ಕೊಡಗು ವಿವಿ ಮುಚ್ಚುವ ನಿರ್ಧಾರಕ್ಕೆ FMC ಕಾಲೇಜಿನ ಹಳೇ ವಿದ್ಯಾರ್ಥಿ ಸಂಘ ಖಂಡನೆ

Kodagu university

Share this post :

ಶೈಕ್ಷಣಿಕವಾಗಿ ಹಿಂದುಳಿದಿರುವ ಕೊಡಗು ಜಿಲ್ಲೆಯಲ್ಲಿ ತನ್ನದೇ ಆದ ವಿಶ್ವವಿದ್ಯಾಲಯವನ್ನು ಹಲವು ವರ್ಷಗಳ ನಂತರ ಪಡೆದು ಅದು ಬೆಳವಣಿಗೆಯ ಗತಿಯಲ್ಲಿ ಫಲಾನುಭವಿಗಳಿಗೆ ತಲುಪುತ್ತಿರುವ ಸಮಯದಲ್ಲಿ ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚುವ, ವಿಲೀನಗೊಳಿಸುವ ಪ್ರಸ್ತಾವನೆಯನ್ನು ಸರಕಾರವು ಮುಂದಿಟ್ಟಿರುವುದನ್ನು ಮಡಿಕೇರಿಯ ಫೀಲ್ಡ್‌ ಮಾರ್ಷಲ್‌ ಕೆ.ಎಂ, ಕಾರ್ಯಪ್ಪ ಹಳೇ ವಿದ್ಯಾರ್ಥಿ ಸಂಘ ಉಗ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷರಾದ ಶ್ರೀ ಬೊಳ್ಳಜಿರ ಬಿ. ಅಯ್ಯಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Kodagu university

ಜಗತ್ತಿನ ಯಾವುದೇ ದೇಶದಲ್ಲಿ ಹಣಕಾಸಿನ ಕ್ಷುಲ್ಲಕ ಕಾರಣ ನೀಡಿ ಸರ್ಕಾರಗಳು ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿದ ನಿದರ್ಶನಗಳು ಇಲ್ಲ. ಆದ್ದರಿಂದ ಸರಕಾರವು ಉನ್ನತ ಶಿಕ್ಷಣ ಉಪಸಮಿತಿಯ ಈ ಅವೈಜ್ಞಾನಿಕ ಹಾಗೂ ಅವಾಸ್ತವಿಕ ಪ್ರಸ್ತಾವನೆಯನ್ನು ಕೂಡಲೇ ತಿರಸ್ಕರಿಸಬೇಕು ಮತ್ತು ಸರಕಾರವು 2025ರ ಆಯ-ವ್ಯಯದಲ್ಲಿ ಅಗತ್ಯ ಅನುದಾನವನ್ನು ಕೊಡಗು ವಿಶ್ವವಿದ್ಯಾಲಯಕ್ಕೆ ಒದಗಿಸುವಂತೆ ಅವರು ಒತ್ತಾಯಿಸಿದ್ದಾರೆ.

ಕೊಡಗು ಜಿಲ್ಲೆಯು ಚಾರಿತ್ರಿಕವಾಗಿ, ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ ವಿಶಿಷ್ಟ ಹಿನ್ನಲೆಯಳ್ಳ ಜಿಲ್ಲೆಯಾಗಿದ್ದರೂ, ಸ್ವಾತಂತ್ರ್ಯ ಬಂದು ಎಪ್ಪತೈದು ವರ್ಷಗಳು ಕಳೆದರೂ, ಪ್ರಾದೇಶಿಕ ಅಸಮತೋಲನವನ್ನು ನಾವು ಎಲ್ಲಾ ರಂಗಗಳಲ್ಲೂ ಅನುಭವಿಸುತಿದ್ದೇವೆ. ಇದಕ್ಕೆ ಸರಕಾರಗಳ ಸರಣೀ ನಿರ್ಲಕ್ಷ್ಯದ ದೋರಣೆ, ಪ್ರಜಾಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ನಾಗರಿಕರ ನಿರಾಭಿಮಾನವೇ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಗುಣಮಟ್ಟದ ನಾಗರಿಕ ಮೂಲಸೌಕರ್ಯಗಳಿಲ್ಲ. ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿಗೆ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಮತ್ತು ಕೌಶಲ್ಯಾಭಿವೃದ್ದಿ ಕೇಂದ್ರಗಳು ಇಲ್ಲ. ಕಾಲೇಜುಗಳು, ವಿಶ್ವವಿದ್ಯಾಲಯಗಳು ನಾಡಿನ ಪ್ರಗತಿಯ ಸಂಕೇತವಾಗಿದೆ. ಆದರೆ ಕೊಡಗು ಜಿಲ್ಲೆಯ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತವು ಕೇವಲ 18% ಆಗಿದ್ದು, ರಾಜ್ಯದಲ್ಲಿ 26ನೇ ಸ್ಥಾನದಲ್ಲಿರುವುದು, ಜಿಲ್ಲೆಯಲ್ಲಿ ಉನ್ನತ ಶಿಕ್ಷಣದ ಪೂರಕ ವ್ಯವಸ್ಥೆಗಳ ಕೊರತೆಗಳು ಎದ್ದು ಕಾಣುತ್ತಿದೆ.

