ಮಡಿಕೇರಿ : ಗೌರಿ ಗಣೇಶೋತ್ಸವ ಆಚರಣೆ ಸಂದರ್ಭ ಡಿಜೆ ಬಳಕೆಗೆ ಸರ್ಕಾರ ನಿರ್ಬಂಧ ಹೇರಿದೆ. ಈ ಸಂಬಂಧ ಪರ ವಿರೋಧ ಹೇಳಿಕೆಗಳು ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಜಿಲ್ಲಾ ಪೊಲೀಸ್ ವತಿಯಿಂದ ಗಣೇಶೋತ್ಸವ ಸಮಿತಿ ಸದಸ್ಯರ ಸಭೆಯನ್ನು ಕರೆದಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಜಿಲ್ಲಾ ಎಸ್ಪಿ ಕೆ. ರಾಮರಾಜನ್, ಡಿಜೆ ಒತ್ತಡದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಗಣೇಶ ಸಮಿತಿ ಸದಸ್ಯರೊಂದಿಗೆ ಸಭೆ ಆಯೋಜಿಸುತ್ತಿದ್ದೇವೆ. ಡೆಸಿಬಲ್ ಮೀಟರ್ ಮೂಲಕ ಪ್ರಾತಕ್ಷಿಕೆ ನೀಡಲಾಗುವುದು. ಈ ಸಂದರ್ಭ ಇಎನ್‌ಟಿ ವೈದ್ಯರು ಕೂಡಾ ಹಾಜರಿರುತ್ತಾರೆ. ಅತಿಯಾದ ಶಬ್ಧದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಗುವುದೆಂದು ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ 12:00 ಗಂಟೆಗೆ ಮಡಿಕೇರಿ ಗೌಡ ಸಮಾಜ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಗಣೇಶೋತ್ಸವ ಸಮಿತಿ ಸದಸ್ಯರು ಆಗಮಿಸುವಂತೆ ಕೋರಿದ್ದಾರೆ.



