ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಿ: ಎ.ಎಸ್.ಪೊನ್ನಣ್ಣ

Share this post :

ಸರ್ಕಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ, ಮೀಸಲಾತಿ ಹಾಗೂ ಸರ್ಕಾರದ ಕಾರ್ಯಕ್ರಮ ರೂಪಿಸಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಆ ದಿಸೆಯಲ್ಲಿ ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮನವಿ ಮಾಡಿದ್ದಾರೆ.

ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಾಸಕರು ಸಾಮಾಜಿಕ  ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧಿಸಿದಂತೆ ಅಪಪ್ರಚಾರ ಮಾಡುತ್ತಿದ್ದು, ರಾಜಕೀಯ ಪ್ರೇರಿತವಾಗಿದೆ ಎಂದರು.

ಸಂವಿಧಾನ ಅರ್ಥ ಮಾಡಿಕೊಳ್ಳುವವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುವುದಿಲ್ಲ. ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಡಿ ಎಂದು ಬಹಿರಂಗವಾಗಿ ಹೇಳುತ್ತಾರೆ ಎಂದು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.

ಕೇಂದ್ರದವರು ಜಾತಿವಾರು ಜನಗಣತಿ ಮಾಡಲು ಮುಂದಾಗುತ್ತಿದ್ದಾರೆ. ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವುದು ಜಾತಿ ಸಮೀಕ್ಷೆಯಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ನುಡಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಹಿಂದುಳಿದ ವರ್ಗಗಳನ್ನು ಗುರುತಿಸುವುದಾಗಿದೆ. ಯಾರೂ ಹಿಂದುಳಿದಿದ್ದಾರೆ ಅವರನ್ನು ಪತ್ತೆಹಚ್ಚಿ ಕಾನೂನು ಜಾರಿಮಾಡಿ ಕಾರ್ಯಕ್ರಮ ರೂಪಿಸುವುದು ಸರ್ಕಾರದ ಆಶಯವಾಗಿದೆ ಎಂದು ಪೊನ್ನಣ್ಣ ಅವರು ಒತ್ತಿ ಹೇಳಿದರು.

ಸಂವಿಧಾನದ ಮೂಲಕವೇ ಸಮಾನತೆ ತರುವುದು ಸರ್ಕಾರದ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಯಾರೂ ಹಿಂದುಳಿದಿದ್ದಾರೆ. ಅವರಿಗೆ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತರುವುದು, ಮೀಸಲಾತಿ ನೀಡುವುದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಉದ್ದೇಶವಾಗಿದೆ ಎಂದು ಹೇಳಿದರು.

ಇಂದಿರಾ ಸಹಾನಿ ಪ್ರಕರಣದಲ್ಲೂ ಸಹ ಸುಪ್ರೀಂಕೋರ್ಟ್ ದತ್ತಾಂಶದ ಅಂಕಿ ಅಂಶಗಳನ್ನು ಸಂಗ್ರಹಿಸಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಮಾನತೆ ಕಲ್ಪಿಸುವುದು ಸಮೀಕ್ಷೆಯ ಉದ್ದೇಶವಾಗಿದೆ ಎಂದು ವಿವರಿಸಿದರು.

ಸರ್ಕಾರ ಪ್ರತೀ ಹತ್ತು ವರ್ಷಕ್ಕೊಮ್ಮೆ ಗಣತಿ ಕಾರ್ಯ ಪುನರ್ ನಡೆಸಬೇಕು ಎಂದು ಹೇಳಿದೆ. ಪುನರ್ ಪರಿಶೀಲನಾ ಕಾರ್ಯವು ಸಹ ಆಗಬೇಕಿದೆ. ಆ ನಿಟ್ಟಿನಲ್ಲಿ ಕಾಂತರಾಜು ವರದಿ, ಜಯಪ್ರಕಾಶ್ ಹೆಗಡ್ಡೆ ಆಯೋಗ, ಈಗ ಮಧುಸೂದನ್ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಸಂವಿಧಾನ ಗೌರವಿಸುವವರು ಸಮೀಕ್ಷೆಯನ್ನು ಸ್ವಾಗತಿಸಬೇಕು. ಅದನ್ನು ದಾರಿ ತಪ್ಪಿಸಬಾರದು ಎಂದರು.

