ವಿಶೇಷ ವರದಿ : ಕ-ವನ
ಮಡಿಕೇರಿ : ರಾಜ್ಯ ಸರ್ಕಾರ ಹಲವು ಆಕ್ಷೇಪ, ವಿರೋಧಗಳ ನಡುವೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ/ ಜಾತಿ ಗಣತಿಯನ್ನು ಆರಂಭಿಸಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಆರಂಭದಲ್ಲೇ ಹಲವು ರೀತಿಯ ಅಡೆತಗಳು ಎದುರಾಗಿದ್ದು, ಸಮೀಕ್ಷೆಯಲ್ಲಿ ಭಾಗಿಯಾಗಿರುವ ಸಿಬ್ಬಂದಿಗೆ ತಲೆಬಿಸಿ ತಂದೊಡ್ಡಿದೆ.
ಇಂದಿನಿಂದ ಸಮೀಕ್ಷೆ ಆರಂಭಿಸುವುದಕ್ಕೆ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ ಶಿಕ್ಷಕರು ಸೇರಿದಂತೆ ಸಮೀಕ್ಷೆಗೆ ನಿಯೋಜನೆಗೊಂಡಿದ್ದ ಮಂದಿ ಬೆಳಗ್ಗೆಯೇ ತಮ್ಮ ಕಾರ್ಯಕ್ಷೇತ್ರಕ್ಕೆ ತೆರಳಿದ್ದಾರೆ. ಆದರೆ ಸರ್ವರ್ ಸಮಸ್ಯೆಯಿಂದಾಗಿ ಸಮೀಕ್ಷೆಗೆ ಬಳಸುವ ತಂತ್ರಾಂಶ ಓಪನ್ ಆಗಲೇ ಇಲ್ಲ. ಕೆಲವು ಸಂದರ್ಭದಲ್ಲಿ ಓಪನ್ ಆದರೂ ಒಂದು ಮನೆಯಲ್ಲಿ ಸಮೀಕ್ಷೆ ಪೂರ್ಣಗೊಳಿಸಬೇಕಾದರೆ ಗಂಟೆಗಟ್ಟಲೆ ಕಾಯಬೇಕು. ನಿಧಾನಗತಿಯಲ್ಲಿ App ಕಾರ್ಯನಿರ್ವಹಿಸುತ್ತಿದ್ದ ಕಾರಣದಿಂದ ಒಂದು ಪ್ರಶ್ನೆಗೆ ಉತ್ತರ ಪಡೆದು ಅದನ್ನು ಅಪ್ಲೋಡ್ ಮಾಡಬೇಕಾದರೆ ಐದರಿಂದ ಹತ್ತು ನಿಮಿಷ ತಗಲುತ್ತದೆ. ಒಟ್ಟು 61 ಪ್ರಶ್ನೆಗೆ ಮಾಹಿತಿ ಪಡೆದು ಅಪ್ಲೋಡ್ ಮಾಡಬೇಕು. ಅಷ್ಟು ಹೊತ್ತು ಕಾಯುವ ತಾಳ್ಮೆಯೂ ಜನರಲ್ಲಿ ಇರುವುದಿಲ್ಲ. ನಮಗೂ ಮಾಸಿಕವಾಗಿ ಹಿಂಸೆ ಆಗುತ್ತದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಯೊಬ್ಬರು ಕೂರ್ಗ್ ಬಝ್ ಜೊತೆ ಅಳಲು ತೋಡಿಕೊಂಡರು. ಸಮೀಕ್ಷೆಯ App ಓಪನ್ ಮಾಡಿದಾಗ ಮೊಬೈಲ್ ಹ್ಯಾಂಗ್ ಆಗುತ್ತಿರುವ ಬಗ್ಗೆಯೂ ದೂರು ಕೇಳಿಬರುತ್ತಿದೆ.
ನೆಟ್ವರ್ಕ್ ಇಲ್ಲದ ಕಡೆ ಏನು ಮಾಡೋದು..?
ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶ ಅನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಲ್ಲಿನ ಗ್ರಾಮೀಣ ಭಾಗಗಳಲ್ಲಿ ನೆಟ್ವರ್ಕ್ ಸೌಲಭ್ಯ ಯಾವ ರೀತಿ ಇದೆ ಅನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಯಾರಿಗಾದರು ಫೋನ್ ಮಾಡಬೇಕಾದಲ್ಲಿ ಅಟ್ಟಕ್ಕೋ, ಎತ್ತರದ ಪ್ರದೇಶಕ್ಕೋ, ಮರದ ಮೇಲೆ ಹತ್ತಿ ಮಾತನಾಡಬೇಕಾದ ಪರಿಸ್ಥಿತಿ ಇಂದಿಗೂ ಹಲವು ಗ್ರಾಮಗಳಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಮೊಬೈಲ್ನಲ್ಲಿ ತಂತ್ರಾಂಶ ಬಳಸಿ ಗಣತಿಯ ಮಾಹಿತಿಯನ್ನು ಕಲೆಹಾಕಿ ಅಪ್ಡೇಟ್ ಮಾಡುವುದಕ್ಕೆ ಸಾಧ್ಯವಾ ಎನ್ನುವುದು ಸಾಮಾನ್ಯ ಪ್ರಶ್ನೆ. ಕೂರ್ಗ್ ಬಝ್ ಟೀಂ ಈ ವಿಚಾರವಾಗಿ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಸಿಬ್ಬಂದಿಯನ್ನು ಮಾತನಾಡಿಸಿದಾಗ ಅವರನ್ನೂ ಇದೇ ಪ್ರಶ್ನೆ ಕಾಡುತ್ತಿತ್ತು.
