ಅನುದಾನಿತ ಮತ್ತು ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಮಸ್ಯೆ ಬಗೆಹರಿಕೆಗೆ ಆಗ್ರಹ – ಶಾಸಕ ಡಾ. ಮಂತರ್‌ ಗೌಡರಿಗೆ ಮನವಿ ಸಲ್ಲಿಸಿದ ನಿಯೋಗ..!

Share this post :

coorg buzz
ಸೋಮವಾರಪೇಟೆ :  ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುದಾನಿತ ಮತ್ತು ಸರ್ಕಾರಿ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕೊಡಗು ಜಿಲ್ಲಾ ಘಟಕ ಮತ್ತು ಕೊಡಗು ಜಿಲ್ಲಾ ಅನುದಾನಿತ ನೌಕರರ ಸಂಘದ ವತಿಯಿಂದ ಶಾಸಕ ಡಾ. ಮಂತರ್ ಗೌಡ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಸೋಮವಾರಪೇಟೆಯಲ್ಲಿ ಭೇಟಿಯಾದ ನಿಯೋಗ ತಮ್ಮ ಸಮಸ್ಯೆಗಳ ಕುರಿತು ಶಾಸಕರಿಗೆ ಮನವರಿಕೆ ಮಾಡಿಕೊಟ್ಟಿತು. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಜಿ. ಕುಮಾರ್ ಮಾತನಾಡಿ, ಪ್ರತಿ ವರ್ಷದಂತೆ ಕಳೆದ ಶೈಕ್ಷಣಿಕ ಸಾಲಿನಲ್ಲಿಯೂ ಕೊಡಗು ಜಿಲ್ಲಾ ಶಿಕ್ಷಕರು SSLC ಫಲಿತಾಂಶದಲ್ಲಿ ರಾಜ್ಯಕ್ಕೆ ೪ನೇ ಸ್ಥಾನ ತಂದುಕೊಟ್ಟು ಉತ್ತಮ ಸಾಧನೆ ತೋರಿದ್ದಾರೆ. ಆದರೆ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆ ಸ್ಪಂದಿಸದಿರುವುದು ಖೇದಕರ. ಸರ್ಕಾರಿ ಪ್ರೌಢಶಾಲೆಗಳಿಗೆ ಅನ್ವಯವಾಗದ ನಿಯಮ, ಅನುದಾನಿತ ಪ್ರೌಢಶಾಲೆಗಳಿಗೆ ಇದೆ. ಪ್ರತಿ ತರಗತಿಯಲ್ಲಿ ೨೫ ವಿದ್ಯಾರ್ಥಿಗಳು ಇರಬೇಕು ಎಂಬ ನಿಬಂಧನೆಯಿಂದಾಗಿ ಅನುದಾನಿತ ಶಾಲೆಗಳು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿವೆ. ಪರಿಣಾಮವಾಗಿ ಶೈಕ್ಷಣಿಕವಾಗಿ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿ, ಸುವರ್ಣಮಹೋತ್ಸವ ಆಚರಿಸಿರುವ ಶಾಲೆಗಳು ಮುಚ್ಚಲ್ಪಡುತ್ತಿವೆ. ಆದುದರಿಂದ ಅನುದಾನಿತ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಸಂಬಂಧಿಸಿದಂತೆ ಸರ್ಕಾರಿ ಪ್ರೌಢ ಶಾಲೆಗಳಿಗೆ ಇರುವ ನಿಯಮವನ್ನೇ ಅನ್ವಯಿಸಿ ಅನುದಾನಿತ ಶಾಲೆಗಳ ಅಸ್ತಿತ್ವವನ್ನು ಉಳಿಸಬೇಕು ಎಂದು ಆಗ್ರಹಿಸಿದರು.
