ಗಣೇಶೋತ್ಸವದಲ್ಲಿ ಡಿಜೆ ನಿರ್ಬಂಧ – ಮೊದಲ ದಿನ ಮಿಶ್ರ ಪ್ರತಿಕ್ರಿಯೆ – ಸರ್ಕಾರದ ಆದೇಶಕ್ಕೆ ಸೆಡ್ಡು ಹೊಡೆದ ಸಮಿತಿಗಳು..!

Share this post :

ಮಡಿಕೇರಿ : ಈ ಬಾರಿಯ ಗೌರಿ ಗಣೇಶೋತ್ಸವ ಧಾರ್ಮಿಕ ಆಚರಣೆಗಿಂತ ಹೆಚ್ಚಾಗಿ ಡಿಜೆ, ಸೌಂಡ್ಸ್‌ ಬಳಕೆ ವಿಚಾರವಾಗಿ ಹೆಚ್ಚಾಗಿ ಚರ್ಚೆಗೊಳಪಟ್ಟಿದೆ. ನಿಯಮ ಬಾಹಿರವಾಗಿ ಡಿಜೆ ಬಳಕೆ ಮಾಡದಂತೆ ಪೊಲೀಸ್‌ ಇಲಾಖೆ ಈಗಾಗಲೇ ಎಚ್ಚರಿಕೆಯನ್ನು ಕೊಟ್ಟಿದೆ. ಈ ನಡುವೆ ಗಣೇಶೋತ್ಸವದ ಮೊದಲ ದಿನ ಕೊಡಗು ಜಿಲ್ಲೆಯಲ್ಲಿ ಗಣೇಶೋತ್ಸವ ಸಮಿತಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಡಿಜೆ ಬಳಸಿದ್ರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ನಿಯಮ ಉಲ್ಲಂಘಿಸಿದರೆ ಆಯೋಜಕರು ಹಾಗೂ ಡಿಜೆ ವ್ಯವಸ್ಥೆ ಕಲ್ಪಿಸಿದವರ ಮೇಲೂ ಕ್ರಮ ಕೈಗೊಳ್ಳುವ ಜೊತೆಗೆ ಪರಿಕರಗಳನ್ನು ಮುಟ್ಟುಗೋಲು ಹಾಕುತ್ತೇವೆಂದು ಜಿಲ್ಲಾ ಎಸ್ಪಿ ಕೆ. ರಾಮರಾಜನ್‌ ಹೇಳಿದ್ದರು. ಹೀಗಾಗಿ ಆಯೋಜನರು ಯಾವ ರೀತಿ ಸ್ಪಂದಿಸುತ್ತಾರೆಂದು ಕುತೂಹಲ ಮೂಡಿತ್ತು.
ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಮೊದಲ ದಿನ ಹಲವು ಗಣೇಶೋತ್ಸವ ಸಮಿತಿಯವರು ಸಾಂಪ್ರದಾಯಿಕ ವಾದ್ಯದ ಮೊರೆ ಹೋಗಿದ್ದರು. ಕೆಲವರು ಸಣ್ಣ ಧ್ವನಿರ್ದಕಗಳ ಮೂಲಕ ಹಾಡು ಹಾಕುತ್ತಾ ಮೆರವರಣಿಗೆಯಲ್ಲಿ ಸಾಗಿದರು. ಕೆಲವು ಸಮಿತಿಯವರು ಪೊಲೀಸ್‌ ಆದೇಶವನ್ನು ಲೆಕ್ಕಿಸದೆ ಡಿಜೆ ಮೆರವಣಿಗೆ ನಡೆಸಿದರು. ನಾವು ವರ್ಷಕ್ಕೊಮ್ಮೆ ಗಣೇಶೋತ್ಸವ ಮಾಡುತ್ತೇವೆ. ಇದು ಸರ್ಕಾರಕ್ಕೆ ಸಮಸ್ಯೆ ಆಗುತ್ತದೆ. ಕೆಲವರು ಪ್ರತಿ ದಿನ ಮೂರ್ನಾಲ್ಕು ಬಾರಿ ಮೈಕ್‌ ಬಳಸುತ್ತಾರೆ. ಆವಾಗ ಸರ್ಕಾರಕ್ಕೆ ಸಮಸ್ಯೆ ಆಗೋದಿಲ್ವ. ನಮ್ಮ ಹಬ್ಬವನ್ನು ನಾವು ಹೀಗೇ ಆಚರಿಸೋದು ಅಂತ ಹೇಳಿದ್ರು.
ಆದರೆ ಗ್ರಾಮೀಣ ಭಾಗದಲ್ಲಿ ಬಹುತೇಕ ಕಡೆ ಡಿಜೆ ಬಳಕೆ ನಿರ್ಬಂಧ ಆದೇಶಕ್ಕೆ ಸಮಿತಿಗಳು ಕ್ಯಾರೇ ಅನ್ನಲಿಲ್ಲ. ಸರ್ಕಾರದ ಆದೇಶವನ್ನು ಮೀರಿ ಅಬ್ಬರದ ಸಂಗೀತ ಮೊಳಗಿತ್ತು. ಸರ್ಕಾರ ಏನ್‌ ಮಾಡುತ್ತೋ ನೋಡೋಣ, ನಾವ್‌ ಡಿಜೆ ಹಾಕಿಯೇ ಹಾಕುತ್ತೇವೆಂದು ಮೊದಲೇ ಹೇಳಿಕೊಂಡಿದ್ದರು. ಅದರಂತೆ ಮೊದಲ ದಿನ ಪ್ರತಿಷ್ಠಾಪಿಸಿ ವಿಸರ್ಜನೆ ಮಾಡಿದ ಬಹುತೇಕ ಸಮಿತಿಯವರು ಅಬ್ಬರದ ಡಿಜೆಯಲ್ಲೇ ಗಣೇಶನ ಮೆರವಣಿಗೆ ನಡೆಸಿದರು. ಕರ್ತವ್ಯದಲ್ಲಿದ್ದ ಪೊಲೀಸರು ಕೂಡಾ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ.

