ಮಿತ ಆಹಾರ ಸೇವನೆಯಿಂದ ಆರೋಗ್ಯಕರ ಜೀವನ ಸಾಧ್ಯ – ಮಂಜುನಾಥ್‌

Share this post :

ಮಡಿಕೇರಿ : ಮಿತವಾದ ಆಹಾರ ಸೇವನೆ, ಆರೋಗ್ಯಕರ ಚಟುವಟಿಕೆಯಿಂದ ಮಾತ್ರ ಆರೋಗ್ಯ ಸುಧಾರಣೆ ಸಾಧ್ಯವೆಂದು ಆಹಾರ ಸುರಕ್ಷತಾ ಸಹಾಯಕ ಅಧಿಕಾರಿ ಮಂಜುನಾಥ್ ಅಭಿಪ್ರಾಯಪಟ್ಟರು.
ಕೋಪಟ್ಟಿ ಸಮೀಪದ ಚೆರಂಡೇಟಿ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಪೋಷಣ್ ಅಭಿಯಾನದ ಅಡಿಯಲ್ಲಿ ಅರಿವು ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮತೋಲನ ಆಹಾರದ ಕುರಿತು ಕಾರ್ಯಕ್ರಮಕ್ಕೆ ಸೀಮಿತವಾಗದೆ ಪ್ರತಿದಿನದ ಬದುಕಿನ ಭಾಗವಾಗಬೇಕು ಎಂದು ತಿಳಿಸಿದರು.
ಮಡಿಕೇರಿ ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್ ಅವರು ಮಾತನಾಡಿ ಪ್ರತಿದಿನದ ಆಹಾರದಲ್ಲಿ ಸಮತೋಲನ ಆಹಾರ ಸೇವನೆ ಅಗತ್ಯವಾಗಿದ್ದು, ಸ್ಥಳೀಯ ಮಟ್ಟದಲ್ಲಿ ಸಿಗುವ ಹಸಿರು ಸೊಪ್ಪು, ತರಕಾರಿ, ಕಾಳು, ಹಾಲು, ಮೊಟ್ಟೆ ಹೆಚ್ಚು ಹೆಚ್ಚು ಸೇವಿಸಬೇಕು ಉದಾಸೀನ ಮಾಡಿದರೆ ಹಲವಾರು ಕಾಯಿಲೆಗಳಿಗೆ ನಾವೇ ಆಸ್ಪಾದ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದರು.
ಬಾಲವಿಕಾಸ ಸಮಿತಿ ಅಧ್ಯಕ್ಷೆ ದಿವ್ಯ ಅಧ್ಯಕ್ಷತೆ ವಹಿಸಿದ್ದರು. ಗರ್ಭಿಣಿಯರಿಗೆ ಮಡಿಲು ತುಂಬಿ ಸೀಮಂತ ನೆರವೇರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಉಮಾಶ್ರೀ ಸ್ವಾಗತಿಸಿದರು. ಜಿಲ್ಲಾ ಎಪಿಡಿಮಾಲಿಜಿಸ್ಟ್ ಕಿಶೋರ್, ಹೇಮಂತ್, ಆಶಾ ಕಾರ್ಯಕರ್ತೆ ಚಂದ್ರಾವತಿ, ಶಾಲಾ ಶಿಕ್ಷಕಿಯರಾದ ಪುಷ್ಪವತಿ ಮತ್ತು ಚೈತ್ರ ಮುಂತಾದವರಿದ್ದರು.

coorg buzz
coorg buzz