ಶಾಶ್ವತವಾಗಿ ತುಳಿತಕ್ಕೆ ಒಳಗಾದ, ಯಾರು ಹಿಂದುಳಿದಿದ್ದಾರೆ ಅವರನ್ನು ಗುರುತಿಸುವ ಕೆಲಸ ನಡೆಯುತ್ತಿದ್ದು, ರಾಜಕೀಯ ಬಿಟ್ಟು ಎಲ್ಲರೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.

ನ್ಯಾಯಾಲಯವು ಸಹ ಸಮೀಕ್ಷೆಯನ್ನು ಮುಂದುವರಿಸಬಹುದಾಗಿದೆ ಎಂದು ಹೇಳಿದೆ. ಇದು ಜಾತಿ ಸಮೀಕ್ಷೆಯಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಾಗಿದ್ದು, ವೈಜ್ಞಾನಿಕವಾಗಿದೆ ಎಂದು ಎ.ಎಸ್.ಪೊನ್ನಣ್ಣ ಅವರು ಪ್ರತಿಪಾದಿಸಿದರು.

ರಾಜ್ಯದಲ್ಲಿ 2 ಕೋಟಿಗೂ ಹೆಚ್ಚು ಮನೆಗಳ ಸಮೀಕ್ಷೆ ನಡೆಯುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ 70 ರಿಂದ 80 ಮನೆಗಳು, ನಗರ ಪ್ರದೇಶದಲ್ಲಿ 110 ರಿಂದ 120 ಮನೆಗಳ ಸಮೀಕ್ಷೆಗೆ ಒಬ್ಬ ಸಮೀಕ್ಷೆದಾರರನ್ನು ನಿಯೋಜಿಸಲಾಗಿದೆ. ಜೊತೆಗೆ ಜಿಯೋ ಟ್ಯಾಗ್‍ನ್ನು ಬಳಸಲಾಗಿದೆ. ಹಾಗೆಯೇ ಆನ್‍ಲೈನ್ ಮೂಲಕವು ಸ್ವತಃ ಅವರವರೇ ಸಮೀಕ್ಷೆಯಲ್ಲಿ ದಾಖಲು ಮಾಡಿಕೊಳ್ಳಬಹುದಾಗಿದೆ ಎಂದರು.

ರಾಜ್ಯದ ಪ್ರತಿಯೊಬ್ಬ ನಾಗರಿಕರಿಗೂ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವುದು ಹಾಗೂ ಸಮ ಸಮಾಜ ನಿರ್ಮಾಣ ಮಾಡಲು ಸಮೀಕ್ಷೆ ಕೈಗೊಳ್ಳಲಾಗಿದೆ ಎಂದರು. ಸರ್ಕಾರ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಯನ್ನು ಸಹ ಜಾರಿಗೊಳಿಸಿದೆ. ನಲುವತ್ತು ವರ್ಷದ ಹೋರಾಟದ ಫಲವಾಗಿದೆ. ಒಳ್ಳೆಯ ಕಾರ್ಯಕ್ರಮ ರೂಪಿಸುವುದು. ಹಿಂದುಳಿದ ವರ್ಗಗಳನ್ನು ಮೇಲೆತ್ತುವುದು ಸಮೀಕ್ಷೆಯ ಉದ್ದೇಶವಾಗಿದೆ ಎಂದು ಎ.ಎಸ್.ಪೊನ್ನಣ್ಣ ಅವರು ವಿವರಿಸಿದರು.

ಮಡಿಕೇರಿ ಭಾಗಮಂಡಲ, ಭಾಗಮಂಡಲ-ನಾಪೋಕ್ಲು-ವಿರಾಜಪೇಟೆ ರಸ್ತೆ ಸೇರಿದಂತೆ ಹಲವು ರಸ್ತೆಯು ಮಳೆಗೆ ಹಾನಿಯಾಗಿದ್ದು, ಮಳೆ ನಿಂತ ನಂತರ ಸರಿಪಡಿಸಲಾಗುವುದು ಎಂದು ಎ.ಎಸ್.ಪೊನ್ನಣ್ಣ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಹೆಚ್ಚಿನ ಮಳೆಯಿಂದಾಗಿ ಹಾಗೂ ಇನ್ನೂ ಸಹ ಮಳೆ ನಿಲ್ಲದಿರುವುದರಿಂದ ರಸ್ತೆ ಸರಿಪಡಿಸಲು ಸಾಧ್ಯವಾಗಿಲ್ಲ. ಮಳೆ ನಿಂತ ನಂತರ ಎಲ್ಲಾ ರಸ್ತೆಗಳನ್ನು ಸರಿಪಡಿಸಲಾಗುವುದು ಎಂದು ಎ.ಎಸ್.ಪೊನ್ನಣ್ಣ ಅವರು ತಿಳಿಸಿದರು. ಮಳೆಗಾಲದಲ್ಲಿಯೂ ಸಹ ಗುಂಡಿ ಮುಚ್ಚುವ ತಂತ್ರಜ್ಞಾನ ಇದ್ದಲ್ಲಿ ಗುಂಡಿ ಮುಚ್ಚಲಾಗುವುದು ಎಂದು ಶಾಸಕರು ತಿಳಿಸಿದರು.

