ಕೊಡಗಿನಲ್ಲಿ ಮಳೆ ಆರ್ಭಟ: ನಾನಾ ಅವಾಂತರ ಸೃಷ್ಟಿ, ಎಲ್ಲೆಲ್ಲಿ ಏನೇನಾಗಿದೆ?

kodagu rain

Share this post :

ಅವಧಿಗೂ ಮುನ್ನವೇ ಕೊಡಗಿಗೆ (Kodagu) ಕಾಲಿಟ್ಟಿರುವ ಮುಂಗಾರು (Monsoon) ಮಳೆ ಆರಂಭದಲ್ಲೇ ಅವಾಂತರಗಳನ್ನು ಸೃಷ್ಟಿಸಿದೆ. ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ಭಾರೀ ಬಿರುಗಾಳಿ ಸಹಿತ ಮಳೆಗೆ ಜಿಲ್ಲೆಯ ಹಲವೆಡೆಗಳಲ್ಲಿ ನೀರು ರಸ್ತೆ ಮೇಲೆ ನದಿಯಂತೆ ಹರಿದಿದೆ. ಧಾರಾಕಾರ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡು ನಾನಾ ಅವಾಂತರಗಳು ಸೃಷ್ಟಿಯಾಗಿವೆ.

ಮಾಲ್ದಾರೆ ಸುತ್ತಮುತ್ತಲಿನಲ್ಲಿ ಸುರಿಯುತ್ತಿದ್ದ ಭಾರಿ ಗಾಳಿ ಮಳೆಗೆ ಮನೆಯಿಂದ ಹೊರ ಬರುತ್ತಿದ್ದಂತೆ ಮರದ ಕೊಂಬೆ ಮುರಿದು ಬಿದ್ದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಕಾಫಿ ಬೆಳೆಗಾರ ಪೊನ್ನಚಂಡ ವಿಷ್ಣು ಬೆಳ್ಳಿಯಪ್ಪ( 64) ಅವರ ತಲೆಗೆ ಗಂಭೀರ ಗಾಯಗೊಂಡು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ದುರ್ಘಟನೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಭಾಗಮಂಡಲ ಕರಿಕೆ ನಡುವೆ ಎಳ್ಳುಕೊಚ್ಚಿ ಬಳಿ ರಸ್ತೆ ಬದಿಯ ಬರೆ ಭೂಕುಸಿತದಿಂದ ವಾಹನ ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಗಿದ್ದು, ಸ್ಥಳೀಯ ಕರಿಕೆ ಗ್ರಾಮ ಪಂಚಾಯತ್ ನಿಂದ ಮಣ್ಣು ತೆರವು ಮಾಡಿದೆ.

ಬಾರೀ ಮಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಚರಂಡಿಗೆ ಇಳಿದ ಘಟನೆ ಮಡಿಕೇರಿ– ಕುಶಾಲನಗರ ರಸ್ತೆಯ ಆನೆಕಾಡು ಸಮೀಪ ನಡೆದಿದೆ.

ಬಾರೀ ಮಳೆಗೆ ಚೇರಂಬಾಣೆ – ಬೆಟ್ಟತ್ತೂರು ಮಾರ್ಗಮಧ್ಯದ ತ್ರೀ ಹಿಲ್ಸ್ ರೆಸಾರ್ಟ್ ಸಮೀಪದ ಕಾಂಕ್ರಿಟ್ ರಸ್ತೆ ಬದಿಯ ಬರೆ ಕುಸಿದಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಸಂಪೂರ್ಣ ರಸ್ತೆ ಕುಸಿದು ಸಂಪರ್ಕ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

ಭಾಗಮಂಡಲ ಹೋಬಳಿ ಪದಕಲ್ಲು ಗ್ರಾಮದ ಭಾಸ್ಕರ ರವರ ಮನೆಯ ಹಿಂಭಾಗದ ಗೋಡೆ ಮಳೆಯಿಂದ ಕುಸಿದು ತೀವ್ರ ಹಾನಿಯಾಗಿದ್ದು, ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಯವರು ಸ್ಥಳ ಪರಿಶೀಲಿಸಿದ್ದಾರೆ.

ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆಯು ಹೆಚ್ಚಾಗಿದ್ದು ಬೇಂಗೂರು ಗ್ರಾಮ ಪಂಚಾಯಿತಿಯ ಬೆಂಗೂರು ಗ್ರಾಮದ ದೋಣಿಕಾಡು ಎಂಬಲ್ಲಿ ರಸ್ತೆಯ ಮೇಲೆ ನೀರು ಬಂದಿದ್ದು, ಜನರ ಓಡಾಟಕ್ಕೆ ದೋಣಿಯ ಸಿದ್ಧತೆ ಮಾಡಲಾಗಿದೆ.

ಶನಿವಾರಸಂತೆ ಹೋಬಳಿ ಕೋರಲಳ್ಳಿ ಗ್ರಾಮದ ಲಲಿತ ಎಂಬುವವರ ಮನೆ ಮೇಲೆ ಮಳೆ ಗಾಳಿಯಿಂದಾಗಿ ಮರ ಬಿದ್ದಿದ್ದು, ಮನೆ ಹೆಂಚುಗಳು ಹಾನಿಯಾಗಿದ್ದು ಅರಣ್ಯ ಇಲಾಖಾ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿದರು.

coorg buzz
coorg buzz