ಕೊಡಗಿನ ಸಾಂಸ್ಕೃತಿಕ ಅಸ್ಮಿತೆ ಮತ್ತು ಶೈಕ್ಷಣಿಕ ಆಶೋತ್ತರಗಳನ್ನು ಗುರುತಿಸಿ, ಉಳಿಸಿ ಬೆಳೆಸುವ ನಿಟ್ಟಿನಲ್ಲಿ 2023 ರಲ್ಲಿ ಕೊಡಗು ವಿಶ್ವವಿದ್ಯಾಲಯ ಸ್ಥಾಪನೆಯಾಗಿರುವುದು ಒಂದು ಪ್ರಮುಖ ಮೈಲುಗಲ್ಲಾಗಿದೆ. ಪದವಿ, ಸ್ನಾತಕೋತ್ತರ, ಸಂಶೋಧನೆಯ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣವನ್ನು ಕೌಶಲ್ಯ ತರಬೇತಿಯನ್ನು ಸ್ಥಳೀಯವಾಗಿ ಪಡೆಯಲು ಇದೊಂದು ಐತಿಹಾಸಿಕ ಅವಕಾಶವಾಗಿದೆ. ಮತ್ತೂ ಕೊಡಗಿನ ಸಮುದಾಯ, ಭಾಷೆ, ಇತಿಹಾಸ, ಸಂಸ್ಕೃತಿ, ಪರಂಪರೆ, ಜಾನಪದ ಇತ್ಯಾದಿಗಳನ್ನು ಮತ್ತು ಇಂದಿನ ಅಗತ್ಯಗಳನ್ನು ವಸ್ತುನಿಷ್ಠವಾಗಿ ಇಲ್ಲಿಯೇ ಅಧ್ಯಯನ ಮಾಡಲು ಸುಯೋಗವಾಗಿದೆ.

ಆದರೆ ಸ್ಥಾಪನೆಯಾದ ದಿನದಿಂದಲೂ ಅನುದಾನದ ಕೊರತೆಯಿಂದ ವಿಶ್ವವಿದ್ಯಾಲಯವು ತೊಂದರೆಗಳನ್ನು ಎದುರಿಸುತ್ತಿದೆ. ಕೊರತೆಗಳ ನಡುವೆಯೂ ಕೊಡಗು ವಿಶ್ವವಿದ್ಯಾಲಯ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಇಲ್ಲಿ ಉಲ್ಲೇಖನೀಯ. ತನ್ನ ಸ್ವಂತ ಸಂಪನ್ಮೂದಿಂದ ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ಸಂಬಳವನ್ನು ನೀಡುತ್ತಿದೆ. ಕೊಡಗು ಗುಡ್ಡಗಾಡು ಪ್ರದೇಶ ಮತ್ತು ವಿಶಿಷ್ಟ ಜಿಲ್ಲೆಯಾಗಿದ್ದು, ಜನಸಂಖ್ಯೆಯು ಬಯಲು ಪ್ರದೇಶಕ್ಕೆ ಹೋಲಿಸಿದರೆ ಕಡಿಮೆಯಿರುವುದು ಸಹಜವಾಗಿರುವುದರಿಂದ, ಕಾಲೇಜು ಮತ್ತು ವಿದ್ಯಾರ್ಥಿಗಳ ಸಂಖ್ಯೆಯ ಆಧಾರದ ಮೇಲೆ ವಿಶ್ವವಿದ್ಯಾಲಯದ ಅಗತ್ಯತೆ ಬಗ್ಗೆ ತರ್ಕ ಮಾಡುವುದು ಅವೈಜ್ಞಾನಿಕವಾಗಿದೆ.

