ಭಾರತ ಕಂಡ ಹಿರಿಯ ವಿಜ್ಞಾನಿ, ಇಸ್ರೋದ ಮಾಜಿ ಅಧ್ಯಕ್ಷ ಕೆ.ಕಸ್ತೂರಿರಂಗನ್ (Kasturirangan) ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 84 ವರ್ಷಗಳಾಗಿತ್ತು. ಬಾಹ್ಯಾಕಾಶ ವಿಜ್ಞಾನಿಯಾಗಿದ್ದ ಅವರು, ಭಾರತೀಯ ಭಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯಲ್ಲಿ ಬರೋಬ್ಬರಿ 9 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1994 ರಿಂದ ಆಗಸ್ಟ್ 27, 2003ವರೆಗೆ ಇಸ್ರೋದ ಅಧ್ಯಕ್ಷರಾಗಿದ್ದರು. ರಾಜ್ಯಸಭೆ ಸದಸ್ಯ, ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.
ಕೆ.ಕಸ್ತೂರಿ ರಂಗನ್ ಅವರ ಸಾಧನೆಗೆ ಭಾರತ ಸರ್ಕಾರ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ (1982), ಪದ್ಮಭೂಷಣ (1992) ಮತ್ತು ಪದ್ಮ ವಿಭೂಷಣ (2000) ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು. 9 ವರ್ಷಗಳ ಕಾಲ ಇಸ್ರೋ ಅಧ್ಯಕ್ಷರಾಗಿ ಸೇವೆ, ಬ್ಯಾಹ್ಯಾಕಾಶ ಕ್ಷೇತ್ರಕ್ಕೆ ಪ್ರಮುಖ ಕೊಡುಗೆ ನೀಡಿದ್ದರು. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ನಿರ್ದೇಶಕರಾಗಿ ಸೇವೆ, ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಬಾಹ್ಯಾಕಾಶ ನೌಕೆ, INSAT-2, ಮತ್ತು ಭಾರತೀಯ ದೂರ ಗ್ರಾಹಿಉಪಗ್ರಹಗಳು (IRS-1A ಮತ್ತು 1B), ವೈಜ್ಞಾನಿಕ ಉಪಗ್ರಹಗಳ ಅಭಿವೃದ್ದಿ ಇವರ ನೇತೃತ್ವದಲ್ಲಿ ನಡೆದವು.
ಭಾರತದ ಮೊದಲ ಎರಡು ಪ್ರಾಯೋಗಿಕ ಭೂವೀಕ್ಷಣೆಯ ಉಪಗ್ರಹಗಳಾದ ಭಾಸ್ಕರ-I ಮತ್ತು II ಪ್ರಾಜೆಕ್ಟ್ಗೆ ಕಸ್ತೂರಿ ರಂಗನ್ ಡೈರೆಕ್ಟರ್ ಆಗಿದ್ದರು. ಕಸ್ತೂರಿ ರಂಗನ್ ನೇತೃತ್ವದಲ್ಲಿ ಹೆಸರಾಂತ ಉಡಾವಣಾ ವಾಹಕ PSLV ಮತ್ತು ಜಿಯೋಸಿಂಕ್ರೋನಸ್ ಉಡಾವಣಾ ವಾಹನ ಮತ್ತು ಕಾರ್ಯನಿರ್ವಹಣೆ ಸೇರಿದಂತೆ ಅನೇಕ ಪ್ರಮುಖ ಸಾಧನೆಗಳಾಗಿವೆ.
ಜೊತೆಗೆ ಎಕ್ಸ್-ರೇ ಮತ್ತು ಗಾಮಾ ಕಿರಣಗಳ ಮೇಲೆ ಸಂಶೋಧನೆ ನಡೆಸಿದ್ದರು. ಕಾಸ್ಮಿಕ್ ಎಕ್ಸ್-ರೇ ಮತ್ತು ಗಾಮಾ ಕಿರಣದ ಮೂಲಗಳು ಮತ್ತು ಕಾಸ್ಮಿಕ್ ಎಕ್ಸ್-ರೇಗಳ ಪರಿಣಾಮಗಳ ಅಧ್ಯಯನಗಳ ಮೂಲಕ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ. ಇನ್ನು ಗಾಡ್ಗಿಲ್ ಸಮಿತಿ ವರದಿಯು ತೀವ್ರ ಟೀಕೆಗೆ ಒಳಗಾಯಿತು. ಗಾಡ್ಗೀಳ್ ಸಮಿತಿ ವರದಿಯ ಕುಂದು ಕೊರತೆಯನ್ನು ನೀಗಿಸಲು ಕಸ್ತೂರಿರಂಗನ್ ಸಮಿತಿಯನ್ನು ನೇಮಿಸಲಾಯಿತು. ಕಸ್ತೂರಿರಂಗನ್ ಸಮಿತಿ ತನ್ನ ವರದಿಯನ್ನು 2013ರ ಏಪ್ರಿಲ್ 15 ರಂದು ಸಲ್ಲಿಸಿತು. ಪಶ್ಚಿಮ ಘಟ್ಟಗಳ ಉಳಿವಿಗೆ ಸಿದ್ಧಪಡಿಸಿರುವ ಕಸ್ತೂರಿರಂಗನ್ ವರದಿ ಸರ್ಕಾರದ ಬಳಿ ಇದೆ.