ಪ್ರೌಢಶಾಲಾ ಸಹಶಿಕ್ಷಕರ ಸಂಘದ ಮಡಿಕೇರಿ ತಾಲೂಕು ಅಧ್ಯಕ್ಷ ಪಿ.ಎಸ್. ರವಿಕೃಷ್ಣ ಮಾತನಾಡಿ, ವಿದ್ಯಾರ್ಥಿಗಳ ದಾಖಲಾತಿಯ ಕೊರತೆಯಿಂದ ಅನುದಾನಿತ ಪ್ರೌಢಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಎದುರಾದಲ್ಲಿ ಅಂತಹ ಶಾಲೆಗಳ ಶಿಕ್ಷಕರನ್ನು ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶಾಶ್ವತವಾಗಿ ನಿಯೋಜಿಸಬೇಕು. ಇದರಿಂದ ಯಾವುದೇ ಆರ್ಥಿಕ ಹೊರೆ ಆಗುವುದಿಲ್ಲ. ಅನುದಾನಿತ ಶಾಲಾ ಶಿಕ್ಷಕರು ಶಾಲೆ ಮುಚ್ಚಿದ ಸಂದರ್ಭದಲ್ಲಿ ಬೇರೆ ಅನುದಾನಿತ ಶಾಲೆಗಳ ಆಡಳಿತ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ ತಂದು ಅಲ್ಲಿ ಸೇರಬೇಕೆಂಬ ಪ್ರಸಕ್ತ ಇರುವ ನಿಯಮದಿಂದ ಶಿಕ್ಷಕರ ಶೋಷಣೆ, ಸುಲಿಗೆ ನಡೆಯುತ್ತಿದೆ. ಇದನ್ನು ರದ್ದುಪಡಿಸಿ ಸರ್ಕಾರವೇ ಕೌನ್ಸಿಲಿಂಗ್ ಮೂಲಕ ಶಿಕ್ಷಕರ ಮರುಹಂಚಿಕೆ ಮಾಡಬೇಕು ಎಂದು ಮನವಿ ಮಾಡಿದರು.
ಅನುದಾನಿತ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಮಾತನಾಡಿ, ಅನುದಾನಿತ ಶಾಲಾ ಶಿಕ್ಷಕರಿಗೂ ಆರೋಗ್ಯ ಸಂಜೀವಿನಿ ಮತ್ತು NPS ಸೌಲಭ್ಯವನ್ನು ವಿಸ್ತರಿಸಬೇಕು. ಅನುದಾನಿತ ಪ್ರೌಢಶಾಲಾ ಶಿಕ್ಷಕರು, ಸಿಬ್ಬಂದಿಗೆ ಸರ್ಕಾರಿ ನೌಕರರಿಗೆ ಇರುವಂತೆ ಹಬ್ಬದ ಮುಂಗಡವನ್ನು ಹೆಚ್ಚಿಸಬೇಕು ಎಂದರು.
ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ರತ್ನಕುಮಾರ್, ಜಿಲ್ಲಾ ಖಜಾಂಚಿ ಎ.ಸಿ. ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಎಂ.ಎಸ್. ಮಹೇಂದ್ರ, ಜಿಲ್ಲಾ ಉಪಾಧ್ಯಕ್ಷ ಎನ್.ಕೆ. ಮಹಬೂಬ್ ಸಾಬ್, ವಿರಾಜಪೇಟೆ ತಾಲೂಕು ಅಧ್ಯಕ್ಷ ಕೃಷ್ಣ ಚೈತನ್ಯ, ನಿರ್ದೇಶಕರಾದ ಯಶವಂತ್ ಕುಮಾರ್, ಸತ್ಯನಾರಾಯಣ, ಶ್ರೀಕಾಂತ್, ಎನ್.ಪಿ. ಉಷಾ, ಸುಜಾತ, ಲೋಕೇಶ್, ಅನುದಾನಿತ ನೌಕರರ ಸಂಘದ ಮಡಿಕೇರಿ ತಾಲೂಕು ಅಧ್ಯಕ್ಷ ಕೆ.ಎಂ. ಶರತ್, ವಿರಾಜಪೇಟೆ ತಾಲೂಕು ಅಧ್ಯಕ್ಷ ಗಿಡ್ಡಯ್ಯ ಮುಂತಾದವರಿದ್ದರು.