ಎಪ್ಪತ್ತೈದು ವರ್ಷಗಳ ಕಾಲ ನಾವು ಗುಣಮಟ್ಟದ ಶಿಕ್ಷಣ ಮತ್ತು ನಾಗರಿಕ ಸೇವೆಗಳಿಗೆ ಹೊರ ಜಿಲ್ಲೆಗಳು, ಹೊರ ರಾಜ್ಯವನ್ನು ಅವಲಂಬಿಸುತ್ತ ಬಂದಿದ್ದೇವೆ. ಜಿಲ್ಲೆಯಲ್ಲಿ ಮೂಲಸೌಕರ್ಯ ಮತ್ತು ಉದ್ದಿಮೆಗಳಿಲ್ಲ. ಉನ್ನತ ಶಿಕ್ಷಣದ ಸಾಮಾನ್ಯ ಮತು ವೃತ್ತಿಪರ ಕ್ಷೇತ್ರಗಳಾದ ವೈದ್ಯಕೀಯ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆ, ಕಾನೂನು, ಕೌಶಲ್ಯ, ವಾಣಿಜ್ಯ ಮತ್ತು ನಿರ್ವಹಣೆ, ಮಾಹಿತಿ ತಂತ್ರಜ್ಞಾನ, ಹಣಕಾಸು, ಆರೋಗ್ಯ, ಕೃಷಿ, ಅರಣ್ಯ, ನರ್ಸಿಂಗ್‌, ಮಾನವೀಕ ಮತ್ತು ಸಮಾಜ ವಿಜ್ಞಾನ ಇತ್ಯಾದಿಗಳ ಅಧ್ಯಯನಕ್ಕೆ ನಾವು ಹೊರ ಜಿಲ್ಲೆಗಳಿಗೆ ನಮ್ಮ ಮಕ್ಕಳನ್ನು ಕಳುಹಿಸಬೇಕಾದ ದುಸ್ಥಿತಿ ನಮಗಿದೆ.

ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಅಗತ್ಯ ಶಿಫಾರಸುಗಳನ್ನು ಮಾಡಿರುವ ನಂಜುಂಡಪ್ಪ ಸಮಿತಿಯ ವರದಿಯನ್ನು ಸರಕಾರಗಳು ಸಮರ್ಪಕವಾಗಿ ಅನುಷ್ಠಾನ ಮಾಡಿರುವುದಿಲ್ಲ. ಹಲವು ರಾಜ್ಯಗಳಲ್ಲಿ ಮತ್ತು ಕರ್ನಾಟಕದ ಕಲ್ಯಾಣ ಕರ್ನಾಟಕದ ಭಾಗ, ಉತ್ತರ ಕರ್ನಾಟಕದ ಭಾಗ , ಕೊಡಗು, ತುಳುನಾಡು ಗಳಲ್ಲಿ ಆಗಾಗ ಪ್ರಾದೇಶಿಕ ಅಸಮಾನತೆಯ ಕಾರಣದಿಂದ ಪ್ರತ್ಯೇಕತೆಯ ಧ್ವನಿ ಕೇಳಿ ಬರುತ್ತಲೇ ಇದೆ. ವಿಶ್ವವಿದ್ಯಾಲಯದ ವಿಚಾರವಾಗಿ ವಿವಿಧ ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು, ನಾಗರಿಕರು ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕರ್ನಾಟಕಕ್ಕೆ ಇದೊಂದು ಎಚ್ಚರಿಕೆ ಗಂಟೆ ಎಂದು ಹೇಳಿದ್ದಾರೆ.

ಕೊಡಗು ವಿಶ್ವವಿದ್ಯಾಲಯವನ್ನು ಉಳಿಸಿ, ಅಂತರರಾಷ್ಟೀಯ ದರ್ಜೆಯ ಉನ್ನತ ಶಿಕ್ಷಣದ ಕೇಂದ್ರವನ್ನಾಗಿ ಬೆಳೆಸುವುದು ಕೊಡಗಿನ ಜನಪ್ರತಿನಿಧಿಗಳ, ರಾಜಕೀಯ ಧುರೀಣರ, ಸಂಘ-ಸಂಸ್ಥೆಗಳ, ಸಾಮಾನ್ಯ ನಾಗರಿಕರ ಗುರುತರ ಜವಾಬ್ದಾರಿಯಾಗಿದೆ. ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು, ನಾಗರಿಕ ಸೇವೆಗಳ ಸಂಪನ್ಮೂಲಗಳನ್ನು ಇಂದು ನಾವು ನಮಗಾಗಿ ಕಟ್ಟಿಕೊಳ್ಳುವ, ಪಡೆದುಕೊಳ್ಳುವ ಕಾಲ ಸನ್ನಿಹಿತವಾಗಿದೆ. ಜಿಲ್ಲೆಯ ಮೇಲಿನ ತಮ್ಮ ಎಂದಿನ ನಿರಾಭಿಮಾನವನ್ನು ಬಿಟ್ಟು ಪ್ರಜ್ಞಾವಂತ ನಾಗರಿಕರು ಸ್ವಾಭಿಮಾನದಿಂದ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ನಮ್ಮ ಸಾಂವಿಧಾನಿಕ ಹಕ್ಕನ್ನು, ನಮ್ಮ ಸ್ವಾಭಾವಿಕ ಪಾಲನ್ನು ಒಕ್ಕೊರಲಿನಿಂದ ಜನಾಂದೋಲನದ ಮೂಲಕ ಪಡೆದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.