್ನೂ ತನ್ನೊಂದಿಗೆ ಬೆಳೆಯದಂತೆ ಮಾಡಬಹುದು. ಕಾಲ ಕ್ರಮೇಣ ಇದು ನಿರ್ಮಾಣ ಮಾಡುವ ಕೆಸರು-ಮಡ್ಡಿ ಜಲ ಸಂಪನ್ಮೂಲ ಪ್ರದೇಶದ ಜೈವಿಕ ಪರಿಸರವನ್ನೇ ಬದಲಾಯಿಸಿಬಿಡಬಹುದು.
ಇದನ್ನು ಕಳೆ ನಿರ್ಮೂಲನೆ ಮಾಡುವ ಯಂತ್ರಗಳನ್ನು ಬಳಸಿ ನಿರ್ಮೂಲನೆ ಮಾಡುವ ಪ್ರಯತ್ನಗಳಾಗುತ್ತಿರುತ್ತವೆ. ಕೆರೆಗಳಾಗಿದ್ದರೆ ಸಂಪೂರ್ಣವಾಗಿ ಕೆರೆಯ ಹೂಳು ತೆಗೆಯಿಸುವ ಮೂಲಕ ತಕ್ಕ ಮಟ್ಟಿನ ಶಮನ ಕಂಡುಕೊಳ್ಳಬಹುದು. ಹಲವಷ್ಟು ರಾಸಾಯನಿಕಗಳನ್ನು ಬಳಸಿ ಇವುಗಳನ್ನು ನಿರ್ಮೂಲನೆ ಮಾಡುವ ಪ್ರಯತ್ನಗಳು ನಡೆದಿವೆಯಾದರೂ ಇದರಿಂದ ನೀರಿನ ಮೂಲಕ್ಕೆ, ಪರಿಸರಕ್ಕೆ ಜನರಿಗೆ ಆಗುವ ತೊಂದರೆಗಳನ್ನೂ ಗಮನಿಸಲಾಗಿದೆ. ಜೈವಿಕ ನಿಯಂತ್ರಣ ಮಾರ್ಗಗಳನ್ನೂ ಅಂದರೇ ಈ ಸಸ್ಯಗಳ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವ ಕೀಟಗಳನ್ನು ಬಳಸುವ ಮೂಲಕ ಐಕಾರ್ನಿಯ ಬೆಳವಣಿಗೆ ತಡೆಯಲೂ ಪ್ರಯತ್ನಿಸಲಾಗಿದೆ. ಸದ್ಯಕ್ಕೆ ಯಂತ್ರಗಳನ್ನು ಬಳಸಿ ಅಥವಾ ಹೂಳೆತ್ತುವ ಮೂಲಕ ಇದನ್ನು ನಿಯಂತ್ರಿಸುವುದು ತಕ್ಕಮಟ್ಟಿನ ಸುಲಭದ ದಾರಿ. ಬಂಗಾಳದಿಂದ ಟೆರರ್ ರೀತಿ ದೇಶ ವ್ಯಾಪ್ತಿ ಹಬ್ಬಿ “ಬೆಂಗಾಲ್ ಟೆರರ್” ಎಂದೇ ಕರೆಯಲ್ಪಡುವ ಈ ಜಲಸಸ್ಯವನ್ನು ಅಲಂಕಾರಿಕ ಗಿಡದ ರೀತಿ ಬೆಳೆಸುತ್ತಿರುವವರು ಇದು ಸುಲಭವಾಗಿ ಹೊರಗಿನ ವಾತಾವರಣ ಸೇರಿ ದೊಡ್ಡ ದೊಡ್ಡ ಜಲ ಸಂಪನ್ಮೂಲಗಳನ್ನು ನಾಶ ಮಾಡದಂತೆ ಗಮನ ಹರಿಸುವುದು ಅತೀ ಮುಖ್ಯ.
ಬರಹ : ಮಿಲನಾ ಭರತ್
ಸಹಾಯಕ ನಿರ್ದೇಶಕಿ, ಮೀನುಗಾರಿಕೆ ಇಲಾಖೆ