ಮಡಿಕೇರಿ : ರಾಜ್ಯ ಯುವನೀತಿ-೨೦೧೨ ಅನುಷ್ಠಾನ ಅಡಿಯಲ್ಲಿ ನಮ್ಮೂರ ಶಾಲೆಗೆ ನಮ್ಮ ಯುವಜನರು ಯೋಜನೆಯನ್ನು ೨೦೧೭-೧೮ನೇ ಸಾಲಿನಿಂದ ಅನ್ವಯವಾಗುವಂತೆ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಾನ್ಯತೆ ಪಡೆದಿರುವ ಕ್ರೀಡಾ ಸಂಸ್ಥೆಗಳು ಆಯೋಜಿಸುವ ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟç ಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರಿರುವ ಕ್ರೀಡಾಪಟುಗಳನ್ನು ಹೊಂದಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ ಆಯ್ಕೆಯಾದ ಪ್ರತಿ ಶಾಲೆಗೆ ಪ್ರೋತ್ಸಾಹವಾಗಿ ತಲಾ ರೂ.೧ ಲಕ್ಷದಂತೆ ನೀಡಲು ಸರ್ಕಾರ ತೀರ್ಮಾನಿಸಿದೆ.
ಈ ಅನುದಾನದಲ್ಲಿ ರೂ.೧೦ ಸಾವಿರಗಳನ್ನು ಆಯ್ಕೆಯಾದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಿಗೆ ಮತ್ತು ರೂ.೯೦ ಸಾವಿರಗಳನ್ನು ಶಾಲೆಯ ಎಸ್‌ಡಿಎಂಸಿಗೆ ಅಗತ್ಯ ಕ್ರೀಡಾ ಸಾಮಾಗ್ರಿಗಳನ್ನು ಖರೀದಿ ಮಾಡುವ ಬಗ್ಗೆ ಮಾರ್ಗಸೂಚಿ ಪರಿಷ್ಕರಿಸಿದೆ.
ಅದರಂತೆ ನಮ್ಮೂರ ಶಾಲೆಗೆ ನಮ್ಮ ಯುವಜನರು ಯೋಜನೆಯನ್ನು ಕೊಡಗು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಕೊಡಗು ಜಿಲ್ಲೆಯಲ್ಲಿನ ೨೦೨೪-೨೫ನೇ ಸಾಲಿನ ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿರುವ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿ ಅರ್ಹತಾ ಪಟ್ಟಿ ಮತ್ತು ದೈಹಿಕ ಶಿಕ್ಷಕರ ಹೆಸರು, ಮೊಬೈಲ್ ಸಂಖ್ಯೆಗಳನ್ನು ಸಿದ್ಧಪಡಿಸಿ ಕಚೇರಿಗೆ ಒಂದು ವಾರದ ಒಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂ.ಸಂ. ೯೪೮೦೦೩೨೭೧೨ ಅಥವಾ ೦೮೨೭೨-೨೨೦೯೮೬ ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.