ಅವರಿಗೊಂದು ಕಾನೂನು, ನಮಗೊಂದು ಕಾನೂನಾ..? : ಗ್ರಾಮೀಣ ಭಾಗದಲ್ಲಿ ಡಿಜೆ ಹಾಕೋದಕ್ಕೆ ಬಿಟ್ಟ ವ್ಯವಸ್ಥೆ ವಿರುದ್ಧ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಕಾನೂನಿಗೆ ಗೌರವ ಕೊಟ್ಟು ಮಾಡಿದ್ದೇನೆ. ಕಾನೂನು ಮಾಡಿದ ಮೇಲೆ ಎಲ್ಲರಿಗೂ ಅನ್ವಯವಾಗಬೇಕು. ನಗರ ಪ್ರದೇಶದಲ್ಲಿ ಡಿಜೆ ಸೌಂಡ್‌ ಕೇಳಿದ ತಕ್ಷಣ ಪೊಲೀಸರ ವಾರ್ನಿಂಗ್‌ ಬರುತ್ತೆ. ನಮ್ಮನ್ನ ಪ್ರಶ್ನಿಸುತ್ತಾ ಇರುತ್ತಾರೆ. ಆದರೆ ಗ್ರಾಮೀಣ ಭಾಗದ ಹಲವು ಕಡೆಗಳಲ್ಲಿ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ. ಅದೇ ರೀತಿ ನಮಗೂ ಕೊಡಬಹುದಿತ್ತಲ್ಲವಾ ಎಂದು ಮಡಿಕೇರಿಯ ಸಮಿತಿ ಮುಖಂಡರೊಬ್ಬರು ಸರ್ಕಾರ, ಪೊಲೀಸ್‌ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸೌಂಡ್ಸ್‌ನವರ ಹಿಂದೇಟು : ಜಿಲ್ಲೆಯಲ್ಲಿ ಧ್ವನಿವರ್ದಕ ವ್ಯವಸ್ಥೆಯುಳ್ಳವರು ಈ ಬಾರಿ ಡಿಜೆ ಆಪರೇಟ್‌ ಮಾಡೋದಕ್ಕೆ ಹಿಂದೇಟು ಹಾಕಿದ್ದಾರೆ. ಕೇಸ್‌ ಆದಲ್ಲಿ ತಮಗೆ ಮತ್ತಷ್ಟು ಸಮಸ್ಯೆ ಆಗುತ್ತದೆ. ಪರಿಕರಗಳನ್ನು ಮುಟ್ಟುಗೋಲು ಹಾಕಿದಲ್ಲಿ ಲಕ್ಷಾಂತರ ರೂಪಾಯಿಯ ವಸ್ತುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಕೋರ್ಟು, ಕೇಸ್‌ ಅಂತ ಯಾರು ಅಲೆಯೋದು. ಹಾಗಾಗಿ ಈ ಬಾರಿ ನಾನು ಎಲ್ಲೂ ಡಿಜೆ ಹಾಕೋದಕ್ಕೆ ಒಪ್ಪಿಕೊಳ್ಳಲಿಲ್ಲ ಅಂತ ಮಡಿಕೇರಿಯ ಸೌಂಡ್ಸ್‌ & ಡೆಕೋರೇಟರ್ಸ್‌ ಮಾಲೀಕರೊಬ್ಬರು ಕೂರ್ಗ್‌ ಬಜ್ಹ್‌ಗೆ ಪ್ರತಿಕ್ರಿಯಿಸಿದರು.

coorg buzz
coorg buzz