ವಿರಾಜಪೇಟೆಯಲ್ಲಿ NSS ವಿದ್ಯಾರ್ಥಿಗಳಿಂದ ಪರಿಸರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

Nss students

Share this post :

ವಿರಾಜಪೇಟೆ: ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿ (ರಿ ), ಆರ್ಜಿ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಆರ್ಜಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಜಾಥಾ ಅಭಿಯಾನ ಕಾರ್ಯಕ್ರಮ ನಡೆಯಿತು. ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜು ಹಾಗೂ ಕಾವೇರಿ ಪದವಿ ಕಾಲೇಜಿನ ಎನ್. ಎಸ್. ಎಸ್ (NSS) ಘಟಕದ ವಿದ್ಯಾರ್ಥಿಗಳು ಸ್ವಚ್ಛತಾ ಜಾಥಾದಲ್ಲಿ ಭಾಗವಹಿಸಿದ್ದರು. ಈ ಅಭಿಯಾನವನ್ನು ಆರ್ಜಿ ಗ್ರಾಮ ಪಂಚಾಯತ್ ನಲ್ಲಿ ಉದ್ಘಾಟಿಸಿ ಮಾತನಾಡಿದ ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಮಾಚಯ್ಯ ರವರು ಸ್ವಚ್ಛ ಪರಿಸರ ನಮ್ಮ ಗುರಿಯಾಗಿದ್ದು ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿರುವುದು ಶ್ಲ್ಯಾಘನೀಯ. ಪರಿಸರ ಜಾಗೃತಿ ಎಲ್ಲರಲ್ಲಿಯೂ ಬರಬೇಕು ಎಂದು ಹೇಳಿದರು.

ಆರ್ಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಫಾತಿಮಾ ರವರು ಮಾತನಾಡಿ ಸ್ವಚ್ಛ ಪರಿಸರದ ನಿರ್ಮಾಣ ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಾವು ಜಾಗೃತರಾದಲ್ಲಿ ಮಾತ್ರ ಸಮಾಜದ ಜಾಗೃತಿ ಸಾಧ್ಯವಾಗುತ್ತದೆ. ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಿಸಿರಿ ಎಂದು ಕರೆ ಕೊಟ್ಟರು. ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿಯ ಸಂಚಾಲಕರಾದ ಶಶಿ ಅಚ್ಚಪ್ಪ ರವರು ಮಾತನಾಡಿ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನವು ಆರಂಭವಾಗಬೇಕು. ಗ್ರಾಮ ಪಂಚಾಯತ್ ಪರಿಸರ ರಕ್ಷಣಾ ಸಮಿತಿಯ ಜೊತೆಗೆ ಸಹಕಾರವನ್ನು ನೀಡಿ ಕಸ ಮುಕ್ತ ಪರಿಸರವನ್ನು ನಿರ್ಮಿಸಲು ಪಣ ತೊಡಬೇಕು ಎಂದರು. ಅಲ್ಲಲ್ಲಿ ಕಸ, ಪ್ಲಾಸ್ಟಿಕ್ ತ್ಯಾಜ್ಯ ಗಳನ್ನು ಎಸೆಯುದರ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ನಮ್ಮಪರಿಸರ ರಕ್ಷಣೆ ಹೊಣೆಯಾಗಿದೆ ಎಂದು ಹೇಳಿದರು.

ಎನ್ ಎಸ್ ಎಸ್ ಘಟಕದ ಉಭಯ ಕಾಲೇಜುಗಳ ವಿದ್ಯಾರ್ಥಿಗಳು ಆರ್ಜಿ ಅನ್ವರುಲ್ ಹುದಾ ಸಂಸ್ಥೆಯಿಂದ ಆರ್ಜಿ ಗ್ರಾಮ ಪಂಚಾಯತ್ ವರೆಗೆ ಹಾಗೂ ಆರ್ಜಿ ಗ್ರಾಮ ಪಂಚಾಯತ್ ನಿಂದ ಪೆರಂಬಾಡಿ ಚೆಕ್ ಪೋಸ್ಟ್, ಬಾಳುಗೋಡು ಸಮೀಪದ ವರೆಗೂ ರಸ್ತೆಯ ಇಕ್ಕೆಲಗಳಲ್ಲಿ ಎಸೆದಿದ್ದ ಪ್ಲಾಸ್ಟಿಕ್, ಪೇಪರ್, ಬಾಟಲಿ ಹಾಗೂ ತ್ಯಾಜ್ಯವನ್ನು ಹೆಕ್ಕುವುದರ ಮೂಲಕ ಸ್ವಚ್ಛತಾ ಅಭಿಯಾನವನ್ನು ಮಾಡಿದರು.ಮಾತ್ರವಲ್ಲದೆ ಸಾರ್ವಜನಿಕರಲ್ಲಿ ಸ್ವಚ್ಛತಾ ಜಾಗೃತಿಯನ್ನು ಮೂಡಿಸಿದರು.

ನೂರಕ್ಕೂ ಅಧಿಕ ಎನ್ ಎಸ್ ಎಸ್ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಸಾಲ್ಡಾನ್ಹಾ, ಕೊಡಗು ಪರಿಸರ ರಕ್ಷಣಾ ಹೋರಾಟ ಸಮಿತಿಯ ಕಾರ್ಯದರ್ಶಿ ಸುನೀತಾ ಹಾಗೂ ಸಮಿತಿಯ ಸದಸ್ಯರುಗಳು, ಆರ್ಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕವಿತ, ಪಿ. ಡಿ. ಓ ಪ್ರಮೋದ್ ಪಿ. ಕೆ,ಕಾರ್ಯದರ್ಶಿ ರಾಜನ್ ಆರ್, ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ಬಿ. ಎನ್. ಶಾಂತಿಭೂಷಣ್, ಉಪನ್ಯಾಸಕಿ ಲಿಸಿತಾ, ಕಾವೇರಿ ಪದವಿ ಕಾಲೇಜಿನ ಎನ್. ಎಸ್.ಎಸ್. ಅಧಿಕಾರಿ ಬಿ. ಬಿ. ಸುನಿಲ್ ಕುಮಾರ್, ಗ್ರಾಮಸ್ಥರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

coorg buzz
coorg buzz