ಪೂರ್ವ ತಯಾರಿಯ ಕೊರತೆ..!
ಸಮೀಕ್ಷೆಯ ವಿಚಾರದಲ್ಲಿ ಸರ್ಕಾರದ ಪೂರ್ವ ತಯಾರಿಯ ಕೊರತೆ ಎದ್ದು ಕಾಣುತ್ತಿದೆ. ಅಧಿಕಾರಿಗಳು ನಗರ ಪ್ರದೇಶದ ಸ್ಥಿತಿಗತಿ, ಅಲ್ಲಿನ ಅನುಕೂಲತೆಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಮಾತ್ರ ಸಮೀಕ್ಷೆ ನಡೆಸಲು ಯೋಜನೆ ಹಾಕಿಕೊಂಡಿದ್ದರಾ ಎಂಬ ಅನುಮಾನವೂ ಕಾಡುತ್ತಿದೆ. ಏಕೆಂದರೆ ಕೊಡಗು ಜಿಲ್ಲೆಯಂಥ ಗುಡ್ಡಗಾಡು ಪ್ರದೇಶ, ಇಂಟರ್ನೆಟ್ ವ್ಯವಸ್ಥೆ ಸಮರ್ಪಕವಾಗಿಲ್ಲದ ಪ್ರದೇಶಗಳಲ್ಲಿ ಪರ್ಯಾಯವಾಗಿ ಏನು ಮಾಡಬೇಕು ಅನ್ನೋ ಬಗ್ಗೆ ಯಾರೂ ಯೋಚಿಸಿಲ್ಲವಾ? ಈ ಬಗ್ಗೆ ಎಲ್ಲಾ ಮೊದಲೇ ಸಿದ್ಧತೆ ಮಾಡಿಕೊಂಡು ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡಿದ್ದಿದ್ದರೆ ಉತ್ತಮ ಸಮೀಕ್ಷೆ ಆಗುತ್ತಿತ್ತು ಅಂತ ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಪ್ರಭಾವ ಬಳಸಿ ಡ್ಯೂಟಿಯಿಂದ ಹಿಂದಕ್ಕೆ..!
ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಸಿಬ್ಬಂದಿಯನ್ನೇ ಅದರಲ್ಲೂ ಶಿಕ್ಷಕರನ್ನೇ ಸಮೀಕ್ಷೆಗೆ ಹೆಚ್ಚಾಗಿ ಬಳಸಿಕೊಳ್ಳಲಾಗಿದೆ. ಸಮೀಕ್ಷೆಯ ಕರ್ತವ್ಯಕ್ಕೆ ಹಾಜರಾಗುವ ವಿಚಾರದಲ್ಲೂ ಪ್ರಭಾವ ಕೆಲಸ ಮಾಡಿದೆ. ಸಂಘಟನೆಯಲ್ಲಿರುವವರು, ಪ್ರಭಾವಿಗಳು ತಮ್ಮ ಪ್ರಭಾವ ಬಳಸಿಕೊಂಡು ತಮ್ಮನ್ನು ಕರ್ತವ್ಯಕ್ಕೆ ನಿಯೋಜನೆ ಮಾಡದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಹಲವು ಶಿಕ್ಷಕರಲ್ಲಿ ಅಸಮಾಧಾನ ಮೂಡಿಸಿದೆ. ಇದರೊಂದಿಗೆ ಆರೋಗ್ಯ ಸಮಸ್ಯೆ ಇರುವವರನ್ನೂ ಕರ್ತವ್ಯಕ್ಕೆ ಹಾಕಲಾಗಿದೆ ಅನ್ನುವ ಆರೋಪವೂ ಕೇಳಿಬರುತ್ತಿದೆ.
ಈಗ ಎದುರಾಗಿರುವ ತಾಂತ್ರಿಕ ಸಮಸ್ಯೆ ಜೊತೆಗೆ ಸಿಬ್ಬಂದಿ ಎದುರಿಸುತ್ತಿರುವ ಇತರೆ ಸಮಸ್ಯೆಗಳ ಕಡೆಗೂ ಸರ್ಕಾರ ಗಂಭೀರವಾಗಿ ಗಮನಹರಿಸುವ ಅಗತ್ಯ ಇದೆ. ಎಷ್ಟು ಬೇಗ ಸರ್ಕಾರ ಅದನ್ನು ಮಾಡುತ್ತದೋ ಉದ್ದೇಶಿತ ಯೋಜನೆ ಅಂದುಕೊಂಡಂತೆ ಪೂರ್ಣವಾಗಲು ಸಾಧ್ಯವಾಗುತ್ತದೆ.