ಜನರ ಟೀಕೆಗೆ ಸ್ಪಂದಿಸುವುದು ನಮ್ಮ ಧರ್ಮವಾಗಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸರಿಪಡಿಸಲು ಟೆಂಡರ್ ಆಗಿದ್ದು, ಮುಖ್ಯಮಂತ್ರಿ ಅವರ ವಿಶೇಷ ಅನುದಾನದಡಿ 20 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕರು ಹೇಳಿದರು.

155 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ ಸರಿಪಡಿಸಲಾಗುವುದು. ಈ ಬಗ್ಗೆ ಶ್ವೇತಪತ್ರ ಹೊರಡಿಸಲು ಸಿದ್ದವಿದ್ದೇನೆ ಎಂದು ಶಾಸಕರು ಶ್ವೇತಪತ್ರ ಪ್ರದರ್ಶಿಸಿದರು.

ಕಳೆದ ಎರಡೂವರೆ ವರ್ಷದಲ್ಲಿ ಸರ್ಕಾರದಿಂದ ಎಷ್ಟು ಹಣ ತಂದಿದ್ದೇನೆ. ತಾವು ವರ್ಷವಾರು ಎಷ್ಟು ಹಣ ತಂದಿದ್ದೀರಿ ಎಂಬ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಪ್ರಜಾಪ್ರಭುತ್ವದಲ್ಲಿ ಪ್ರಬಲ ವಿರೋಧ ಪಕ್ಷ ಇರಬೇಕು. ಜೊತೆಗೆ ಪ್ರಶ್ನೆ ಮಾಡಬೇಕು. ಹಾಗೆಯೇ ಪ್ರತಿ ಪಕ್ಷದವರು ಸಹ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ಹೇಳಿದರು.

ಸರ್ಕಾರದ 2013 ರಿಂದ 2018 ರವರೆಗಿನ ಅವಧಿ ಸುವರ್ಣ ಯುಗವಾಗಿದೆ. 131 ಕಿಲೋ ಮೀಟರ್ ರಸ್ತೆ ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಹೆಚ್ಚಿನ ಮಳೆಯಾಗುವುದರಿಂದ 3-4 ವರ್ಷಕ್ಕೆ ರಸ್ತೆಗಳು ಗುಂಡಿ ಬೀಳುತ್ತವೆ. ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಅವಕಾಶ ಕಡಿಮೆ ಇದೆ ಎಂದು ಹೇಳಿದರು.

ರಸ್ತೆ ಜೊತೆಗೆ ಇತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಆ ನಿಟ್ಟಿನಲ್ಲಿ 250 ಹಾಸಿಗೆಯ ಆಸ್ಪತ್ರೆ ನಿರ್ಮಾಣವಾಗಲಿದೆ. ಹಾಗೆಯೇ ಗೋಣಿಕೊಪ್ಪದಲ್ಲಿ 30 ರಿಂದ 60 ಹಾಸಿಗೆಯ ಆಸ್ಪತ್ರೆ ನಿರ್ಮಾಣವಾಗಲಿದೆ. ಹುದಿಕೇರಿಯಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣವಾಗಲಿದೆ ಎಂದರು.

