ಮಡಿಕೇರಿ : ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕತ್ತಿನಲ್ಲಿದ್ದ ಸರ ಕದ್ದೊಯ್ದಿರುವ ಘಟನೆ ಕೊಂಡಗೇರಿಯಲ್ಲಿ ನಡೆದಿದ್ದು, ಜಿಲ್ಲೆಯ ಜನ ಬೆಚ್ಚಿ ಬೀಳುವಂತೆ ಮಾಡಿದೆ. ಇಂದು ಮಧ್ಯಾಹ್ನ ವೇಳೆಗೆ ಘಟನೆ ನಡೆದಿದ್ದು, ಸಾರಮ್ಮ ಹಲ್ಲೆಗೊಳಗಾದ ಮಹಿಳೆಯಾಗಿದ್ದಾರೆ. ಸಾರಮ್ಮ ತನ್ನ ಸೊಸೆಯೊಂದಿಗೆ ಮನೆಯಲ್ಲಿದ್ದು, ʼನಾನು ಪಕ್ಕದಲ್ಲಿ ಕೆಲಸಕ್ಕೆ ಬಂದಿದ್ದೇನೆ. ಕುಡಿಯೋಕೆ ನೀರು ಕೊಡಿʼ ಅಂತ ವ್ಯಕ್ತಿಯೊಬ್ಬ ಬಂದಿದ್ದಾನೆ. ಕೆಲವೇ ನಿಮಿಷದಲ್ಲಿ ಮಹಿಳೆ ಬಳಿಯಿದ್ದ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದ್ದು, ಅದಕ್ಕೆ ಆಕೆ ಪ್ರತಿರೋಧವೊಡ್ಡಿದಾಗ ಹಲ್ಲೆ ನಡೆಸಿ ಚಿನ್ನಾಭರಣ ಎಳೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಘಟನೆ ಬಳಿಕ ಕಾರ್ಯಪ್ರವೃತ್ತರಾದ ಸ್ಥಳೀಯರು ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದು, ಈ ವೇಳೆ ತೋಟವೊಂದರಲ್ಲಿ ಆತನನ್ನ ಹಿಡಿದು ಥಳಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಅಸಲಿ ಮಾಹಿತಿಯನ್ನು ತನಿಖೆಯಿಂದ ಬಹಿರಂಗಪಡಿಸಬೇಕಿದೆ. ಆದರೆ ಹಾಡುಹಗಲೇ ಇಂಥ ಕೃತ್ಯವಾಗಿರುವುದು ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