ಮೂರ್ನಾಡು : ಎಂ. ಬಾಡಗ ಅಂಗನವಾಡಿ ಕೇಂದ್ರದಲ್ಲಿ ವಿಟಮಿನ್ ಎ ಕಾರ್ಯಕ್ರಮ ಹಾಗೂ ಕೈ ತೊಳೆಯುವ ದಿನಾಚರಣೆ ನಡೆಯಿತು. ಕೇಂದ್ರದ ಮಕ್ಕಳಿಗೆ ಪ್ರತಿ ಬಾರಿ ಹೇಗೆ ಕೈ ತೊಳೆದು ಶುಚಿಯಾಗಿರಬೇಕೆಂಬ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು. ಕೈ ತೊಳೆಯುವ 7 ವಿಧಾನಗಳನ್ನು ಮಕ್ಕಳು ಹಾಗೂ ಪೋಷಕರಿಗೆ ಅಂಗನವಾಡಿ ಸಿಬ್ಬಂದಿ ವಿವರಿಸಿದರು. 1 ವರ್ಷ 3 ತಿಂಗಳಿಂದ ಐದು ವರ್ಷದವರೆಗಿನ ಮಕ್ಕಳಿಗೆ ವರ್ಷದಲ್ಲಿ ಎರಡು ಸಲ ಅಂದರೆ ಆರು ತಿಂಗಳಿಗೊಮ್ಮೆ ಇರುಳು ಕುರುಡುತನ ಬರದಂತೆ ತಡೆಯುವುದಕ್ಕಾಗಿ ವಿಟಮಿನ್ ಎ ಅನ್ನಾಂಗವನ್ನು ನೀಡಲಾಗುತ್ತದೆ. ಎಲ್ಲರೂ ತಪ್ಪದೆ ಅದನ್ನು ಹಾಕಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಆಶಾ ಕಾರ್ಯಕರ್ತೆ ಚಂದ್ರಿಕಾ, ಅಂಗನವಾಡಿ ಕಾರ್ಯಕರ್ತೆ ಜಯಂತಿ ಬಿ.ಬಿ. ಈ ಸಂದರ್ಭ ಇದ್ದರು.