ವಿ.ಬಾಡಗದಲ್ಲಿ 11 ಎಕರೆ ಜಾಗದಲ್ಲಿ ‘ಕ್ರೀಡಾ ತರಬೇತಿ ಕೇಂದ್ರ’ ಆರಂಭಿಸಲು ಉದ್ದೇಶಿಸಲಾಗಿದೆ. ಆ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಬಲವರ್ಧನೆಗೆ 208 ಕೋಟಿ ರೂ. ಬಿಡುಗಡೆಯಾಗಿದೆ. ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕಗಳ ಬದಲಿಸುವ ಕೆಲಸಗಳು ನಡೆಯುತ್ತಿವೆ. ಗೋಣಿಕೊಪ್ಪದಲ್ಲಿ ಬಸ್ ನಿಲ್ದಾಣ, 14 ಹಾಡಿಗಳಿಗೆ ವಿದ್ಯುತ್‍ಚ್ಛಕ್ತಿ ಹಾಗೂ ಕುಡಿಯುವ ನೀರು ಪೂರೈಸಲಾಗಿದೆ ಎಂದರು.

ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರೆಗೆ 2 ಕೋಟಿ ರೂ. ಮೀಸಲು. ದೇವಸ್ಥಾನ, ಮಸೀದಿ, ಚರ್ಚ್‍ಗಳ ಅಭಿವೃದ್ಧಿಗೆ ಕ್ರಮ, ಮದೆನಾಡು ಗ್ರಾಮದಲ್ಲಿ 8 ಎಕರೆ ಭೂಮಿಯಲ್ಲಿ ಕೊಡಗು ಗೌಡ ಸಮಾಜ ಮಡಿಕೇರಿ ಇವರಿಗೆ ‘ಸಾಂಸ್ಕøತಿಕ ಭವನ’ ನಿರ್ಮಾಣಕ್ಕೆ ಜಾಗ ನಿಗಧಿ ಮಾಡಲಾಗಿದೆ ಎಂದು ಪೊನ್ನಣ್ಣ ಅವರು ವಿವರಿಸಿದರು. ತಿತಿಮತಿ ಜೊತೆಗೆ ಮತ್ತೊಂದು ಕಡೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣಕ್ಕೆ ಕ್ರಮ, 6 ವಿದ್ಯುತ್ ಉಪ ಕೇಂದ್ರಗಳ ನಿರ್ಮಾಣ, ಶಿಕ್ಷಣ, ಆರೋಗ್ಯ, ಕ್ರೀಡೆ ಹೀಗೆ ಹಲವು ಜನಪರ ಸೇವೆ ಮಾಡಲಾಗುತ್ತಿದೆ ಎಂದು ಪೊನ್ನಣ್ಣ ಅವರು ನುಡಿದರು.

ಕಳೆದ ಎರಡೂವರೆ ವರ್ಷದಲ್ಲಿ 300 ರಿಂದ 400 ಜನರಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ 2000 ಹಕ್ಕುಪತ್ರ ನೀಡಲು ಉದ್ದೇಶಿಸಲಾಗಿದೆ. ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆ ಇರಬೇಕು. ಬಡವರು ಮುಂದೆ ಬರಬೇಕು. ಸಮಗ್ರವಾದ ಅಭಿವೃದ್ಧಿ ಕಲ್ಪನೆ, ಜನತೆ ಸೇವೆಗೆ ಅವಕಾಶ ಸಿಕ್ಕಿದೆ. ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಎ.ಎಸ್.ಪೊನ್ನಣ್ಣ ಅವರು ಹೇಳಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ‘ಧರ್ಮ’ ಕಾಲಂನಲ್ಲಿ ಏನು ನಮೂದಿಸಬೇಕು ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಈ ಬಗ್ಗೆ ಜನಾಂಗದ ಪ್ರಮುಖರು ತೀರ್ಮಾನ ಮಾಡುತ್ತಾರೆ. ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.  ಅಖಿಲ ಕೊಡವ ಸಮಾಜ, ಫೆಡರೇಷನ್ ಕೊಡವ ಸಂಘಟನೆ ಸೇರಿದಂತೆ ಪ್ರಮುಖರು ತೀರ್ಮಾನ ಮಾಡಲಿದ್ದಾರೆ ಎಂದು ಎ..ಎಸ್.ಪೊನ್ನಣ್ಣ ಅವರು ಪ್ರತಿಕ್ರಿಯಿಸಿದರು. ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಪ್ರಮುಖರಾದ ಕೊಲ್ಯದ ಗಿರೀಶ್, ಟಾಟು ಮೊಣ್ಣಪ್ಪ, ತೆನ್ನಿರಾ ಮೈನಾ, ಪಟ್ಟಡ ರಂಜಿ ಪೂಣಚ್ಚ, ಹಂಸ, ಇಸ್ಮಾಯಿಲ್, ಸೂರಜ್ ಇತರರು ಇದ್ದರು.

coorg buzz
coorg buzz