ಗ್ಯಾರಂಟಿ ಯೋಜನೆ ಸಂಬಂಧ ಜಿಲ್ಲಾಮಟ್ಟದಲ್ಲಿ ಸಮ್ಮೇಳನ – ಧರ್ಮಜ ಉತ್ತಪ್ಪ

Share this post :

ಮಡಿಕೇರಿ : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪಡಿತರ ಕಾರ್ಡುಗಳ ಪರಿಷ್ಕರಣಾ ಕಾರ್ಯ ನಡೆಯುತ್ತಿದ್ದು, ಈ ಅವಕಾಶವನ್ನು ಅರ್ಹರು ಬಳಸಿಕೊಳ್ಳುವಂತಾಗಬೇಕು ಎಂದು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ತಿಳಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಕೆಡಿಪಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಅರ್ಹರಿಗೆ ಬಿಪಿಎಲ್‌ನಿಂದ ಎಪಿಎಲ್‌ಗೆ ಪಡಿತರ ಚೀಟಿ ವರ್ಗಾವಣೆ ಆಗಿದ್ದಲ್ಲಿ, ಆಹಾರ ಇಲಾಖೆ ಅಥವಾ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯ ಆಹಾರ ಶಿರಸ್ತೆದಾರರಿಗೆ ಮನವಿ ಸಲ್ಲಿಸುವಂತಾಗಬೇಕು. ಇದರಿಂದ ಪರಿಶೀಲಿಸಿ ಪುನಃ ಬಿಪಿಎಲ್ ಕಾರ್ಡ್ ವಿತರಿಸಲಿದ್ದಾರೆ. ಆ ನಿಟ್ಟಿನಲ್ಲಿ ಆಹಾರ ಇಲಾಖೆಯವರು ಅಗತ್ಯ ಜಾಗೃತಿ ಮೂಡಿಸುವಂತೆ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರು ನಿರ್ದೇಶನ ನೀಡಿದರು.
ಅನ್ನಭಾಗ್ಯ ಯೋಜನೆಯಡಿ ಪ್ರತೀ ಫಲಾನುಭವಿಗೆ ೧೦ ಕೆ.ಜಿ. ಅಕ್ಕಿ ವಿತರಣೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳನ್ನು ಒಳಗೊಂಡ ಇಂದಿರಾ ಕಿಟ್ ವಿತರಿಸಲು ಸರ್ಕಾರ ಉದ್ದೇಶಿಸಿದೆ ಎಂದು ಧರ್ಮಜ ಉತ್ತಪ್ಪ ಅವರು ವಿವರಿಸಿದರು.
ಗ್ಯಾರಂಟಿ ಯೋಜನೆ ಪರಿಣಾಮಕಾರಿ ಅನುಷ್ಠಾನ ಮತ್ತು ಪ್ರಗತಿ ಸಂಬಂಧ ಜಿಲ್ಲಾ ಮಟ್ಟದಲ್ಲಿ ಸಮ್ಮೇಳನ ಆಯೋಜಿಸಲಾಗುವುದು. ಸಮ್ಮೇಳನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಗ್ಯಾರಂಟಿ ಯೋಜನೆ ರಾಜ್ಯ ಅನುಷ್ಠಾನ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಹೀಗೆ ಹಲವರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಸಮ್ಮೇಳನ ನಡೆದಿದೆ ಎಂದು ತಿಳಿಸಿದರು.
ಸಮಿತಿ ಉಪಾಧ್ಯಕ್ಷೆ ಪಂಕಜಾ, ಸದಸ್ಯ ಜಾನ್ಸನ್, ಕಾಂತರಾಜು, ಉಪಾಧ್ಯಕ್ಷರಾದ ಶಾರಿ ಗಿರೀಶ, ಕೆ.ಸಿ.ಭೀಮಯ್ಯ, ನಾಸಿರ್ ಮುಂತಾದವರು ಮಾತನಾಡಿದರು.
ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿನಯ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಸನ್ನ ಕುಮಾರ್, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಮಂಜುನಾಥ್, ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಈರಸಪ್ಪ ಮುಂತಾದವರಿದ್ದರು.

coorg buzz
coorg buzz